ಸ್ಯಾಂಡಲ್‌ವುಡ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಇಂದು (ಜುಲೈ 7) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದ ಅಂಗವಾಗಿ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಪತಿಗೆ ಅತ್ಯಂತ ಕ್ಯೂಟ್ ಹಾಗೂ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ.
"ನೀವು ನನ್ನ ಜೀವನವನ್ನು ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ಸುಂದರವಾಗಿಸಿದ್ದೀರಿ" ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿರುವ ಪೋಸ್ಟ್ ಸದ್ಯ ಸಿನಿಪ್ರೇಕ್ಷಕರು ಹಾಗೂ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಲೈಕ್ಸ್ ಮತ್ತು ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.
Rishab Shetty: ಡಿವೈನ್ ಸ್ಟಾರ್ ಹುಟ್ಟುಹಬ್ಬ; ಎಷ್ಟೆಲ್ಲಾ ಬದಲಾಯ್ತು ನಟನ ಲೈಫು?
ನಿಮ್ಮ ಪ್ರೀತಿಯೇ ನನ್ನ ಬೆಳಕು
ಪತಿಯ ಹುಟ್ಟುಹಬ್ಬಕ್ಕೆ ವಿಶೇಷ ಸಾಲುಗಳನ್ನು ಬರೆದುಕೊಂಡಿರುವ ಪ್ರಗತಿ ಶೆಟ್ಟಿ, "ಪ್ರತಿದಿನವನ್ನು ಇನ್ನಷ್ಟು ಉಜ್ವಲಗೊಳಿಸುವ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ರಿಷಬ್ ಶೆಟ್ಟಿ. ನಿಮ್ಮ ಪ್ರೀತಿ ನನ್ನ ಬೆಳಕಾಗಿದೆ, ನನ್ನ ಶಾಂತಿಯಾಗಿದೆ. ಇಂದು ನಾನು ಏನಾಗಿದ್ದೇನೋ ಅದಕ್ಕೆ ನೀವೇ ಕಾರಣ ಮತ್ತು ನನ್ನನ್ನು ರೂಪಿಸಿದ ಆತ್ಮವಿಶ್ವಾಸದ ಮೂಲವಾಗಿದ್ದೀರಿ. ನನ್ನ ಸಂಗಾತಿಯಾಗಿ, ನನ್ನ ಅತ್ಯಂತ ದೊಡ್ಡ ಬೆಂಬಲವಾಗಿ ನಿಂತು, ನನ್ನ ಪುಟ್ಟ ಪ್ರಪಂಚವನ್ನು ಅಪಾರ ಸಾಧ್ಯತೆಗಳ ಅಂತ್ಯವಿಲ್ಲದ ಸಾಗರವಾಗಿ ಬದಲಾಯಿಸಿದ ಆಶೀರ್ವಾದ ನೀವು" ಎಂದು ಪತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ನೀವು ನೀವಾಗಿ ಇರುವುದಕ್ಕೆ ಧನ್ಯವಾದಗಳು
"ನಾವು ಒಟ್ಟಿಗೆ ಸಾಗಿಬಂದ ಹಾದಿಯನ್ನು ಹಿಂದಿರುಗಿ ನೋಡಿದಾಗ, ನಾವು ಹಂಚಿಕೊಂಡ ಪ್ರತಿಯೊಂದು ಕ್ಷಣವೂ ಮುದ್ದಾದ ನೆನಪುಗಳ ನಿಧಿಯಂತೆ ಕಾಣಿಸುತ್ತದೆ. ನಮ್ಮ ಪಯಣದಲ್ಲಿ ನಗು-ಕಣ್ಣೀರು ಇತ್ತು, ಸಂತೋಷ ಮತ್ತು ಭಿನ್ನಾಭಿಪ್ರಾಯಗಳೂ ಇದ್ದವು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿ ಯಾವಾಗಲೂ ಪರಸ್ಪರ ತಿಳುವಳಿಕೆ ಹಾಗೂ ಎಂದಿಗೂ ಮಾಸದ ಪ್ರೀತಿ ಇತ್ತು. ನೀವು ನೀವಾಗಿ ಇರುವುದಕ್ಕೆ ಧನ್ಯವಾದಗಳು. ಪದಗಳಲ್ಲಿ ಹೇಳಲು ಸಾಧ್ಯವಾಗದಷ್ಟು ನಾನು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಪ್ರಗತಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಪ್ರಗತಿ ಶೆಟ್ಟಿ ಹಂಚಿಕೊಂಡಿರುವ ಪೋಸ್ಟ್
ಪ್ರಗತಿ ಶೆಟ್ಟಿ ಅವರ ಈ ಪ್ರೀತಿಯ ಜನ್ಮದಿನದ ಶುಭಾಶಯಕ್ಕೆ ರಿಷಬ್ ಶೆಟ್ಟಿ ಅಭಿಮಾನಿಗಳು ಕೂಡ ಜಂಟಿಯಾಗಿ ಕಮೆಂಟ್ ಮಾಡುತ್ತಿದ್ದು, ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಕೋರುತ್ತಿದ್ದಾರೆ.