ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಳಿಯ ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರ ನೋಡಿ ಮಾವ ಪ್ರಕಾಶ್ ಪಡುಕೋಣೆ ಹೇಳಿದ್ದೇನು?

ಬಾಲಿವುಡ್‌ನ ಇತಿಹಾಸದಲ್ಲೇ 3000 ಕೋಟಿ ರೂ. ಗಳಿಸಿ ಅತಿ ದೊಡ್ಡ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿರುವ ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರವನ್ನು ಅವರ ಮಾವ ಪ್ರಕಾಶ್ ಪಡುಕೋಣೆ ವೀಕ್ಷಿಸಿ ವಿಮರ್ಶಿಸಿದ್ದಾರೆ. ಚಿತ್ರದಲ್ಲಿನ ಅತಿಯಾದ ಹಿಂಸಾಚಾರವನ್ನು ಹೊರತುಪಡಿಸಿ ಕಲಾವಿದರ ನಟನೆಯನ್ನು ಅವರು ಮುಕ್ತವಾಗಿ ಶ್ಲಾಘಿಸಿದ್ದಾರೆ.

ನಟ ರಣವೀರ್ ಸಿಂಗ್ ಅವರ 'ಧುರಂಧರ್' ಸರಣಿಯ ಸಿನಿಮಾಗಳು ದೊಡ್ಡ ದಾಖಲೆ ಬರೆದಿವೆ. ʻಧುರಂಧರ್‌ʼ ಹಿಂದಿ ಚಿತ್ರರಂಗದ ದಿಕ್ಕನ್ನು ಬದಲಾಯಿಸಿತು. ರಣವೀರ್‌ ಸಿಂಗ್‌ ಕರಿಯರ್‌ಗೂ ಹೊಸ ಮೈಲೇಜ್‌ ನೀಡಿತು. ಅಂದಹಾಗೆ, ಈಚೆಗಷ್ಟೇ ರಣವೀರ್‌ ಸಿಂಗ್‌ ಅವರ ಮಾವ, ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರು 'ಧುರಂಧರ್' ಚಿತ್ರವನ್ನು ವೀಕ್ಷಿಸಿದ್ದಾರೆ. ಜೊತೆಗೆ ಸಿನಿಮಾವನ್ನು ವಿಮರ್ಶೆ ಮಾಡಿರುವ ಅವರು, "ಈ ಚಿತ್ರದಲ್ಲಿ ಅತಿಯಾದ ಹಿಂಸಾಚಾರ ಇದೆ" ಎಂದಿದ್ದಾರೆ ಮತ್ತು ಕಲಾವಿದರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.

ಅತ್ಯಂತ ಅದ್ಭುತವಾಗಿ ಮೂಡಿಬಂದಿರುವ ಸಿನಿಮಾ

"ಧುರಂಧರ್ ಅತ್ಯಂತ ಶ್ರೇಷ್ಠ ಹಾಗೂ ಅದ್ಭುತ‌ ಸಿನಿಮಾ. ಪ್ರತಿಯೊಬ್ಬ ಕಲಾವಿದರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ನಮಗೆ ಚಿತ್ರದಲ್ಲಿ ಹಿಂಸಾಚಾರ ಕೊಂಚ ಅತಿಯಾಯಿತು ಎನಿಸಿತು, ಆದರೆ ಬಹುತೇಕ ಜನರಿಗೆ ಸಿನಿಮಾ ಇಷ್ಟವಾಗಿದೆ. ಹಾಗಾಗಿ ಪ್ರೇಕ್ಷಕರ ಆ ಒಪ್ಪಿಗೆಯೇ ಎಲ್ಲದಕ್ಕಿಂತ ಮುಖ್ಯ ಎಂದು ನಾನು ಭಾವಿಸುತ್ತೇನೆ" ಎಂದು ಪ್ರಕಾಶ್‌ ಪಡುಕೋಣೆ ಅವರು ಹೇಳಿದ್ದಾರೆ.

Dhurandhar: ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ದಿನ ಧುರಂಧರ್ ದಿ ರಿವೆಂಜ್ ಸ್ಟ್ರೀಮಿಂಗ್‌!

ಒಟ್ಟಿಗೆ ಪ್ರವಾಸ ಹೋಗುತ್ತೇವೆ

ಪ್ರಕಾಶ್ ಪಡುಕೋಣೆ ಅವರು ತಮ್ಮ ಅಳಿಯ ರಣವೀರ್‌ ಸಿಂಗ್‌ ಜೊತೆಗಿನ ಒಡನಾಟ ಹಾಗೂ ಪ್ರತಿ ವರ್ಷ ಇಡೀ ಕುಟುಂಬ ಹೇಗೆ ಒಟ್ಟಿಗೆ ಪ್ರವಾಸಕ್ಕೆ ಹೋಗುತ್ತದೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. "ನಾವು ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತೇವೆ. ನಿಜ ಹೇಳಬೇಕೆಂದರೆ, ಇಬ್ಬರ ಕುಟುಂಬಗಳೂ ತುಂಬಾ ಆಪ್ತವಾಗಿವೆ. ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ನಾವೆಲ್ಲರೂ ಒಟ್ಟಿಗೆ ರಜಾದಿನಗಳನ್ನು ಕಳೆಯಲು ಪ್ರವಾಸಕ್ಕೆ ಹೋಗುತ್ತೇವೆ" ಎಂದು ಹೇಳಿದ್ದಾರೆ.‌

ಕ್ರೀಡೆ ಬಗ್ಗೆ ರಣವೀರ್‌ ಸಿಂಗ್‌ಗೆ ಆಸಕ್ತಿ

"ನಮ್ಮಿಬ್ಬರ ನಡುವೆ ಸಾಕಷ್ಟು ಸಾಮಾನ್ಯ ಆಸಕ್ತಿಗಳಿವೆ, ಏಕೆಂದರೆ ರಣವೀರ್‌ಗೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಇದೆ. ಅವರು ನನ್ನೊಂದಿಗೆ ಯಾವಾಗಲೂ ಕ್ರೀಡೆಗಳ ಬಗ್ಗೆ ಮಾತನಾಡುತ್ತಿರುತ್ತಾರೆ ಹಾಗೂ ನಾನು ಅವರ ಬಳಿ ಚಿತ್ರರಂಗದ ವ್ಯವಹಾರ ಹೇಗಿರುತ್ತದೆ ಎಂದು ಕಲಿಯಲು ಸಿನಿಮಾಗಳ ಬಗ್ಗೆ ಕೇಳುತ್ತಿರುತ್ತೇನೆ. ಅವರೆಲ್ಲರೂ ಬ್ಯುಸಿಯಾಗಿರುವುದರಿಂದ ನಮಗೆ ಅಷ್ಟಾಗಿ ಸಮಯ ಸಿಗುವುದಿಲ್ಲ, ಆದರೆ ಸಿಕ್ಕ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಕುಳಿತು ಫುಟ್‌ಬಾಲ್ ಅಥವಾ ಕ್ರಿಕೆಟ್ ನೋಡಿ ಆನಂದಿಸುತ್ತೇವೆ. ರಣವೀರ್ 'ಅರ್ಸೆನಲ್' ತಂಡದ ಅಭಿಮಾನಿಯಾಗಿದ್ದರೆ, ನನ್ನ ಮಗಳು ಅನಿಷಾ ಪಡುಕೋಣೆ 'ಮ್ಯಾಂಚೆಸ್ಟರ್ ಯುನೈಟೆಡ್' ತಂಡದ ಫ್ಯಾನ್ ಆಗಿದ್ದಾಳೆ. ಹೀಗಾಗಿ ನಮ್ಮ ನಡುವೆ ಇಂತಹ ಸಾಮಾನ್ಯ ಆಸಕ್ತಿಗಳಿವೆ" ಎಂದು ಪ್ರಕಾಶ್‌ ಪಡುಕೋಣೆ ತಿಳಿಸಿದ್ದಾರೆ.

ಅಂದಹಾಗೆ, ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 1,800 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಈ ಫ್ರಾಂಚೈಸಿಯ ಒಟ್ಟು ಎರಡು ಚಿತ್ರಗಳಿಂದ ಬಾಕ್ಸ್ ಆಫೀಸ್‌ನಲ್ಲಿ 3,000 ಕೋಟಿಗೂ ಹೆಚ್ಚು ಹಣ ಗಳಿಕೆ ಆಗಿದ್ದು, ಇದು ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.