ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಜನಿಕಾಂತ್‌; ಪ್ರಧಾನಿ ಮೋದಿ ಅಭಿನಂದನೆ

Rajinikanth: ಮಾಸ್‌ ಚಿತ್ರಗಳ ಮಹಾರಾಜ ರಜನಿಕಾಂತ್‌ ಚಿತ್ರರಂಗ ಪ್ರವೇಶಿಸಿ ಬರೋಬ್ಬರಿ 50 ವರ್ಷ ಕಳೆದಿದೆ. ಈ ಅಪರೂಪದ ಸಾಧನೆಗೆ ಅವರಿಗೆ ಹಲವು ಗಣ್ಯರು ಅಭಿನಂದನೆ ಸಲ್ಲಿಸುತ್ತಿದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ದೆಹಲಿ: ಕಾಲಿವುಡ್‌ ಸೂಪರ್‌ ಸ್ಟಾರ್‌, ಮಾಸ್‌ ಚಿತ್ರಗಳಿಗೆ ಹೊಸದೊಂದು ಭಾಷ್ಯ ಬರೆದ ರಜನಿಕಾಂತ್‌ (Rajinikanth) ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಾರೆ. ರಜನಿಕಾಂತ್‌ ಬಣ್ಣ ಹಚ್ಚಿದ ಮೊದಲ ಸಿನಿಮಾ ತಮಿಳಿನ ʼಅಪೂರ್ವ ರಾಗಂಗಳ್‌ʼ (Apoorva Raagangal) 1975ರ ಆಗಸ್ಟ್‌ 15ರಂದು ರಿಲೀಸ್‌ ಆಗಿತ್ತು. ಅದಾಗಿ ಬರೋಬ್ಬರಿ 50 ವರ್ಷ ಕಳೆದಿದ್ದು, ರಜನಿಕಾಂತ್‌ ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡಿದ್ದಾರೆ. 74ರ ಈ ಇಳಿ ವಯಸ್ಸಿನಲ್ಲೂ ಬೇಡಿಕೆ ಕಾಯ್ದುಕೊಂಡಿದ್ದಾರೆ. ಆಗಸ್ಟ್‌ 14ರಂದು ಅವರು ನಟಿಸಿರುವ ʼಕೂಲಿʼ (Coolie) ಸಿನಿಮಾ ಬಿಡುಗಡೆಯಾಗಿದ್ದು, ವಿಶ್ವಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ ಬರೋಬ್ಬರಿ 151 ಕೋಟಿ ರೂ. ಬಾಚಿಕೊಂಡಿದೆ. ಇದರ ಜತೆಗೆ ಅವರು ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಹಿತ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ನರೇಂದ್ರ ಮೋದಿ ಅವರು ರಜನಿಕಾಂತ್‌ ಜತೆಗಿನ ಪೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದಾರೆ. ಚಿತ್ರ ಜಗತ್ತಿನಲ್ಲಿ 50 ವರ್ಷ ಪೂರೈಸಿರುವುದಕ್ಕೆ ಶ್ರೀ ರಜನೀಕಾಂತ್ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.



ಈ ಸುದ್ದಿಯನ್ನೂ ಓದಿ: Coolie-War 2 Collection: ಬಾಕ್ಸ್‌ ಆಫೀಸ್‌ನಲ್ಲಿ ʼಕೂಲಿʼ-ʼವಾರ್‌ 2' ಕದನ; ಮೊದಲ ದಿನವೇ ದಾಖಲೆ ಬರೆದ ರಜನಿಕಾಂತ್‌

ಮೋದಿ ಹೇಳಿದ್ದೇನು?

‘ʼಚಿತ್ರ ಜಗತ್ತಿನಲ್ಲಿ 50 ವರ್ಷ ಪೂರೈಸಿರುವುದಕ್ಕೆ ರಜನೀಕಾಂತ್ ಅವರಿಗೆ ಅಭಿನಂದನೆಗಳು. ಅವರ ವೈವಿಧ್ಯಮಯ ಪಾತ್ರಗಳು ವಿವಿಧ ತಲೆಮಾರುಗಳ ಕಾಲ ಜನರ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರಿವೆ. ಅವರ ಈ ಸಿನಿ ಪ್ರಯಾಣವು ಐತಿಹಾಸಿಕವಾದುದು. ಮುಂಬರುವ ದಿನಗಳಲ್ಲಿ ಅವರಿಗೆ ಇದೇ ರೀತಿಯ ಯಶಸ್ಸು ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ಹಾರೈಸುತ್ತೇನೆʼʼ ಎಂಬುದಾಗಿ ಬರೆದುಕೊಂಡಿದ್ದಾರೆ. ಇತ್ತ ರಜನಿಕಾಂತ್‌ ಕೂಡ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಮೋದಿ ಜತೆಗೆ ವಿವಿಧ ಚಿತ್ರರಂಗದ ಕಲಾವಿದರು, ಬೇರೆ ಬೇರೆ ರಂಗದ ಗಣ್ಯರು ರಜನಿಕಾಂತ್‌ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಭಾರತ ಮಾತ್ರವಲ್ಲ ಜಗತ್ತಿನಾದ್ಯಂತದ ಅಪಾರ ಅಭಿಮಾನಿಗಳು ಕೂಡ ಈ ಅಪರೂಪದ ಸಾಧನೆಗೆ ಶುಭ ಹಾರೈಸಿದ್ದಾರೆ.

74 ವರ್ಷದಲ್ಲಿಯೂ ಅತ್ಯಂತ ಬೇಡಿಕೆ ನಟ

ದಕ್ಷಿಣ ಭಾರತ ಮಾತ್ರವಲ್ಲ ಇಡೀ ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ರಜನಿಕಾಂತ್‌ ಹೆಸರು ಮುಂಚೂಣಿಯಲ್ಲಿದೆ. ಪ್ರತಿ ಸಿನಿಮಾಕ್ಕೂ ಕೋಟಿ ಕೋಟಿ ಸಂಭಾವನೆ ಪಡೆಯುವ ಅವರು ಈಗಲೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಸದ್ಯ ʼಕೂಲಿʼ ಚಿತ್ರ ದೇಶ-ವಿದೇಶಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರ ಜತೆಗೆ ರಜನಿಕಾಂತ್‌ ಅವರ ಹೆಸರು ಇನ್ನೂ ಹಲವು ಪ್ರಾಜೆಕ್ಟ್‌ನಲ್ಲಿ ಕೇಳಿ ಬಂದಿದೆ. ಈಗಾಗಲೇ ʼಜೈಲರ್‌ 2ʼ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದರು. ಈ ಮಧ್ಯೆ ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದು ಇನ್ನೂ ಅಂತೆ-ಕಂತೆಯ ರೂಪದಲ್ಲಿದ್ದು, ಅಧಿಕೃತ ಪ್ರಕರಣೆ ಇನ್ನಷ್ಟೇ ಹೊರ ಬೀಳಬೇಕಿದೆ.