ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ'ಯಾಗುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಈ ಸಂಬಂಧ ದರ್ಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.
ಏನಿದು ಪ್ರಕರಣ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್, ತನಗೆ ಕ್ಷಮಾದಾನ ನೀಡಿ 'ಮಾಫಿ ಸಾಕ್ಷಿ'ಯಾಗಲು ಅವಕಾಶ ನೀಡುವಂತೆ ಕೋರಿ ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿ, ತಮ್ಮ ವಾದವನ್ನು ಆಲಿಸುವಂತೆ ನಟ ದರ್ಶನ್ 59ನೇ ಸಿಸಿಹೆಚ್ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ದರ್ಶನ್ ಅವರ ಈ ಕೋರಿಕೆಯನ್ನು ಕೆಳಹಂತದ ನ್ಯಾಯಾಲಯವು ತಿರಸ್ಕರಿಸಿತ್ತು. 59ನೇ ಸಿಸಿಹೆಚ್ ಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಹಾಗೂ ಅದಕ್ಕೆ ತಡೆ ನೀಡುವಂತೆ ಕೋರಿ ದರ್ಶನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ದರ್ಶನ್ ಪರ ವಕೀಲರ ವಾದವೇನಿತ್ತು?
ಗುರುವಾರ (ಆ.13) ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಹಾಜರಾಗಿ ವಾದ ಮಂಡಿಸಿದರು. "ಆರೋಪಿ ಪ್ರದೋಷ್ ಎರಡೂವರೆ ವರ್ಷಗಳ ವಿಚಾರಣೆ ಎದುರಿಸಿದ ನಂತರ ಈಗ ಕ್ಷಮಾಪಣೆ ಕೋರುತ್ತಿದ್ದಾನೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ದರ್ಶನ್ ಮತ್ತು ಇತರರನ್ನು ಪಕ್ಷಕಾರರನ್ನಾಗಿ ಮಾಡಬೇಕು. ಇಲ್ಲಿ ನೈಸರ್ಗಿಕ ನ್ಯಾಯದ ತತ್ವ ಪಾಲನೆಯಾಗಬೇಕು. ಆದೇಶವನ್ನು ಮರುಪರಿಶೀಲಿಸುವಂತೆ ಕೋರುವ ಅವಕಾಶವಿರುವಾಗ ನಮಗೂ ವಾದ ಮಂಡಿಸಲು ಅವಕಾಶ ನೀಡಬೇಕು" ಎಂದು ವಕೀಲರು ನ್ಯಾಯಪೀಠದ ಮುಂದೆ ಮನವಿ ಮಾಡಿದರು.
ಹೈಕೋರ್ಟ್ ಪೀಠದ ಖಡಕ್ ಪ್ರತಿಕ್ರಿಯೆ
ದರ್ಶನ್ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠವು, ಕೆಳಹಂತದ ನ್ಯಾಯಾಲಯದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವೇ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದೆ. "ಪ್ರದೋಷ್‌ಗೆ ಕ್ಷಮೆ ನೀಡಿದ ಮೇಲಷ್ಟೇ ನೀವು ಈ ವಿಷಯಗಳನ್ನು ಪ್ರಶ್ನಿಸಬಹುದು. ಇಲ್ಲಿ ಇನ್ನೂ ಕ್ಷಮೆಯನ್ನೇ ನೀಡಿಲ್ಲ. ಅಷ್ಟೇ ಅಲ್ಲದೆ, ಸಹ-ಆರೋಪಿಯೊಬ್ಬ ಮಾಫಿ ಸಾಕ್ಷಿಯಾಗುವ ವಿಚಾರದಲ್ಲಿ ಇತರ ಆರೋಪಿಗಳಿಗೆ ವಾದ ಮಂಡಿಸುವ ಅಧಿಕಾರವಿಲ್ಲ. ಕ್ಷಮೆ ನೀಡುವ ಮುನ್ನ ಸಹ-ಆರೋಪಿಗಳ ವಾದವನ್ನು ಕೇಳಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಒಂದಾದರೂ ತೀರ್ಪಿನ ಉದಾಹರಣೆ ನೀಡಲು ಸಾಧ್ಯವೇ?" ಎಂದು ವಕೀಲರನ್ನು ಪೀಠವು ಪ್ರಶ್ನಿಸಿತು.
ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖ
ಇದೇ ವೇಳೆ ವಿನಯ್ ಕುಲಕರ್ಣಿ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠ, ಸಹ-ಆರೋಪಿ ಮಾಫಿ ಸಾಕ್ಷಿಯಾಗುವ ವಿಚಾರದಲ್ಲಿ ಇತರ ಆರೋಪಿಗಳು ಮಧ್ಯಪ್ರವೇಶಿಸುವಂತಿಲ್ಲ ಎಂಬ ಅಂಶದ ಕುರಿತು ಆ ಪ್ರಕರಣದಲ್ಲಿ ಈಗಾಗಲೇ ತೀರ್ಮಾನವಾಗಿದೆ. ಹೈಕೋರ್ಟ್ ನೀಡಿದ್ದ ಆ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಒಪ್ಪಿದೆ ಎಂದು ನೆನಪಿಸಿತು. ಅಂತಿಮವಾಗಿ, "ನಿಮ್ಮ ವಾದವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದ ನ್ಯಾ. ಎಂ. ನಾಗಪ್ರಸನ್ನ ಅವರ ಪೀಠವು, 59ನೇ ಸಿಸಿಹೆಚ್ ಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ದರ್ಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಇತ್ಯರ್ಥಗೊಳಿಸಿತು.