ದಿಢೀರ್ ಅಂತ ಪ್ರತ್ಯಕ್ಷವಾಗಿರುವ ನಟ ದರ್ಶನ್ ಅವರ ಮ್ಯಾನೇಜರ್ ಮಲ್ಲಿಕಾರ್ಜುನ್. ಬಿ. ಸಂಕನಗೌಡರ್, ಮಾಧ್ಯಮಗಳ ಎದುರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ʻಪ್ರೇಮ ಬರಹʼ ಸಿನಿಮಾದ ವಿತರಣೆ ವೇಳೆ ಉಂಟಾದ ವಿವಾದವೇನು ಎಂಬುದನ್ನು ಹೇಳಿಕೊಂಡಿದ್ದರು. ಅರ್ಜುನ್ ಸರ್ಜಾ ನಿರ್ಮಾಣದ ʻಪ್ರೇಮ ಬರಹʼ ವಿತರಣೆ ಮಾಡಿದ್ಮೇಲೆ ಮಲ್ಲಿಕಾರ್ಜುನ್ ಮೇಲೆ ಸಾಕಷ್ಟು ಅಪವಾದಗಳು ಕೇಳಿಬಂದಿದ್ದವು.
ಅದೆಲ್ಲದಕ್ಕೂ ಸ್ಪಷ್ಟನೆ ನೀಡಿದ್ದ ಮಲ್ಲಿಕಾರ್ಜುನ್, ಅಕೌಂಟೆಂಟ್ ಮಾಡಿದ ಟೈಪಿಂಗ್ ಮಿಸ್ಟೇಕ್‌ನಿಂದ ಕೆಲವೊಂದು ಸಮಸ್ಯೆಗಳು ಬಂದವು ಎಂಬರ್ಥದಲ್ಲಿ ಮಾತನಾಡಿದ್ದರು. ಇದೀಗ ಆ ಬಗ್ಗೆ ಅಂದು ತೂಗುದೀಪ ಡಿಸ್ಟ್ರಿಬ್ಯೂಷನ್‌ನ ಅಕೌಂಟೆಂಟ್ ಆಗಿದ್ದ ದೀಪಕ್ ಗಂಗಾಧರ್ ಸ್ಪಷ್ಟನೆ ನೀಡಿದ್ದಾರೆ.
"ತೂಗುದೀಪ ನಿರ್ಮಾಣ ಸಂಸ್ಥೆಯಲ್ಲಿ ಮಲ್ಲಿಕಾರ್ಜುನ ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಬೇರೆಯವರೆಲ್ಲಾ ಕೇವಲ ನಾಮಕಾವಸ್ತೆಗೆ ಇದ್ದರಷ್ಟೇ. ಥಿಯೇಟರ್ ಬಾಡಿಗೆ, ಪರ್ಸೆಂಟೆಜ್ ಸೇರಿದಂತೆ ಎಲ್ಲಾ ಹಣಕಾಸಿನ ವ್ಯವಹಾರ ಅವರ ಕೈಯಲ್ಲಿತ್ತು. ಅವರು ಹೇಳಿದಂತೆ ನಾನು ಲೆಕ್ಕ ಬರೆದುಕೊಟ್ಟೆ, ಅದನ್ನೇ ಅವರು ಅರ್ಜುನ್ ಸರ್ಜಾ ಅವರಿಗೆ ಕೊಟ್ಟರು. ಅರ್ಜುನ್ ಸರ್ಜಾ ಅವರು ಹೇಳಿದ ಬಳಿಕ ಮತ್ತೆ ಲೆಕ್ಕ ಬದಲಾಯಿಸಿದ್ದು ಸಹ ನಿಜ. ಆದರೆ ನಾನು ಲೆಕ್ಕ ಬರೆದೆ ಎಂಬುದು ಸುಳ್ಳು" ಎಂದು ದೀಪಕ್ ಹೇಳಿದ್ದಾರೆ.
"ತೂಗುದೀಪ ಸಂಸ್ಥೆಯಲ್ಲಿ ನಾನು 2013 ರಿಂದ 2018ರ ವರೆಗೆ ಸುಮಾರು ಐದು ವರ್ಷ ಅಕೌಂಟೆಂಟ್ ಆಗಿ ಕೆಲಸ ಮಾಡಿದ್ದೆ. ಮಲ್ಲಿಕಾರ್ಜುನ್ ಅವರೇ ಎಲ್ಲಾ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದರು. ಅವರು ಹೇಳಿದಂತೆ ಎಲ್ಲರೂ ಕೇಳಬೇಕಿತ್ತು. ನಮ್ಮ ತಪ್ಪಿನಿಂದ, ನನ್ನ ಟೈಪಿಂಗ್ ಮಿಸ್ಟೇಕ್‌ನಿಂದ ಹೀಗಾಯ್ತು ಅಂತ ಮಲ್ಲಿಕಾರ್ಜುನ್ ಹೇಳುತ್ತಿದ್ದಾರೆ, ಅದು ಸುಳ್ಳು. ಏನು ಆಗಿದೆಯೋ, ಅದೆಲ್ಲವನ್ನು ಮಲ್ಲಿಕಾರ್ಜುನ್ ಅವರೇ ಮಾಡಿದ್ದು" ಎಂದು ದೀಪಕ್ ಗಂಗಾಧರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿಂಪತಿ ಗಿಟ್ಟಿಸಿಕೊಳ್ಳುವ ಭರದಲ್ಲಿ ಹೀಗೆ ಹೇಳಿದ್ರಾ?
ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿರುವ ದೀಪಕ್, "ದರ್ಶನ್ ರವರ ಮಾಜಿ ಮ್ಯಾನೇಜರ್ ಆಗಿದ್ದ ಸುಮಾರು 7 ವರ್ಷಗಳಿಂದ ನಾಪತ್ತೆಯಾಗಿದ್ದ ಶ್ರೀ ಮಲ್ಲಿಕಾರ್ಜುನ ಬಿ. ಸಂಕನಗೌಡರವರು ದಿನಾಂಕ 16.04.2026 ರಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ನಿಂದ ವಿತರಣೆ ಗೊಂಡಿದ್ದ ಅರ್ಜುನ್ ಸರ್ಜಾ ನಿರ್ಮಾಣದ 'ಪ್ರೇಮ ಬರಹ' ಚಿತ್ರದ ಅಕೌಂಟ್ ಕ್ಯಾಲ್ಕುಲೇಷನ್ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿರುತ್ತಾರೆ. ಆ ಸಂದರ್ಭದಲ್ಲಿ ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ನ ಅಕೌಂಟೆಂಟ್ ಆದ ದೀಪಕ್ ಅವರು ಅಕೌಂಟ್ ಎಂಟ್ರಿ ಮಾಡುವಾಗ ಸಣ್ಣ ಟೈಪಿಂಗ್ ಮಿಸ್ಟೇಕ್ ಮಾಡಿದ್ದರು ಎಂದು ಸಿಂಪತಿ ಗಿಟ್ಟಿಸಿಕೊಳ್ಳುವ ಭರದಲ್ಲಿ ಮಲ್ಲಿಕಾರ್ಜುನ್ ಅವರು ಹೇಳಿರುತ್ತಾರೆ"
ಎಲ್ಲಾ ನಿರ್ಧಾರ ಮಲ್ಲಿಕಾರ್ಜುನ್ ಮಾಡುತ್ತಿದ್ದರು
"ಇದು ಸತ್ಯಕ್ಕೆ ದೂರವಾದ ಮಾತಾಗಿರುತ್ತದೆ. ಚಿತ್ರಮಂದಿರಗಳ ರೆಂಟ್, ಪರ್ಸಂಟೇಜ್ ಇತ್ಯಾದಿಗಳನ್ನು ನಿರ್ಧರಿಸಿ ಎಂಟ್ರಿ ಮಾಡಿಸಿದವರು ಮಲ್ಲಿಕಾರ್ಜುನ್ ಅವರೇ ಆಗಿರುತ್ತಾರೆ. 'ಪ್ರೇಮ ಬರಹ' ಚಿತ್ರದ ಯಾವುದೇ ಅವ್ಯವಹಾರಕ್ಕೆ ಶ್ರೀ ಮಲ್ಲಿಕಾರ್ಜುನ್ ಅವರೇ ಸಂಪೂರ್ಣ ಜವಾಬ್ಧಾರರಾಗಿರುತ್ತಾರೆ. ತೂಗುದೀಪ ಸಂಸ್ಥೆಯಾಗಲಿ, ದಿನಕರ್ ಅಥವಾ ದರ್ಶನ್ ಅವರಾಗಲಿ, ಅಥವಾ ತೂಗುದೀಪ ಸಂಸ್ಥೆಯ ಇತರ ಸಿಬ್ಬಂದಿ ವರ್ಗದವರಾಗಲಿ, ನೌಕರರಾಗಲಿ ಜವಾಬ್ಧಾರರಾಗಿರುವುದಿಲ್ಲ" ಎಂದು ದೀಪಕ್ ಗಂಗಾಧರ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.