ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರಾವಳಿ ಸೊಗಡಿನ ‘ಮ್ಯಾರೇಜ್‌ ಪಾರ್ಟಿ’ ಟ್ರೇಲರ್‌ ರಿಲೀಸ್‌; ದೆವ್ವದ ಮದುವೆ, ಕಾಡೊಳಗಿನ ರಹಸ್ಯದ ಜೊತೆಗೆ ಭರ್ಜರಿ ಎಂಟರ್‌ಟೇನ್‌ಮೆಂಟ್‌!

ಚಯನ್‌ ಶೆಟ್ಟಿ ನಿರ್ದೇಶನ ಮಾಡಿರುವ ʻಮ್ಯಾರೇಜ್‌ ಪಾರ್ಟಿʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಇದೊಂದು ಪಕ್ಕಾ ಮನರಂಜನೆಯ ಸಿನಿಮಾ ಎಂಬುದು ಟ್ರೇಲರ್‌ ನೋಡಿದರೆ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಡಿಸೆಂಬರ್‌ 4ರಂದು ಈ ಸಿನಿಮಾವು ಗ್ರ್ಯಾಂಡ್‌ ಆಗಿ ತೆರೆಗೆ ಬರಲಿದೆ.

ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿ ಹಾಗೂ ಸೊಗಡನ್ನು ಹೊತ್ತು ತರುತ್ತಿರುವ ‘ಮ್ಯಾರೇಜ್ ಪಾರ್ಟಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಭರ್ಜರಿ ಮನರಂಜನೆಯ ಭರವಸೆ ಮೂಡಿಸಿದೆ. ಈ ಹಿಂದೆ ‘ಅಧಿಪತ್ರ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಚಯನ್ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಶ್ರೀ ವಾರಾಹಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ವಿ. ಬಂಡವಾಳ ಹೂಡಿದ್ದಾರೆ.

ಕರಾವಳಿ ಸೀಮೆಯ ರೋಚಕ ಕಥನ

ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಚಿತ್ರತಂಡ, ಇದೀಗ ಟ್ರೇಲರ್ ಮೂಲಕ ಸಿನಿಮಾದೊಳಗೆ ಇರುವ ರೋಚಕ ಅಂಶಗಳನ್ನು ಅನಾವರಣಗೊಳಿಸಿದೆ. ಡಿಸೆಂಬರ್ 4ರಂದು ಈ ಚಿತ್ರ ರಾಜ್ಯಾದ್ಯಂತ ಹಾಗೂ ಮಲಯಾಳಂ ಭಾಷೆಯಲ್ಲೂ ಏಕಕಾಲಕ್ಕೆ ತೆರೆಕಾಣಲಿದೆ. ಸಾಮಾನ್ಯವಾಗಿ ಕಡಲ ಕಿನಾರೆಯ ಹಿನ್ನೆಲೆಯಲ್ಲಿ ನಡೆಯುವ ಕಥೆಗಳೆಂದರೆ ಸಹಜವಾಗಿಯೇ ಕುತೂಹಲ ಹೆಚ್ಚು. ಆದರೆ, ‘ಮ್ಯಾರೇಜ್ ಪಾರ್ಟಿ’ ಚಿತ್ರದಲ್ಲಿ ಕರಾವಳಿ ಸೀಮೆಯ ಒಡಲಿನಲ್ಲಿ ಅಡಗಿರುವ ಮತ್ತೊಂದು ಭಿನ್ನ ಹಾಗೂ ರೋಚಕ ಕಥನವನ್ನು ಹೆಣೆಯಲಾಗಿದೆ ಎಂಬುದು ಟ್ರೇಲರ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕುತೂಹಲ ಕೆರಳಿಸುವ ಪ್ರೇತ ಕಲ್ಯಾಣ

ಮದುವೆ ಸಂಭ್ರಮದ ನಡುವೆ ಜನಮಾನಸದಲ್ಲಿ ಬೇರೂರಿರುವ ವಿಚಿತ್ರ ನಂಬಿಕೆಗಳು, ಅನಿರೀಕ್ಷಿತವಾಗಿ ಸಂಭವಿಸುವ ಒಂದು ಸಾವು, ಕುತೂಹಲ ಕೆರಳಿಸುವ ಪ್ರೇತ ಕಲ್ಯಾಣ ಮತ್ತು ಅಭೇದ್ಯ ಕಾಡೊಳಗಿನ ರಹಸ್ಯ... ಹೀಗೆ ಹಲವು ಎಳೆಗಳೊಂದಿಗೆ ಭರ್ಜರಿ ಹಾಸ್ಯದ ಲೇಪನವನ್ನು ಬೆರೆಸಿ ನಿರ್ದೇಶಕ ಚಯನ್ ಶೆಟ್ಟಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ʻಸು ಫ್ರಮ್‌ ಸೋʼ ಬಳಿಕ ಬರ್ತಿದೆ ಮತ್ತೊಂದು ಕರಾವಳಿ ಸೊಗಡಿನ ಹಾಸ್ಯ ಪ್ರಧಾನ ಸಿನಿಮಾ; ʻಮ್ಯಾರೇಜ್‌ ಪಾರ್ಟಿʼ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ? ‌

ಶ್ರೀಕಾಂತ್ ಅವರ ಛಾಯಾಗ್ರಹಣ ಕರಾವಳಿಯ ಸೌಂದರ್ಯ ಹಾಗೂ ನಿಗೂಢತೆಯನ್ನು ಸೆರೆಹಿಡಿದಿದೆ. ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ, ಪ್ರಮೋದ್ ಮರವಂತೆ ಹಾಗೂ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಈ ಚಿತ್ರಕ್ಕಿದೆ. ವಿಶೇಷವೆಂದರೆ, ‘ಸು ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಈ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ತಾರಾಗಣದಲ್ಲಿ ವಿನೀತ್ ಕುಮಾರ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಣಾಜೆ, ನವೀನ್ ಡಿ. ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿ.ಡಿ. ಸತೀಶ್, ಭೀಮ್ ರಾವ್ ವಾಸ್ಟರ್ ಸೇರಿದಂತೆ ಕರಾವಳಿಯ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಸದ್ಯ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ಮ್ಯಾರೇಜ್ ಪಾರ್ಟಿ’ ಡಿಸೆಂಬರ್ 4ರಂದು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.