ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಸಿನಿಮಾ ಯಾರೂ ಊಹಿಸದ ಅಭೂತಪೂರ್ವ ಗೆಲುವು ಕಂಡಿದೆ. ರಾಜ್ಯಾದ್ಯಂತ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 15ರಂದು ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಜೈಲರ್ 2’ ಸಿನಿಮಾ ತೆರೆಗೆ ಬರುತ್ತಿದ್ದು, ಸ್ಯಾಂಡಲ್ವುಡ್ ನಿರ್ಮಾಪಕ ಕೆ. ಮಂಜು ಈ ಚಿತ್ರದ ಕರ್ನಾಟಕದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.
‘ಜೈಲರ್ 2’ ಬಂದ ಮೇಲೆ ‘ಪ್ರೇಮದ ಊರಲಿ’ ಸಿನಿಮಾಗೆ ಚಿತ್ರಮಂದಿರಗಳ ಕೊರತೆ ಎದುರಾಗಲಿದೆಯೇ? ಖಂಡಿತ ಆ ರೀತಿ ಏನೂ ಆಗುವುದಿಲ್ಲ ಎಂದು ವಿತರಕ ಕೆ. ಮಂಜು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಮಂಜು, "ಜೈಲರ್ 2 ಸಿನಿಮಾ ಬಿಡುಗಡೆಯಿಂದ ಕನ್ನಡ ಸಿನಿಮಾ ‘ಪ್ರೇಮದ ಊರಲಿ’ ಚಿತ್ರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಚಿತ್ರದ ಯಶಸ್ಸಿನ ಸ್ಫೂರ್ತಿಯಿಂದ ಮುಂದೆಯೂ ಬೇರೆ ಬೇರೆ ಸಿನಿಮಾಗಳನ್ನು ವಿತರಣೆ ಮಾಡಲಿದ್ದೇನೆ" ಎಂದಿದ್ದಾರೆ.
ಯಾರಿಗೆ ಯಾರೂ ಡಿಸ್ಟರ್ಬ್ ಮಾಡೋಕೆ ಸಾಧ್ಯವಿಲ್ಲ
"ಒಂದು ಸಿನಿಮಾದಿಂದ ಇನ್ನೊಂದಕ್ಕೆ ತೊಂದರೆಯಾಗುವುದಿಲ್ಲ. ಯಾವ ಸಿನಿಮಾವನ್ನೂ ಡಿಸ್ಟರ್ಬ್ ಮಾಡಲು ಸಾಧ್ಯವಿಲ್ಲ. ʻಪ್ರೇಮದ ಊರಲಿʼ ಸಿನಿಮಾಗೆ ತೊಂದರೆ ಆಗಬಾರದು ಎಂದು ಗಣೇಶ್ ಅವರ ‘ಬೃಂದಾವಿಹಾರಿ’ ಚಿತ್ರದ ಬಿಡುಗಡೆಯನ್ನು ಮುಂದೂಡಿಕೊಂಡರು. ಆ ತಂಡದವರಿಗೆ ನಿಜಕ್ಕೂ ಧನ್ಯವಾದಗಳು, ಆ ಸಿನಿಮಾ ಬಂದಿದ್ದರೆ ನಮಗೆ ಸ್ವಲ್ಪ ಥಿಯೇಟರ್ ಸಮಸ್ಯೆ ಆಗುತ್ತಿತ್ತು. ಆದರೂ ನಾವು ಮೊದಲೇ ಕಡಿಮೆ ಚಿತ್ರಮಂದಿರಗಳಲ್ಲೇ ಪ್ರದರ್ಶನ ಆಯೋಜಿಸಿದ್ದು, ಎಷ್ಟಿದೆಯೋ ಅಷ್ಟೇ ಸಾಕು ಎಂದು ನಿರ್ಧರಿಸಿದ್ದೆವು" ಎಂದು ʻಜೈಲರ್ 2ʼ ವಿತರಕ ಕೆ. ಮಂಜು ಹೇಳಿದ್ದಾರೆ.
ಜನರೇ ಆ ಚಿತ್ರವನ್ನು ಅಪ್ಪಿಕೊಂಡರು
"ಪ್ರೇಮದ ಊರಲಿ ಚಿತ್ರವನ್ನು ಆರಂಭದಲ್ಲಿ ಯಾರೂ ತೆಗೆದುಕೊಳ್ಳಲು ಮುಂದೆ ಬಂದಿರಲಿಲ್ಲ. ಮೊದಲ ಶುಕ್ರವಾರ 120 ರಿಂದ 150 ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಿದರು. ಶನಿವಾರ, ಭಾನುವಾರ ಉತ್ತಮ ಪ್ರತಿಕ್ರಿಯೆ ಸಿಕ್ಕು ನಂತರ ಜನರೇ ಚಿತ್ರವನ್ನು ಅಪ್ಪಿಕೊಂಡರು. ಈಗ ‘ಪ್ರೇಮದ ಊರಲಿ’ ತೆಲುಗಿನಲ್ಲೂ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಆಂಧ್ರದಲ್ಲೂ ಬಿಡುಗಡೆ ಮಾಡಿದ್ದಾರೆ, ಬೇರೆ ಕಡೆಯೂ ರಿಲೀಸ್ ಮಾಡುತ್ತಿದ್ದಾರೆ, ಇದನ್ನು ನೋಡಿ ಖುಷಿಯಾಗುತ್ತದೆ" ಎಂದು ಕೆ. ಮಂಜು ಹೇಳಿದ್ದಾರೆ.
Premada Oorali movie: ಗಂಟೆಗೆ 15 ಸಾವಿರ ಟಿಕೆಟ್ ಮಾರಾಟ; ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಗಳಿಕೆ
ನಕಲು ಮಾಡಲು ಹೋಗಬೇಡಿ
"ನಾಲ್ಕೈದು ಜನ ನಿರ್ಮಾಪಕರು ಸೇರಿ ಮಾಡಿದ ಒಂದು ಸಿನಿಮಾ ಗೆದ್ದಾಗ ನಾವು ಪ್ರೋತ್ಸಾಹಿಸಬೇಕೇ ಹೊರತು ದುರಾಸೆ ಪಡಬಾರದು. ಅವರು ಇನ್ನೂ ಹತ್ತು ಸಿನಿಮಾಗಳನ್ನು ಮಾಡಲಿ. ಎಲ್ಲಾ ನಿರ್ಮಾಪಕರು ಮತ್ತು ನಿರ್ದೇಶಕರಲ್ಲಿ ನನ್ನದೊಂದು ವಿನಂತಿ, ದಯವಿಟ್ಟು ‘ಪ್ರೇಮದ ಊರಲಿ’ ನೋಡಿ ಅದೇ ಮಾದರಿಯನ್ನು ನಕಲು ಮಾಡಲು ಹೋಗಬೇಡಿ. ಈಗಾಗಲೇ ಎಲ್ಲರೂ ಅದೇ ತರಹ ಮಾಡಲು ಶುರುಮಾಡಿದ್ದಾರೆ. ಪ್ರೇಕ್ಷಕರಿಗೆ ಭಿನ್ನ ರೀತಿಯ ಸಿನಿಮಾಗಳನ್ನು ನೀಡಿ. ಒಂದು ಚಿತ್ರ ಗೆದ್ದಿತು ಎಂದು ಎಲ್ಲರೂ ಅದೇ ಹಾದಿ ಹಿಡಿದು ಸೋಲೊಪ್ಪಿಕೊಳ್ಳುವುದು ಬೇಡ" ಎಂದು ಕೆ. ಮಂಜು ಕಿವಿಮಾತು ಹೇಳಿದ್ದಾರೆ.
ಪರಭಾಷೆಯ ದೊಡ್ಡ ನಟರ ಸಿನಿಮಾಗಳು ಬಂದಾಗ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳ ಅಭಾವ ಎದುರಾಗುವುದು ಸಾಮಾನ್ಯವೆಂಬಂತಾಗಿತ್ತು. ಆದರೆ ‘ಪ್ರೇಮದ ಊರಲಿ’ ಸಿನಿಮಾ ಆ ಚಿತ್ರಣವನ್ನೇ ಬದಲಾಯಿಸಿ ಹೊಸ ಭರವಸೆ ಮೂಡಿಸಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಮಾತನ್ನು ಅಕ್ಷರಶಃ ಸತ್ಯವಾಗಿಸಿದೆ.