ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉತ್ತರ ಕರ್ನಾಟಕ ಸೊಗಡಿನ ʻಹುಬ್ಬಳ್ಳಿ ಹಂಟರ್ಸ್ʼ ಚಿತ್ರದ ಫಸ್ಟ್‌ ಸಾಂಗ್ ರಿಲೀಸ್‌ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ‌

ʻಹುಬ್ಬಳ್ಳಿ ಹಂಟರ್ಸ್‌ʼ ಸಿನಿಮಾದ ಮೊದಲ ಹಾಡನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ರಿಲೀಸ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟ ಪ್ರಮೋದ್ ಶೆಟ್ಟಿ ‘ಪಾಂಡು ಅಣ್ಣ’ನಾಗಿ ಮಿಂಚಿದ್ದು, ಡಿಸೆಂಬರ್ 11ರಂದು ಈ ಸಿನಿಮಾ ತೆರೆಗೆ ಬರಲಿದೆ.

ಉತ್ತರ ಕರ್ನಾಟಕದ ಸೊಗಡಿನ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಮೊದಲು ಹಾಡು ‘ಹುಬ್ಬಳ್ಳಿ ದ ಜಾದು..’ ರಿಲೀಸ್‌ ಆಗಿದೆ. ‘ರಿಷಬ್ ಶೆಟ್ಟಿ ಈ ಮಾಸ್‌ ಸಾಂಗ್‌ ಅನ್ನು ಮಾಜಿ ಸಂಸದ ಪ್ರತಾಪ್ ಸಿಂಹ ರಿಲೀಸ್‌ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಪ್ರಸನ್ನ ಕೇಶವ ಕೆ.ಎಸ್. ಸಂಗೀತ ಸಂಯೋಜಿಸಿರುವ ಈ ಹಾಡಿಗೆ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಬರೆದಿದ್ದು, ಗಾಯಕ ವ್ಯಾಸರಾಜ್ ಸೋಸಲೆ ಧ್ವನಿಯಲ್ಲಿ ಈ ಸಾಂಗ್‌ ಮೂಡಿಬಂದಿದೆ.

ಪ್ರತಾಪ್‌ ಸಿಂಹ ಏನಂದ್ರು?

"ನಾನು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲದಿಂದಲೂ ಉತ್ತರ ಕರ್ನಾಟಕದ ಜನರ ಜೊತೆ ಒಡನಾಟ ಹೊಂದಿದ್ದೇನೆ. ಹಾಗಾಗಿ, ಅಲ್ಲಿನ ಭಾಷೆ, ಅದರ ಶೈಲಿ ಹಾಗೂ ಬೈಗುಳಗಳು ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತವೆ. ಅಲ್ಲಿನ ಬೈಗುಳಗಳಲ್ಲೂ ಒಂದು ರೀತಿಯ ಮುಗ್ಧತೆ ಹಾಗೂ ಅಕ್ಕರೆ ಇರುತ್ತದೆ. ಉತ್ತರ ಕರ್ನಾಟಕದ ಭಾಷೆ ನೇರವಾಗಿ ಮನಸ್ಸಿಗೆ ತಟ್ಟುವಂತಹ ಅಪರೂಪದ ಆಪ್ತತೆಯನ್ನು ಹೊಂದಿದೆ. ಈ ಚಿತ್ರದ ಮೂಲಕ ಆ ಭಾಷೆಯ ಸೊಗಡು ಇಡೀ ಕರ್ನಾಟಕದ ಜನರನ್ನು ತಲುಪಲಿ ಹಾಗೂ ಸಿನಿಮಾ ದೊಡ್ಡ ಯಶಸ್ಸು ಕಾಣಲಿ" ಎಂದು ಪ್ರತಾಪ್ ಸಿಂಹ ಹಾರೈಸಿದರು.

ಸಂಂಪೂರ್ಣ ಉತ್ತರ ಕರ್ನಾಟಕ ಸ್ಲ್ಯಾಂಗ್‌ನ ಸಿನಿಮಾ

‘ಹುಬ್ಬಳ್ಳಿ ಹಂಟರ್ಸ್’ ಚಿತ್ರದಲ್ಲಿ 'ಪಾಂಡು ಅಣ್ಣ' ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಖ್ಯಾತ ನಟ ಪ್ರಮೋದ್ ಶೆಟ್ಟಿ ಚಿತ್ರದ ಭಾಷಾ ಪ್ರಯೋಗದ ಬಗ್ಗೆ ಮಾತನಾಡುತ್ತಾ, "ಇದು ಸಂಪೂರ್ಣ ಮನರಂಜನೆಯಿಂದ ಕೂಡಿದ, ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಸಿನಿಮಾ. ಆರಂಭದಲ್ಲಿ ಕಥೆ ಕೇಳಿದಾಗ, ಇಡೀ ಚಿತ್ರವನ್ನು ಉತ್ತರ ಕರ್ನಾಟಕ ಸ್ಲ್ಯಾಂಗ್‌ನಲ್ಲೇ ಮಾಡಬೇಕೇ ಅಥವಾ ಬೆಂಗಳೂರು ಕನ್ನಡವನ್ನೂ ಬೆರೆಸಬೇಕೇ ಎಂಬ ಬಗ್ಗೆ ನಿರ್ದೇಶಕ ಸಮರ್ಥ್ ಮತ್ತು ನಿರ್ಮಾಪಕರ ಜೊತೆ ಸಾಕಷ್ಟು ಚರ್ಚೆ ನಡೆಯಿತು. ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಕೆಲವರಿಗಿತ್ತು. ಆದರೆ, ಹಿಂದೆ ಕರಾವಳಿ ಕನ್ನಡ ಕೇವಲ ಹಾಸ್ಯಕ್ಕೆ ಸೀಮಿತವಾಗಿದ್ದು, ಇಂದು ಅದೇ ಭಾಷೆಯ ಸಿನಿಮಾಗಳನ್ನು ಕನ್ನಡಿಗರು ಮುಗಿಬಿದ್ದು ನೋಡುತ್ತಿರುವುದನ್ನು ಉದಾಹರಣೆಯಾಗಿ ನೀಡಿ ಹಠ ಹಿಡಿದು ಪೂರ್ಣ ಪ್ರಮಾಣದಲ್ಲಿ ಉತ್ತರ ಕರ್ನಾಟಕದ ಶೈಲಿಯಲ್ಲೇ ಸಿನಿಮಾ ಮಾಡಲು ಒಪ್ಪಿಸಿದೆ" ಎಂದು ಹೇಳಿದರು.

ʻಬೆಲ್‌ ಬಾಟಂʼ ನಿರ್ಮಾಪಕರ ಸಿನಿಮಾ

ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ʻಬೆಲ್‌ ಬಾಟಂʼ ಖ್ಯಾತಿಯ ಸಂತೋಷ್ ಕುಮಾರ್ ಕೆ.ಸಿ. ನಿರ್ಮಿಸಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೋಳ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿರುವ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್ಸ್‌ ತಂಡವೊಂದು ಈ ಸಿನಿಮಾದ ಮೂಲಕ ಹಿರಿತೆರೆಯಲ್ಲಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿದೆ.

ಪ್ರಧಾನಿ ವಿರುದ್ಧದ ಸಿಜೆಪಿ ಪ್ರತಿಭಟನೆ ಕಾಂಗ್ರೆಸ್‌ನ ಕುತಂತ್ರ: ಮಾಜಿ ಸಂಸದ ಪ್ರತಾಪ್‌ ಸಿಂಹ

ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ನಮನ್ ಅರೋರ, ಚೇತನ್ ಮಾರಂಬೀಡ್, ಪವನ್ ಕೃಷ್ಣರಾವ್ ಕುಲಕರ್ಣಿ, ಸುಮಿತ್ ಸಂಕೋಜಿ, ಧನ್ಯಶ್ರೀ ಸುಜಿತ್, ದೀಪಕ್ ರಾವ್, ಶಿವು ಎನ್.ಜಿ., ವನು ಪಾಟೀಲ್, ಪವನ್ ಆನೆಗೇರಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಮೇಶ್ ಭಟ್, ವಿನಯ್ ದೊಡ್ಡಮನಿ ಸೇರಿದಂತೆ ದೊಡ್ಡ ತಾರಾಗಣವಿದೆ.

ಡಿಸೆಂಬರ್ 11ರಂದು ‘ಹುಬ್ಬಳ್ಳಿ ಹಂಟರ್ಸ್’ ರಿಲೀಸ್

ಧಾರವಾಡ ಮತ್ತು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವರ್ ಹಾಗೂ ಚೇತನ್ ಮರಂಬೀದ್ ಸಂಭಾಷಣೆ ಹೆಣೆದಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಪ್ರಸನ್ನ ಕೇಶವ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಕೂಡ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸದ್ಯ ಮೊದಲ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರತಂಡ, ಶೀಘ್ರದಲ್ಲೇ ಟೀಸರ್ ಹಾಗೂ ಉಳಿದ ಹಾಡುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಸಿನಿಮಾವು ಡಿಸೆಂಬರ್ 11ರಂದು ತೆರೆಕಾಣಲಿದೆ.