ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ‘ಫೌಜಿ’ ಚಿತ್ರವು ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ. ಪ್ರಭಾಸ್ ಅವರ ಜನ್ಮದಿನದ (ಅ.23) ಪ್ರಯುಕ್ತ ಬಿಡುಗಡೆಯಾದ ಚಿತ್ರದ ವಿಶೇಷ ಗ್ಲಿಂಪ್ಸ್‌ನಲ್ಲಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರವನ್ನು ತೋರಿಸಿರುವ ರೀತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ನೇತಾಜಿ ಅವರ ಸಹೋದರ ಶರತ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ಅವರು ಈ ಬಗ್ಗೆ ಕಿಡಿಕಾರಿದ್ದು, ಐತಿಹಾಸಿಕ ಸತ್ಯಗಳನ್ನು ತಿರುಚಿರುವುದಕ್ಕೆ ಚಿತ್ರದ ನಿರ್ದೇಶಕ ಹನು ರಾಘವಪುಡಿ ದೇಶದ ಜನತೆಯ ಮುಂದೆ ಬೇಷರತ್ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಿತ್ರತಂಡ ದುರುದ್ದೇಶದಿಂದಲೇ ಹೀಗೆ ಮಾಡಿದೆ
"ಬೆಳ್ಳಿತೆರೆಯ ಮೇಲೆ ರಾಷ್ಟ್ರೀಯ ನಾಯಕರನ್ನು ಚಿತ್ರಿಸುವಾಗ ನಿರ್ದೇಶಕರಿಗೆ ಕ್ರಿಯೇಟಿವ್ ಲಿಬರ್ಟಿ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ, ಅದು ಇತಿಹಾಸವನ್ನೇ ಬುಡಮೇಲು ಮಾಡುವ ಹಂತಕ್ಕೆ ಹೋಗಬಾರದು. ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ನಾಯಕರ ವ್ಯಕ್ತಿತ್ವವನ್ನು ಕಲ್ಪಿತ ದೃಶ್ಯಗಳ ಮೂಲಕ ವಿರೂಪಗೊಳಿಸುವುದು ಕಾನೂನು ಪ್ರಕಾರವೂ ಗಂಭೀರ ಅಪರಾಧವಾಗಿದೆ. ಚಿತ್ರತಂಡ ಕೇವಲ ಅಗ್ಗದ ಪ್ರಚಾರ ಮತ್ತು ವಿವಾದ ಸೃಷ್ಟಿಸುವ ದುರುದ್ದೇಶದಿಂದಲೇ ಇತಿಹಾಸಕ್ಕೆ ಅಪಚಾರವೆಸಗುವ ಇಂತಹ ದೃಶ್ಯಗಳನ್ನು ಹೆಣೆದಿದೆ" ಎಂದು ಚಂದ್ರಕುಮಾರ್ ಬೋಸ್ ಟೀಕಿಸಿದ್ದಾರೆ.
ಭಾರತದ ನಾಗರಿಕರಿಗೆ ನಿರ್ದೇಶಕರು ಉತ್ತರಿಸಬೇಕು
ನೇತಾಜಿ ಅಂತಾರಾಷ್ಟ್ರೀಯ ಮಟ್ಟದ ಮುತ್ಸದ್ದಿಯಾಗಿ ಬೆಳೆದುಬಂದ ಹಾದಿ ಹಾಗೂ ಅಡಾಲ್ಫ್ ಹಿಟ್ಲರ್ ಭೇಟಿಯ ಐತಿಹಾಸಿಕ ಹಿನ್ನೆಲೆಯನ್ನು ಚಿತ್ರದಲ್ಲಿ ಸಂಪೂರ್ಣ ತಪ್ಪಾಗಿ ಬಿಂಬಿಸಿ ಅವರ ಘನತೆಗೆ ಧಕ್ಕೆ ತರಲಾಗಿದೆ ಎಂದು ಬೋಸ್ ಕುಟುಂಬಸ್ಥರು ಬೇಸರ ಹೊರಹಾಕಿದ್ದಾರೆ. ಭಾರತದ ಮುಕ್ತಿಗೆ ಬಾಹ್ಯ ಬೆಂಬಲ ಅಗತ್ಯವೆಂಬ ರಾಜತಾಂತ್ರಿಕ ಕಾರಣಕ್ಕಾಗಿ ನೇತಾಜಿ ಸಮಾನ ಗೌರವದ ನೆಲೆಯಲ್ಲಿ ಹಿಟ್ಲರ್ ಅವರನ್ನು ಭೇಟಿಯಾಗಿದ್ದರೇ ಹೊರತು ಬೇರೇನೂ ಅಲ್ಲ. ನೇತಾಜಿ ಪ್ರಜಾಪ್ರಭುತ್ವದ ಕಟ್ಟಾ ಪ್ರತಿಪಾದಕರಾಗಿದ್ದರು ಮತ್ತು ಫ್ಯಾಸಿಸಂ ಸಿದ್ಧಾಂತವನ್ನು ತೀವ್ರವಾಗಿ ವಿರೋಧಿಸಿದ್ದರು. ಹೀಗಿರುವಾಗ ಸಿನಿಮಾದಲ್ಲಿ ಕಮರ್ಷಿಯಲ್ ದೃಷ್ಟಿಯಿಂದ ಇತಿಹಾಸದ ಸತ್ಯವನ್ನು ತಿರುಚುವುದು ಕಿಂಚಿತ್ತೂ ಸರಿಯಲ್ಲ ಎಂದಿರುವ ಅವರು, ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಗೌರವಿಸುವ ಪ್ರತಿಯೊಬ್ಬ ನಾಗರಿಕನಿಗೂ ನಿರ್ದೇಶಕರು ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Actor Prabhas : ಪ್ರಭಾಸ್ ಬರ್ತ್‌ಡೇ; 'ಫೌಜಿ' ಸಿನಿಮಾದಿಂದ ಔಟ್ ಆಯ್ತು ಸ್ಪೆಷಲ್ ಪೋಸ್ಟರ್!
ಆ ಲುಕ್ ನೇತಾಜಿಯಂತೆ ಇಲ್ಲ!
ಸೋಶಿಯಲ್ ಮೀಡಿಯಾದಲ್ಲೂ ‘ಫೌಜಿ’ ಗ್ಲಿಂಪ್ಸ್ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಚಿತ್ರದ ಕಾಲ್ಪನಿಕ ನಾಯಕನ ಪಾತ್ರವನ್ನು ವೈಭವೀಕರಿಸಲು ಸ್ವತಃ ನೇತಾಜಿಯವರನ್ನೇ ನಾಯಕನ ಗುಣಗಾನ ಮಾಡುವಂತೆ ತೋರಿಸಿರುವುದಕ್ಕೆ ಸಿನಿಪ್ರಿಯರು ಹಾಗೂ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಗ್ಲಿಂಪ್ಸ್‌ನಲ್ಲಿ ನೇತಾಜಿ ಪಾತ್ರಧಾರಿ ಮೇಕಪ್ ಮೇಲೂ ಭಾರೀ ಟೀಕೆಗಳು ವ್ಯಕ್ತವಾಗುತ್ತಿದ್ದು, ಕನಿಷ್ಠ ಮುನ್ನೆಚ್ಚರಿಕೆಯನ್ನೂ ವಹಿಸದೆ ರೂಪಿಸಿರುವ ಆ ಲುಕ್ ಸುಭಾಷ್ ಚಂದ್ರ ಬೋಸ್ ಅವರಂತೆ ಕಾಣುವ ಬದಲು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಂತೆ ಕಾಣುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡಲಾಗುತ್ತಿದೆ.
ಸಿನಿಮಾಟಿಕ್ ಲಿಬರ್ಟಿ ಹೆಸರಿನಲ್ಲಿ ಸ್ವಾತಂತ್ರ್ಯ ಸೇನಾನಿಗಳ ಹಿರಿಮೆಯನ್ನು ಹಗುರವಾಗಿ ಪರಿಗಣಿಸಬಾರದು ಎಂಬ ಮಾತು ಕೇಳಿಬರುತ್ತಿದ್ದು, ಈ ಗಂಭೀರ ವಿವಾದದ ಕುರಿತು ನಿರ್ದೇಶಕ ಹನು ರಾಘವಪುಡಿ ಹಾಗೂ ಚಿತ್ರತಂಡ ಯಾವ ರೀತಿಯ ಸ್ಪಷ್ಟನೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.