ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಗೌರಿ ಕಲ್ಯಾಣ' ಸೀರಿಯಲ್‌ನಿಂದ ನಟ ನಿಖಿಲ್ ಔಟ್: ಅನಿಕೇತ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪ್ರಭಂಜನ್ ನಾಯ್ಡು!

ಕಲರ್ಸ್ ಕನ್ನಡ ವಾಹಿನಿಯ ‘ಗೌರಿ ಕಲ್ಯಾಣ’ ಧಾರಾವಾಹಿಯಿಂದ ಅನಿಕೇತ್ ಪಾತ್ರಧಾರಿ ನಟ ನಿಖಿಲ್ ಎನ್. ದಿಢೀರ್ ಹೊರನಡೆದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಆ ಪಾತ್ರಕ್ಕೆ 'ಶ್ರಾವಣಿ ಸುಬ್ರಹ್ಮಣ್ಯ' ಖ್ಯಾತಿಯ ಪ್ರಭಂಜನ್ ನಾಯ್ಡು ಬಣ್ಣ ಹಚ್ಚುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಸದ್ಯ ‘ಗೌರಿ ಕಲ್ಯಾಣ’ ಮುಂಚೂಣಿಯಲ್ಲಿದೆ. ರಾತ್ರಿ 8 ಗಂಟೆಯ ಪ್ರೈಮ್ ಟೈಮ್ ಸ್ಲಾಟ್‌ನಲ್ಲಿ ಮೂಡಿಬರುತ್ತಿರುವ ಈ ಸೀರಿಯಲ್, ಭರ್ಜರಿ ಟಿಆರ್‌ಪಿ (TRP) ಜೊತೆಗೆ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಸದ್ಯ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳು ಎದುರಾಗುತ್ತಿದ್ದು, ನಾಯಕನ ಸಹೋದರ 'ಅನಿಕೇತ್' ಪಾತ್ರದ ಸುತ್ತ ಸಂಚಿಕೆಗಳು ಸಾಗುತ್ತಿವೆ. ಆದರೆ, ಇದರ ನಡುವೆಯೇ ಧಾರಾವಾಹಿಯ ವೀಕ್ಷಕರಿಗೆಲ್ಲಾ ಒಂದು ಶಾಕಿಂಗ್ ಸುದ್ದಿ ಎದುರಾಗಿದೆ. ಅನಿಕೇತ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದ ನಟ ನಿಖಿಲ್ ಎನ್. ಅವರು ದಿಢೀರ್‌ ಅಂತ ‘ಗೌರಿ ಕಲ್ಯಾಣ’ ಧಾರಾವಾಹಿಯಿಂದ ಹೊರನಡೆದಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರ್ತಿದೆ ಹೊಸ ಧಾರಾವಾಹಿ ʻಅಗ್ನಿಸಾಕ್ಷಿʼ; ಹಳೆಯ ಹಿಟ್‌ ಸೀರಿಯಲ್‌ನ ಶೀರ್ಷಿಕೆಯನ್ನು ಪುನಃ ಬಳಸಿದ್ದೇಕೆ?

ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸುಳಿವು!

ಮೈಸೂರು ಮೂಲದ ನಿಖಿಲ್ ಅವರು ಮಾಡೆಲಿಂಗ್‌ ಕ್ಷೇತ್ರದಿಂದ ಕಿರುತೆರೆಗೆ ಕಾಲಿಟ್ಟ ಪ್ರತಿಭೆ. ‘ಮಿಸ್ಟರ್ ಮೈಸೂರು’ ಹಾಗೂ ‘ಮಿಸ್ಟರ್ ಕರ್ನಾಟಕ-2019’ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ನಿಖಿಲ್, ‘ಗೌರಿಕಲ್ಯಾಣ’ ಮತ್ತು ‘ಕೆಂಡಸಂಪಿಗೆ’ ಸೀರಿಯಲ್ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ನಮ್ರತಾ ಎಂಬುವವರನ್ನು ಮದುವೆಯಾಗಿರುವ ನಿಖಿಲ್, ಸದ್ಯ ʻಗೌರಿ ಕಲ್ಯಾಣʼ ಧಾರಾವಾಹಿ ತೊರೆದಿರುವ ಬಗ್ಗೆ ಅಧಿಕೃತ ಪ್ರಕಟಣೆ ನೀಡಿಲ್ಲ.

ಆದರೆ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "ದಟ್ಸ್ ಓಕೆ, ನಮ್ಮ ಲೈಫ್‌ನಲ್ಲಿ ಏನಾಗ್ತಿದೆ ನಮಗೆ ಗೊತ್ತಿಲ್ಲ..." ಎಂಬ ಹಾಡನ್ನು ಹಿನ್ನೆಲೆಯಲ್ಲಿ ಹಾಕಿಕೊಂಡು ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿರುವುದು ಅವರು ಸೀರಿಯಲ್‌ನಿಂದ ಹೊರಬಂದಿರುವುದಕ್ಕೆ ಸುಳಿವು ನೀಡಿದೆ.

ಕಲರ್ಸ್‌ ಕನ್ನಡದಲ್ಲಿ ದೊಡ್ಮನೆ ಹಬ್ಬದ ಮೆರುಗು; ಭರ್ಜರಿ ಮನರಂಜನೆ ನೀಡಲು ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳು ರೆಡಿ

ಅನಿಕೇತ್ ಪಾತ್ರಕ್ಕಾಗಿ ಬಂದ ಪ್ರಭಂಜನ್

ನಿಖಿಲ್ ಹೊರನಡೆದ ಬೆನ್ನಲ್ಲೇ ಅನಿಕೇತ್ ಪಾತ್ರಕ್ಕೆ ಇದೀಗ ಮತ್ತೊಬ್ಬ ಪ್ರತಿಭಾವಂತ ನಟ ಪ್ರಭಂಜನ್ ನಾಯ್ಡು (ವಿಹಾನ್ ಪ್ರಭಂಜನ್) ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ‘ಶ್ರಾವಣಿ ಸುಬ್ರಹ್ಮಣ್ಯ’ ಸೀರಿಯಲ್‌ನಲ್ಲಿ 'ವರದ' ಎಂಬ ನೆಗೆಟಿವ್ ಶೇಡ್ ಪಾತ್ರದ ಮೂಲಕ ವಿಹಾನ್ ಪ್ರಭಂಜನ್ ವೀಕ್ಷಕರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೆ, ನಟಿ ಸಂಗೀತಾ ಭಟ್ ಅಭಿನಯದ ‘ಖೇಲಾ’ ಎಂಬ ಚಿತ್ರದಲ್ಲೂ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಗೌರಿ ಕಲ್ಯಾಣ ಸೀರಿಯಲ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ರೋಚಕ ಘಟ್ಟದಲ್ಲಿ ಅನಿಕೇತ್ - ಮೋನಿಕಾ ಕಥೆ!

ಧಾರಾವಾಹಿಯ ಸದ್ಯದ ಕಥೆಯ ಪ್ರಕಾರ, ನಾಯಕಿ ಗೌರಿಯ ಅಕ್ಕ ಮೋನಿಕಾ, ದುರಾಸೆಯಿಂದ ತಾನು ಗರ್ಭಿಣಿ (ಬಸುರಿ) ಅಂತ ಸುಳ್ಳು ಹೇಳಿ ನಾಯಕ ವಿವೇಕ್‌ನ ತಮ್ಮ ಅನಿಕೇತ್‌ನನ್ನು ಮದುವೆಯಾಗಿದ್ದಾಳೆ. ಮೋನಿಕಾ ಆಡಿರುವ ಈ ಮಹಾ ಸುಳ್ಳು ಗೌರಿಗೆ ಗೊತ್ತಿದ್ದರೂ, ಅದು ಇಡೀ ಕುಟುಂಬದ ಮುಂದೆ ಇನ್ನೂ ಬಹಿರಂಗವಾಗಿಲ್ಲ. ಇಂತಹ ರೋಚಕ ತಿರುವಿನಲ್ಲಿ ಹೊಸ ಅನಿಕೇತ್ ರೂಪದಲ್ಲಿ ಎಂಟ್ರಿ ಕೊಡುತ್ತಿರುವ ಪ್ರಭಂಜನ್ ನಾಯ್ಡು ಅವರ ಪಾತ್ರ ಮುಂದೆ ಕಥೆಯನ್ನು ಹೇಗೆ ಕೊಂಡೊಯ್ಯಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ.

ಕೆ. ಎಸ್. ರಾಮ್‌ಜಿ ಅವರ ಅದ್ಧೂರಿ ನಿರ್ಮಾಣ ಹಾಗೂ ಭರತ್ ಕುಮಾರ್ ಎನ್. ಮೈಸೂರು ಅವರ ನಿರ್ದೇಶನದಲ್ಲಿ ‘ಗೌರಿ ಕಲ್ಯಾಣ’ ಮೂಡಿಬರುತ್ತಿದೆ. ಧಾರಾವಾಹಿಯಲ್ಲಿ ಕಥಾನಾಯಕಿ ಗೌರಿಯಾಗಿ ಶಿಲ್ಪಾ ಕಾಮತ್ ಜೀವ ತುಂಬುತ್ತಿದ್ದರೆ, ಮೋನಿಕಾ ಆಗಿ ರಕ್ಷಿತಾ, ಚಿನ್ಮಯಿ ಆಗಿ ದಿವ್ಯಾ ಹಾಗೂ ಕಾಂತಲಕ್ಷ್ಮಿ ಪಾತ್ರದಲ್ಲಿ ಹಿರಿಯ ನಟಿ ಸುಧಾ ಬೆಳವಾಡಿ ಸೇರಿದಂತೆ ದೊಡ್ಡ ತಾರಾಗಣವೇ ಈ ಸೀರಿಯಲ್‌ನಲ್ಲಿದೆ.