ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲೂ ಹಿನ್ನಡೆ; ಪತಿ ಪರವಾಗಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ, ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್

Actor Darshan Case: ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. 14ನೇ ಆರೋಪಿ ಪ್ರದೋಷ್ ರಾವ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ 59ನೇ ಸಿಸಿಹೆಚ್ ಕೋರ್ಟ್ ಆದೇಶ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ವಜಾಗೊಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

59ನೇ ಸಿಸಿಹೆಚ್ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್‌ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ, ವಿಚಾರಣಾಧೀನ ನ್ಯಾಯಾಲಯದ ತೀರ್ಮಾನದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಮಹತ್ವದ ಆದೇಶ ಪ್ರಕಟಿಸಿದೆ.

ದರ್ಶನ್‌ ಪರ ವಕೀಲ ಹಷ್ಮತ್ ಪಾಷಾ ವಾದವೇನು?

ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವುದನ್ನು ವಿರೋಧಿಸಿ ವಿಜಯಲಕ್ಷ್ಮಿ ಅವರು ವಿಚಾರಣಾ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದರು. ಆದರೆ ವಿಚಾರಣಾ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ, "ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೂ ಮುನ್ನ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಸಿದ್ದಾನೆ. ನಿಯಮಗಳನ್ನು ಉಲ್ಲಂಘಿಸಿ ಬೇರೆ ಹೆಸರಿನಲ್ಲಿ ಪತ್ನಿಗೆ ಹಾಗೂ ನಾಲ್ಕನೇ ವ್ಯಕ್ತಿಗೆ ಕರೆ ಮಾಡಿ ಮಾತನಾಡಿದ್ದಾನೆ. ಆತನನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ನಟ ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ" ಎಂದು ನ್ಯಾಯಪೀಠದ ಗಮನಕ್ಕೆ ತಂದರು.

Actor Darshan: ದರ್ಶನ್‌ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಿಗೆ ಸೂಚನೆ

ಯಾವುದೇ ತಪ್ಪು ಹುಡುಕಲು ಸಾಧ್ಯವಿಲ್ಲ

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ವಿಚಾರಣಾ ನ್ಯಾಯಾಲಯದ ಆದೇಶವನ್ನು ಸಮರ್ಥಿಸಿಕೊಂಡರು. "ಪ್ರದೋಷ್ ಜೈಲಿನಿಂದ ಪತ್ನಿ ಜೊತೆ ಮಾತನಾಡಿದ್ದಾನೆ ಎಂದು ವಾದಿಸಲಾಗಿದೆಯಾದರೂ, ಆತನಿಗೆ ಮಾಫಿ ಸಾಕ್ಷಿ ಸ್ಥಾನಮಾನ ನೀಡಿರುವ ಆದೇಶ ಕಾನೂನುಬಾಹಿರ ಎನ್ನಲು ಯಾವುದೇ ಬಲವಾದ ಕಾರಣಗಳಿಲ್ಲ. ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾದ ಮರುದಿನವೇ ಪ್ರಾಸಿಕ್ಯೂಷನ್ ಒಪ್ಪಿಗೆ ಸೂಚಿಸಿದೆ. ಪ್ರಾಸಿಕ್ಯೂಷನ್‌ನ ಈ ಕ್ರಮದಲ್ಲಿ ಯಾವುದೇ ತಪ್ಪು ಹುಡುಕಲು ಸಾಧ್ಯವಿಲ್ಲ. ವಿಚಾರಣೆ ವೇಳೆ ದರ್ಶನ್ ಪರ ವಕೀಲರಿಗೆ ಪ್ರದೋಷ್‌ನನ್ನು ಕ್ರಾಸ್ ಎಗ್ಸಾಮಿನೇಷನ್ ನಡೆಸಿ ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳುವ ಪೂರ್ಣ ಕಾನೂನು ಸ್ವಾತಂತ್ರ್ಯ ಮತ್ತು ಹಕ್ಕಿದೆ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಇದೇ ವೇಳೆ ವಿಚಾರಣೆಯ ಗಂಭೀರತೆಯ ಕುರಿತು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, "ಒಂದು ವರ್ಷದೊಳಗೆ 60 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆಯೇ ನಿರ್ದೇಶನ ನೀಡಿದೆ. ಆದರೆ ನಾನಾ ಕಾರಣಗಳಿಂದ ವಿಚಾರಣೆ ವಿಳಂಬವಾಗುತ್ತಿದೆ. ನಟ ದರ್ಶನ್ ಸೆಲೆಬ್ರಿಟಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಆ ವಿಷಯ ಸಿಆರ್‌ಪಿಸಿ ಮತ್ತು ಐಪಿಸಿ ಕಾನೂನುಗಳಿಗೆ ಗೊತ್ತಿಲ್ಲ; ಕಾನೂನಿನ ಮುಂದೆ ಎಲ್ಲರೂ ಸಮಾನರು. ಆರೋಪಿ ಯಾವುದೇ ಹಿನ್ನೆಲೆಯುಳ್ಳವನಾಗಿದ್ದರೂ ನ್ಯಾಯಾಲಯ ಅತಿಯಾದ ಜಾಗರೂಕತೆ ಅಥವಾ ವಿಶೇಷ ರಿಯಾಯಿತಿ ತೋರುವ ಅಗತ್ಯವಿಲ್ಲ" ಎಂದು ಕಟುವಾಗಿ ನುಡಿದು, ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಅಂತಿಮವಾಗಿ ವಜಾಗೊಳಿಸಿತು.