ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರ ಪಾತ್ರದ ಚಿತ್ರಣ ಮತ್ತು ಚಿತ್ರದ ಕೆಲವು ದೃಶ್ಯಗಳು, ಕ್ಯಾಮೆರಾ ಆಂಗಲ್‌ಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ಮಹಿಳೆಯರನ್ನು ಅತಿಯಾಗಿ ಗ್ಲಾಮರೈಸ್ ಆಗಿ ಬಿಂಬಿಸಲಾಗಿದೆ ಎಂಬ ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತೆ, ಈ ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದ ಜಗಪತಿ ಬಾಬು ಅವರು ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತಿದ್ದಾರೆ.
ಆಕೆಗೆ ಮಾನಸಿಕವಾಗಿ ತೊಂದರೆ ಕೊಡಬಾರದು
ಜಾನ್ವಿ ಕಪೂರ್ ಅವರನ್ನು ಸಮರ್ಥಿಸಿಕೊಂಡಿರುವ ಜಗಪತಿ ಬಾಬು, "ಸಿನಿಮಾದ ಸೃಜನಶೀಲ ನಿರ್ಧಾರಗಳಿಗಾಗಿ ಕಲಾವಿದರನ್ನು ಟ್ರೋಲ್ ಮಾಡಬಾರದು. ಆ ಹುಡುಗಿ (ಜಾನ್ವಿ) ಕೇವಲ ನಿರ್ದೇಶಕರು ತನಗೆ ಏನು ಮಾಡಲು ಹೇಳಿದ್ದಾರೋ ಅದನ್ನಷ್ಟೇ ಮಾಡಿದ್ದಾಳೆ. ಕೆಲವೊಮ್ಮೆ ಅಂದುಕೊಂಡಿದ್ದು ಉಲ್ಟಾ ಆಗುತ್ತದೆ, ಅದು ಸಹಜ. ಈ ವಿಷಯದಲ್ಲಿ ನಾನು ಜಾನ್ವಿ ಕಪೂರ್ ಅವರನ್ನು ಬೆಂಬಲಿಸುತ್ತೇನೆ. ಅವಳನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಬಾರದು. ಜನರು ಅವಳನ್ನು ಟ್ರೋಲ್ ಮಾಡುವ ಮೂಲಕ ಮಾನಸಿಕವಾಗಿ ತೊಂದರೆ ಕೊಡಬಾರದು" ಎಂದು ಹೇಳಿದ್ದಾರೆ.
Janhvi Kapoor: 'ಪೆದ್ದಿ' ಚಿತ್ರದಲ್ಲಿ ಜಾನ್ವಿ ಪಾತ್ರಕ್ಕೆ ಅಗೌರವ! ಏನಿದು ಚರ್ಚೆ?
ಅಂಥ ಸೀನ್‌ಗಳು ಸಿನಿಮಾದಿಂದ ಕಟ್
ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ತೀವ್ರ ಆಕ್ರೋಶದ ನಡುವೆ, ನಿರ್ದೇಶಕ ಬುಚ್ಚಿಬಾಬು ಸಾನಾ ಅವರು ಇತ್ತೀಚೆಗೆ ಈ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಪ್ರೇಕ್ಷಕರಿಂದ ಆಕ್ಷೇಪ ವ್ಯಕ್ತವಾಗಿರುವ ದೃಶ್ಯಗಳನ್ನು ಸಿನಿಮಾದಿಂದ ಎಡಿಟ್ ಮಾಡಲಾಗುವುದು ಎಂದು ಖಚಿತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಧಿಕೃತ ಹೇಳಿಕೆ ಹಂಚಿಕೊಂಡಿರುವ ಬುಚ್ಚಿ ಬಾಬು ಸಾನಾ, "ಒಬ್ಬ ಸಿನಿಮಾ ನಿರ್ದೇಶಕನಾಗಿ ಸಿನಿಮಾ ಎಂಬುದು ಪ್ರೇಕ್ಷಕರನ್ನು ರಂಜಿಸಬೇಕು, ಪ್ರೇರೇಪಿಸಬೇಕು ಮತ್ತು ಅವರನ್ನು ತಲುಪಬೇಕು ಎಂದು ನಾನು ನಂಬುತ್ತೇನೆ. ಅದು ಎಂದಿಗೂ ಯಾರಿಗೂ ಮುಜುಗರ ಉಂಟುಮಾಡುವಂತೆ ಇರಬಾರದು. ‘ಪೆದ್ದಿ’ ಚಿತ್ರದ ಕೆಲವು ದೃಶ್ಯಗಳ ಕುರಿತು ಬಂದಿರುವ ಪ್ರತಿಕ್ರಿಯೆಗಳನ್ನು ನಾವು ಕೇಳಿದ್ದೇವೆ, ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತೆರೆಯ ಮೇಲೆ ಮತ್ತು ತೆರೆಯ ಹಿಂದೆ ನನಗೆ ಯಾವಾಗಲೂ ಮಹಿಳೆಯರ ಬಗ್ಗೆ ಅಪಾರ ಗೌರವವಿದೆ. ಯಾವುದೇ ಮಹಿಳಾ ಪಾತ್ರವನ್ನು ವಸ್ತುಪ್ರದರ್ಶನದಂತೆ ಬಿಂಬಿಸುವುದು ಅಥವಾ ಗೌರವ ಕಮ್ಮಿ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ" ಎಂದು ಹೇಳಿಕೊಂಡಿದ್ದಾರೆ. ಇನ್ನು ‘ಪೆದ್ದಿ’ ಚಿತ್ರದ ವಿವಾದದ ಕುರಿತು ನಟಿ ಜಾನ್ವಿ ಕಪೂರ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.