ಸ್ಯಾಂಡಲ್‌ವುಡ್ ನಟ ಪ್ರಮೋದ್ ಈ ಹಿಂದೆ ತೆಲುಗಿನ ʻಸಲಾರ್ʼ ಸಿನಿಮಾದಲ್ಲಿ ಬಹುಮುಖ್ಯ ಪಾತ್ರ ಮಾಡಿ ಫೇಮಸ್ ಆಗಿದ್ದರು. ಹಾಗೆಯೇ, ನಟ, ನಿರ್ದೇಶಕ ರಮೇಶ್ ಇಂದಿರಾ ಅವರು ಕನ್ನಡದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸದ್ಯ ಈ ಇಬ್ಬರು ಪ್ರತಿಭಾವಂತ ಕಲಾವಿದರು ಸದ್ಯ ತೆಲುಗಿನ ಬಹುನಿರೀಕ್ಷಿತ ಸಿನಿಮಾ ʻಲೆನಿನ್ʼನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೇಲರ್‌ನಲ್ಲಿ ಈ ಇಬ್ಬರು ಕಲಾವಿದರು ಸಖತ್ ಹೈಲೈಟ್ ಆಗಿದಾರೆ.
ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ಮತ್ತು ಭಾಗ್ಯಶ್ರೀ ಬೋರ್ಸೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಲೆನಿನ್' ಚಿತ್ರವನ್ನು ‘ವಿನರೋ ಭಾಗ್ಯಮು ವಿಷ್ಣುಕಥಾ’ ಖ್ಯಾತಿಯ ಮುರಳಿ ಕಿಶೋರ್ ಅಬ್ಬೂರು ನಿರ್ದೇಶಿಸುತ್ತಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಮತ್ತು ಸೂರ್ಯದೇವರ ನಾಗವಂಶಿ ಜಂಟಿಯಾಗಿ ಹಣ ಹಾಕಿದ್ದು, ಈ ಚಿತ್ರವನ್ನು ಜುಲೈ 10ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈವರೆಗೂ ಅಖಿಲ್ ನಟಿಸಿರುವ ಯಾವ ಸಿನಿಮಾವು ದೊಡ್ಡ ಗೆಲುವು ಪಡೆದುಕೊಂಡಿಲ್ಲ. ಹಾಗಾಗಿ, ಈ ಚಿತ್ರದ ಮೇಲೆ ಇನ್ನಿಲ್ಲದಷ್ಟು ನಿರೀಕ್ಷೆ ಇದೆ. ಅಖಿಲ್ ಅವರಿಗೂ ಕೂಡ ಈ ಸಿನಿಮಾ ಬಹಳ ಮಹತ್ವದ್ದಾಗಿದೆ. ಇಂತಹ ಸಿನಿಮಾದಲ್ಲಿ ಪ್ರಮೋದ್ ಮತ್ತು ರಮೇಶ ಇಂದಿರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
Spark Movie: ʼಸ್ಪಾರ್ಕ್ʼ ಪೋಸ್ಟರ್ ವಿವಾದಕ್ಕೆ ತೆರೆ; ರಮೇಶ್ ಇಂದಿರಾ ಬಳಿ ಕ್ಷಮೆ ಕೋರಿದ ನಿರ್ದೇಶಕ
ಟ್ರೇಲರ್ ಹೇಗಿದೆ?
"ಇದು ಮಹಾಭಾರತ. ಚಿತ್ತೂರು ಜಿಲ್ಲೆಯಲ್ಲಿ ಪ್ರತಿ ವರ್ಷ ಅತ್ಯಂತ ಜವಾಬ್ದಾರಿಯಿಂದ 18 ದಿನಗಳ ಕಾಲ ದ್ರೌಪದಮ್ಮನನ್ನು ಆರಾಧಿಸುತ್ತಾರೆ" ಎಂಬ ನಾಗಾರ್ಜುನ ಅವರ ವಾಯ್ಸ್ ಓವರ್‌ನೊಂದಿಗೆ ಪ್ರಾರಂಭವಾಗುವ ‘ಲೆನಿನ್’ ಚಿತ್ರದ ಟ್ರೇಲರ್ 3 ನಿಮಿಷಗಳ ಅವಧಿಯದ್ದಾಗಿದೆ. ರಾಯಲಸೀಮೆಯ ಒಂದು ಪ್ರದೇಶ, ಅಲ್ಲಿನ ಪಾತ್ರಗಳು, ಒಂದು ಜಾತ್ರೆ, ಪ್ರೀತಿ, ಸ್ನೇಹ, ಎಮೋಷನ್, ರಿವೆಂಜ್.. ಹೀಗೆ ಹಂತ ಹಂತವಾಗಿ ಒಂದೊಂದನ್ನೇ ಪರಿಚಯಸಲಾಗಿದೆ. ಕಥೆ ಮುಂದುವರಿದಂತೆ ಒಂದೊಂದು ಪಾತ್ರವೂ ತನ್ನ ಬಣ್ಣವನ್ನು ಬದಲಾಯಿಸಲು ಪ್ರಾರಂಭಿಸುತ್ತದೆ ಎಂದು ಪಾತ್ರಗಳ ಸ್ವಭಾವ ಬದಲಾಗುವ ವಿಷಯವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ಅಖಿಲ್ ರಗಡ್ ಆಕ್ಷನ್ ಝಲಕ್
ಲೆನಿನ್ - ಭಾರತಿ ನಡುವಿನ ಬಲವಾದ ಪ್ರೇಮಕಥೆಯ ಜೊತೆಗೆ.. ಲೆನಿನ್ - ವಸಂತ್ ನಡುವಿನ ಸ್ನೇಹವನ್ನು ಪ್ರಮುಖವಾಗಿ ತೋರಿಸಲಾಗಿದೆ. ಹೀರೋ-ಹೀರೋಯಿನ್‌ಗೆ ಮದುವೆಯಾಗಿರುವುದನ್ನು ಸಹ ರಿವೀಲ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ''ನಿಮ್ಮ ಕಾಲು ಮುಗಿಯುತ್ತೇನೆ.. ಭಾರತಿಯನ್ನು ಬಿಟ್ಟುಬಿಡಿರೋ.. ಅವಳು ನನ್ನ ಪ್ರಾಣ'' ಎಂದು ಅಖಿಲ್ ಬೇಡಿಕೊಳ್ಳುವ ಪ್ರಮುಖ ಸನ್ನಿವೇಶ ಮತ್ತು ಸ್ನೇಹಿತನ ಪಾತ್ರಕ್ಕೆ ಚಾಕುವಿನಿಂದ ಇರಿಯುವ ಸೀನ್ ಅನ್ನು ತೋರಿಸಲಾಗಿದೆ. ಇದೇ ವೇಳೆ ಕುರುಕ್ಷೇತ್ರದ ಕೊನೆಯ ಘಟ್ಟ 'ವಿಶ್ವರೂಪಂ' ಎಂದು ಅಖಿಲ್ ಅವರ ರಗಡ್ ಆಕ್ಷನ್ ಝಲಕ್ ಅನ್ನು ಸ್ಯಾಂಪಲ್ ಆಗಿ ತೋರಿಸಿದ್ದಾರೆ.
ಲೆನಿನ್ ಟೈಟಲ್ ಏಕೆ?
ಸಂಗೀತ ನಿರ್ದೇಶಕ ತಮನ್ ಅವರ ಹಿನ್ನೆಲೆ ಸಂಗೀತ ಮತ್ತು ಮೇಕಿಂಗ್ ಪ್ರಮುಖ ಆಕರ್ಷಣೆಯಾಗಿವೆ. ಆದರೆ ರಾಯಲಸೀಮೆ ಹಿನ್ನೆಲೆಯಲ್ಲಿ.. ಮಹಾಭಾರತ, ಕುರುಕ್ಷೇತ್ರ ಎಂದು ಹೇಳಿ ಕ್ರಾಂತಿಕಾರಿ 'ಲೆನಿನ್' ಹೆಸರನ್ನು ಶೀರ್ಷಿಕೆಯಾಗಿ ಏಕೆ ಇಟ್ಟಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಬಹುಶಃ ಇದರ ಹಿಂದೆ ಏನಾದರೂ ಫ್ಲ್ಯಾಶ್‌ಬ್ಯಾಕ್ ಕಥೆ ಇರಬಹುದಾ? ಗೊತ್ತಿಲ್ಲ.
ಅಖಿಲ್ ಮಾಸ್ ಪಾತ್ರದಲ್ಲಿ ಮಿಂಚಿದ್ದಾರೆ. ಲವರ್ ಬಾಯ್ ಇಮೇಜ್ ಪಕ್ಕಕ್ಕಿಟ್ಟು, ಕಂಪ್ಲೀಟ್ ಮಾಸ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಶಿವಾಜಿ, ರಾಮ್ಕಿ, ಈಶ್ವರಿ ರಾವ್, ಬ್ರಹ್ಮಾಜಿ, ಗೆಟಪ್ ಶ್ರೀನು, ಪ್ರವೀಣ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲಿಯೋನೆಲ್ ಬ್ರಿಟ್ಟೋ ಛಾಯಾಗ್ರಹಣ ಮಾಡಿದ್ದು, ಅವಿನಾಶ್ ಕೊಲ್ಲ ಪ್ರೊಡಕ್ಷನ್ ಡಿಸೈನಿಂಗ್ ಮಾಡಿದ್ದಾರೆ. ನವೀನ್ ನೂಲಿ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.