ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆ ಬೆನ್ನಲ್ಲೇ ನಟ ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡದ ನಡುವಿನ ಮುನಿಸು ಬಹಿರಂಗಗೊಂಡಿದೆ. ಈ ವಿವಾದದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರಜ್ವಲ್ ದೇವರಾಜ್, ತಮಗೆ ಬರಬೇಕಿದ್ದ ಸಂಭಾವನೆ ಬಾಕಿ ಇರುವ ಕಾರಣ ಹಾಗೂ ಟ್ರೈಲರ್‌ನಲ್ಲಿ ತಮ್ಮ ಧ್ವನಿಯನ್ನು ಬಳಸಿಕೊಳ್ಳದ ಕಾರಣ ಟ್ರೈಲರ್ ರಿಲೀಸ್ ಇವೆಂಟ್‌ಗೆ ಗೈರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ವಿವಾದಕ್ಕೆ ಅಸಲಿ ಕಾರಣವೇನು?
"ಸಿನಿಮಾಕ್ಕಾಗಿ ನನಗೆ ದೊಡ್ಡ ಮೊತ್ತದ ಸಂಭಾವನೆ ಬಾಕಿ ಇದೆ ಹಾಗೂ ಜಿಎಸ್‌ಟಿ ಪೇಮೆಂಟ್ ಕೂಡ ಬಾಕಿ ಇತ್ತು. ಇದನ್ನು ನೀಡಿದ ಬಳಿಕವಷ್ಟೇ ಡಬ್ಬಿಂಗ್ ಮಾಡಿಕೊಡುವುದಾಗಿ ಚಿತ್ರದ ನಿರ್ಮಾಪಕ ಗುರುದತ್ ಗಾಣಿಗ ಅವರಿಗೆ ತಿಳಿಸಿದ್ದೆ. ಕಳೆದ ವರ್ಷವಷ್ಟೇ ಪ್ರೊಡ್ಯೂಸರ್‌ಗಳ ಮೇಲಿನ ಪ್ರೀತಿ, ಬಾಂಧವ್ಯದಿಂದ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಸಂಭಾವನೆಯನ್ನು ಬಿಟ್ಟುಕೊಟ್ಟಿದ್ದೆ. ಆದರೆ ಎಲ್ಲ ಸಮಯದಲ್ಲಿಯೂ ಸಹಾಯ ಮಾಡಲು ನಮ್ಮ ಪರಿಸ್ಥಿತಿಯೂ ಚೆನ್ನಾಗಿರಬೇಕಲ್ಲವೇ? ಕಳೆದ ಮೂರು ವರ್ಷಗಳಿಂದ ಬೇರೆ ಯಾವುದೇ ಸಿನಿಮಾ ಮಾಡದೆ ಮನೆಯಲ್ಲೇ ಕೂತಿದ್ದೇನೆ. ಎಲ್ಲರಂತೆ ನನಗೂ ಫೈನಾನ್ಷಿಯಲ್ ಸಮಸ್ಯೆಗಳಿರುತ್ತವೆ. ಹೀಗಾಗಿ ಒಪ್ಪಿಕೊಂಡಿರುವ ಹಣ ನೀಡುವಂತೆ ಕೇಳಿದ್ದೆ. ಆದರೆ ಅವರು ಖಡಾಖಂಡಿತವಾಗಿ ಆಗುವುದಿಲ್ಲ ಎಂದಿದ್ದಲ್ಲದೆ, ಮಾತನಾಡಿದ ರೀತಿಯೂ ಬೇಸರ ತರಿಸಿತು" ಎಂದು ಪ್ರಜ್ವಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ರೈಲರ್‌ನಲ್ಲಿ ಧ್ವನಿ ಇಲ್ಲದ್ದಕ್ಕೆ ಬೇಸರ
ಚಿತ್ರರಂಗಕ್ಕೆ ಬಂದು ಮುಂದಿನ ವರ್ಷಕ್ಕೆ 20 ವರ್ಷ ತುಂಬಲಿರುವ ಪ್ರಜ್ವಲ್, ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ ಯಾವುದೇ ಬ್ಲಾಕ್ ಮಾರ್ಕ್ ಇಲ್ಲ. ಅದನ್ನು ಅವರೇ ಹೇಳಿಕೊಂಡಿದ್ದಾರೆ. "ಟ್ರೈಲರ್‌ನಲ್ಲಿ ನನ್ನ ಧ್ವನಿ ಬಳಸುತ್ತಿಲ್ಲ ಎಂಬ ಕನಿಷ್ಠ ಮಾಹಿತಿಯನ್ನೂ ನನಗೆ ನೀಡಿರಲಿಲ್ಲ. ಕಾಡಿಬೇಡಿ ನೆನ್ನೆ (ಜುಲೈ 6) ರಾತ್ರಿ ಟ್ರೈಲರ್ ತರಿಸಿಕೊಂಡು ನೋಡಿದಾಗ ನನ್ನ ಧ್ವನಿ ಇಲ್ಲದಿರುವುದು ಗೊತ್ತಾಯಿತು. ಮೊದಲೇ ಹೇಳಿದ್ದರೆ ರಿಲೀಸ್‌ಗೆ ಇನ್ನು ಸಮಯ ಇರುವುದರಿಂದ ಸಿನಿಮಾದ ಡಬ್ಬಿಂಗ್ ಆಮೇಲೆ ಮಾಡಬಹುದಾಗಿತ್ತು, ಕೇವಲ ಟ್ರೈಲರ್‌ಗಾದರೂ ಹೋಗಿ ಡಬ್ಬಿಂಗ್ ಮುಗಿಸಿಕೊಡುತ್ತಿದ್ದೆ. ಇದನ್ನು ಇದು ಇಷ್ಟೊಂದು ದೊಡ್ಡ ಸಮಸ್ಯೆ ಆಗುತ್ತಿರಲಿಲ್ಲ. ಈ ಹಿಂದೆ ಬಿಡುಗಡೆಯಾದ ಸಾಂಗ್‌ನಲ್ಲೂ ನನ್ನ ಧ್ವನಿ ಇರಲಿಲ್ಲ. ಟ್ರೈಲರ್‌ನಲ್ಲೂ ನನ್ನ ಧ್ವನಿ ಇಲ್ಲ ಎಂದು ತಿಳಿದ ಮೇಲೆಯೇ ನಾನು ಇವತ್ತಿನ ಇವೆಂಟ್‌ಗೆ ಹೋಗದಿರಲು ನಿರ್ಧರಿಸಿದೆ" ಎಂದು ಪ್ರಜ್ವಲ್ ದೇವರಾಜ್ ತಿಳಿಸಿದ್ದಾರೆ.
ರಾಜ್ ಬಿ. ಶೆಟ್ಟಿ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ
ಇದೇ ವೇಳೆ ಸಹನಟ ರಾಜ್ ಬಿ. ಶೆಟ್ಟಿ ಅವರೊಂದಿಗೆ ಮನಸ್ತಾಪ ಇರಬಹುದು ಎಂಬ ವದಂತಿಗಳನ್ನು ಪ್ರಜ್ವಲ್ ತಳ್ಳಿಹಾಕಿದ್ದಾರೆ. "ಚೌಕ ಸಿನಿಮಾದಲ್ಲಿ ನಾವು ನಾಲ್ಕು ಜನ ಹೀರೋಗಳು ಒಟ್ಟಿಗೆ ನಟಿಸಿರಲಿಲ್ಲವೇ? ಇವತ್ತಿಗೂ ನಾವೆಲ್ಲಾ ಚೆನ್ನಾಗೇ ಇದ್ದೇವೆ. ರಾಜ್ ಬಿ. ಶೆಟ್ಟಿ ಅವರು ಅದ್ಭುತ ಪ್ರತಿಭಾವಂತ ಹಾಗೂ ಅಮೇಜಿಂಗ್ ವ್ಯಕ್ತಿ. ಅವರ ಜೊತೆ ನನಗೇನು ಸಮಸ್ಯೆ ಇರಲು ಸಾಧ್ಯ? ನಮ್ಮ ಇಂಡಸ್ಟ್ರಿ ಮತ್ತು ಪ್ರೊಡ್ಯೂಸರ್ ಚೆನ್ನಾಗಿರಬೇಕು, ಎಲ್ಲರೂ ಜೊತೆಯಾಗಿ ಬೆಳೆಯಬೇಕು ಅಷ್ಟೇ ನನ್ನ ಆಸೆ" ಎಂದು ಪ್ರಜ್ವಲ್ ಸ್ಪಷ್ಟಪಡಿಸಿದ್ದಾರೆ.
ಮಗನ ಪರಿಸ್ಥಿತಿಗೆ ತಂದೆ ದೇವರಾಜ್ ಬೇಸರ
ಪ್ರಜ್ವಲ್ ಅವರ ಈ ಪರಿಸ್ಥಿತಿಗೆ ಅವರ ತಂದೆ, ಹಿರಿಯ ನಟ ದೇವರಾಜ್ ಕೂಡ ಬೇಸರ ವ್ಯಕ್ತಪಡಿಸಿದ್ದಾರಂತೆ. "ಪ್ರತಿ ಬಾರಿಯೂ ನೀನ್ಯಾಕೆ ಕೊನೆ ತನಕ ಇಷ್ಟೊಂದು ಹಣ ಬಿಟ್ಟುಕೊಡುತ್ತೀಯಾ? ಬೇರೆಯವರೆಲ್ಲಾ ತುಂಬಾ ಕಮ್ಮಿ ಹಣ ಬಿಡುತ್ತಾರೆ. ನೀನು ಡಬ್ಬಿಂಗ್ ಮಾಡಿ ಮುಗಿಸಿ ಬಂದ ಮೇಲೆ ಕೊನೆಗೆ ಇದೇ ರೀತಿ ಒದ್ದಾಡುತ್ತೀಯಾ. ನಿನ್ನನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ" ಎಂದು ತಂದೆ ದೇವರಾಜ್ ಬೇಸರದಿಂದ ಬುದ್ಧಿವಾದ ಹೇಳಿರುವುದಾಗಿ ಪ್ರಜ್ವಲ್ ದೇವರಾಜ್ ತಿಳಿಸಿದ್ದಾರೆ.