ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿಢೀರ್‌ ಅಂತ ʻಪ್ರೇಮದ ಊರಲಿʼ ಹೀರೋ ಶ್ರೀರಾಮ್‌ ಮೇಲೆ‌ ನಟ ಯಶ್‌ ಫ್ಯಾನ್ಸ್‌ ಸಿಟ್ಟಾಗಿದ್ದೇಕೆ? ಅಸಲಿ ಸತ್ಯ ಇಲ್ಲಿದೆ ನೋಡಿ!

ʻಪ್ರೇಮದ ಊರಲಿʼ ಸಿನಿಮಾ ನಟ ಶ್ರೀರಾಮ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಮರಿಸಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿವೆ. ಆ ಮಾತುಗಳನ್ನು ʻರಾಕಿಂಗ್ ಸ್ಟಾರ್ʼ ಯಶ್‌ಗೆ ಪರೋಕ್ಷವಾಗಿ ಕೊಟ್ಟ ಟಾಂಗ್ ಎಂದು ತಪ್ಪಾಗಿ ಭಾವಿಸಿದ ಅಭಿಮಾನಿಗಳು ಶ್ರೀರಾಮ್‌ ವಿರುದ್ಧ ಗರಂ ಆಗಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ನಾಯಕ ನಟ ಶ್ರೀರಾಮ್ ಅವರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿವೆ.

ಕನ್ನಡ ಚಿತ್ರರಂಗದ ಬೆಳವಣಿಗೆಯ ಕುರಿತು ಶ್ರೀರಾಮ್ ಮಾತನಾಡಿದ ಸಣ್ಣ ವಿಡಿಯೋ ತುಣುಕೊಂದು ವೈರಲ್ ಆಗಿದ್ದು, ಅವರು ರಾಕಿಂಗ್ ಸ್ಟಾರ್ ಯಶ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕೆರಳಿದ ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಟ ಶ್ರೀರಾಮ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ಕಾಂಟ್ರವರ್ಸಿಗೆ ಕಾರಣವಾಗಿದ್ದೇನು?

"ನಾವ್ಯಾರೋ ಬಂದು ಸಿನಿಮಾ ರಂಗವನ್ನು ಎತ್ತಿ ನಿಲ್ಲಿಸಿಬಿಟ್ಟಿದ್ದೇವೆ ಅಥವಾ ಏನೋ ಮಾಡಿದ್ದೇವೆ ಎಂದಲ್ಲ. ಅಣ್ಣಾವ್ರ (ಡಾ. ರಾಜ್‌ಕುಮಾರ್) ಕಾಲದಿಂದಲೂ ಕನ್ನಡ ಚಿತ್ರರಂಗ ಬಹಳ ಎತ್ತರದಲ್ಲೇ ಇದೆ. ಹಿರಿಯರು ಈಗಾಗಲೇ ದೊಡ್ಡ ಹೆಸರು ಮಾಡಿ ಹೋಗಿದ್ದಾರೆ, ನಾವು ಚಿಕ್ಕದಾಗಿ ಅಳಿಲು ಸೇವೆ ಮಾಡಿದ್ದೇವೆ ಅಷ್ಟೇ..." ಎಂಬ ಮಾತುಗಳಿರುವ ಶ್ರೀರಾಮ್‌ ಅವರ ವಿಡಿಯೋ ವೈರಲ್‌ ಆಗಿದೆ. ಈ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿ, ʻಕೆಜಿಎಫ್ʼ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಯಶ್‌ ಅವರಿಗೆ ಪರೋಕ್ಷವಾಗಿ ಕೌಂಟರ್‌ ಕೊಟ್ಟಿದ್ದಾರೆ ಎಂದು ಬಿಂಬಿಸಲು ಶುರುಮಾಡಿದ್ದಾರೆ.

Yash-Radhika Pandit: ಯಶ್​ ಮನೆಯಲ್ಲಿ ಕ್ರಿಸ್​ಮಸ್ ಸೆಲೆಬ್ರೇಷನ್​! ಚೆಂದದ ವಿಡಿಯೊ ಶೇರ್ ಮಾಡಿದ​ ರಾಧಿಕಾ ಪಂಡಿತ್

ಫ್ಯಾನ್ಸ್‌ ಹೇಳುತ್ತಿರುವುದೇನು?

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು, "ಚಿತ್ರರಂಗಕ್ಕೆ ಈಗಷ್ಟೇ ಎಂಟ್ರಿ ಕೊಟ್ಟಿದ್ದೀರಿ, ಸಾಧಿಸಬೇಕಾದದ್ದು ಇನ್ನೂ ಬೆಟ್ಟದಷ್ಟಿದೆ. ಹೀಗಿರುವಾಗ ಆರಂಭದಲ್ಲೇ ಇಂತಹ ಪರೋಕ್ಷ ಮಾತುಗಳು, ಅನಗತ್ಯ ವಿವಾದಗಳು ಬೇಕಿತ್ತಾ? ಅಣ್ಣಾವ್ರ ಕಾಲದಿಂದ ಚಿತ್ರರಂಗ ಬೆಳೆದಿರುವುದು ನಿಜ, ಆದರೆ ಯಶ್ ಅವರ ಪರಿಶ್ರಮವನ್ನು ಕಡೆಗಣಿಸುವ ಮಾತುಗಳು ಬೇಡವಾಗಿತ್ತು.." ಎಂದು ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಂದೆಡೆ, ಸಿನಿಮಾ ಪ್ರೇಮಿಗಳು ಶ್ರೀರಾಮ್ ಪರ ಬ್ಯಾಟ್ ಬೀಸಿದ್ದು, "ಇತ್ತೀಚೆಗೆ ಕನ್ನಡ ಸಿನಿಮಾಗಳು ಗೆಲ್ಲದೆ ಮಂಕಾಗಿದ್ದ ಸಂದರ್ಭದಲ್ಲಿ ‘ಪ್ರೇಮದ ಊರಲಿ’ ಹೊಸ ಭರವಸೆ ಮೂಡಿಸಿದೆ. ಆದರೂ ಅಹಂ ತೋರದೆ, ನಾನು ಚಿತ್ರರಂಗವನ್ನು ಉದ್ಧಾರ ಮಾಡಿದೆ ಎಂಬ ಭ್ರಮೆ ನನಗಿಲ್ಲ ಎಂದು ವಿನಮ್ರವಾಗಿ ಹೇಳಿದ್ದಾರೆ. ಹಿರಿಯರನ್ನು ಗೌರವಿಸಿ ಹೇಳಿದ ಮಾತಿನಲ್ಲಿ ತಪ್ಪೇನಿದೆ?" ಎಂದು ಸಮರ್ಥಿಸಿಕೊಂಡಿದ್ದಾರೆ.

Ramayana Movie: ರಾವಣ–ಜಟಾಯು ಯುದ್ಧದ ದೃಶ್ಯ ಮಾಡಲು ಎಷ್ಟು ವರ್ಷ ಬೇಕಾಯ್ತು ಗೊತ್ತಾ?

ಶ್ರೀರಾಮ್‌ ಮಾತಿನ ಪೂರ್ಣರೂಪ

ಅಸಲಿಗೆ ಶ್ರೀರಾಮ್‌ ಹೇಳಿದ್ದರು ಏನೆಂದರೆ, "ಇವತ್ತು ‘ಪ್ರೇಮದ ಊರಲಿ’ ರೆಕಾರ್ಡ್ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಆಗಲು ನೀವೇ ಕಾರಣ. ಅಭಿಮಾನಿಗಳು ನಮ್ಮನ್ನು ಭುಜದ ಮೇಲೆ ಎತ್ತಿ ಕೂರಿಸಿಕೊಂಡಿದ್ದೀರಿ. ಇಂತಹ ಗೆಲುವು ನಮ್ಮದಷ್ಟೇ ಅಲ್ಲ, ತಿಂಗಳಿಗೆ ಒಂದಾದರೂ ಇಂತಹ ಸಿನಿಮಾ ಗೆದ್ದರೆ ಚಿತ್ರರಂಗ ಶ್ರೀಮಂತವಾಗುತ್ತದೆ. ನಾವ್ಯಾರೋ ಬಂದು ಸಿನಿಮಾ ರಂಗವನ್ನು ಎತ್ತಿ ನಿಲ್ಲಿಸಿಬಿಟ್ಟಿದ್ದೇವೆ ಅಥವಾ ಏನೋ ಮಾಡಿದ್ದೇವೆ ಎಂದಲ್ಲ. ಅಣ್ಣಾವ್ರ (ಡಾ. ರಾಜ್‌ಕುಮಾರ್) ಕಾಲದಿಂದಲೂ ಕನ್ನಡ ಚಿತ್ರರಂಗ ಬಹಳ ಎತ್ತರದಲ್ಲೇ ಇದೆ. ಹಿರಿಯರು ಈಗಾಗಲೇ ದೊಡ್ಡ ಹೆಸರು ಮಾಡಿ ಹೋಗಿದ್ದಾರೆ, ನಾವು ಚಿಕ್ಕದಾಗಿ ಅಳಿಲು ಸೇವೆ ಮಾಡಿದ್ದೇವೆ ಅಷ್ಟೇ..." ಎಂದು ಹೇಳಿದ್ದರು.

ಶ್ರೀರಾಮ್‌ ಮಾತನಾಡಿದ್ದ ಪೂರ್ತಿ ವಿಡಿಯೋ ಇಲ್ಲಿದೆ



ಶ್ರೀರಾಮ್‌ ಪ್ರತಿಕ್ರಿಯೆ ಏನು?

ವಿವಾದ ತಾರಕಕ್ಕೇರುತ್ತಿದ್ದಂತೆ ನಟ ಶ್ರೀರಾಮ್ ಪ್ರತಿಕ್ರಿಯಿಸಿದ್ದು, "ಮಾಧ್ಯಮಗಳ ಹೆಡ್‌ಲೈನ್ಸ್ ತಪ್ಪಾಗಿ ಬಿಂಬಿಸುತ್ತಿವೆ. ನಾನು ಯಾರಿಗೂ ಟಾಂಗ್ ಕೊಟ್ಟಿಲ್ಲ, ಕೊಡಲು ಬಾರದು ಕೂಡ. ಅದು ಕೇವಲ ನನ್ನ ಮತ್ತು ನಮ್ಮ ಚಿತ್ರದ ಕುರಿತಾದ ವಿಷಯವಷ್ಟೇ ಆಗಿತ್ತು. ಅಣ್ಣಾವ್ರ ಬಗ್ಗೆ ನನಗಿರುವ ಪುಟ್ಟ ಅಭಿಮಾನದ ಮಾತಿದು. ಕತ್ತರಿಸಲಾದ ಸಣ್ಣ ತುಣುಕನ್ನು ನೋಡಿ ತಪ್ಪು ತಿಳಿಯಬೇಡಿ. ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ, ಶೀಘ್ರದಲ್ಲೇ ಪೂರ್ತಿ ವಿಡಿಯೋ ಹಂಚಿಕೊಳ್ಳುತ್ತೇನೆ.." ಎಂದು ತಿಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.