ಸ್ಯಾಂಡಲ್‌ವುಡ್‌ನಲ್ಲಿ ಕೆಲವು ಸಿನಿಮಾಗಳು ತಾರಾಗಣ, ಬಜೆಟ್ ಮೂಲಕ ಸದ್ದು ಮಾಡಿದರೆ, ಇನ್ನು ಕೆಲವು ಸಿನಿಮಾಗಳು ತಮ್ಮ ಕಂಟೆಂಟ್, ಟೈಟಲ್ ಮೂಲಕವೇ ಸಿನಿಪ್ರಿಯರನ್ನು ಸದ್ದಿಲ್ಲದೆ ಸೆಳೆಯಲು ಯಶಸ್ವಿಯಾಗಿಬಿಡುತ್ತವೆ. ಇತ್ತೀಚೆಗೆ ಹೀಗೆ ಅಂಥದ್ದೇ ಈ ರೀತಿ ಸ್ಯಾಂಡಲ್‌ವುಡ್ ಸಿನಿಪ್ರಿಯರ ಗಮನಸೆಳೆಯುತ್ತಿರುವ ಚಿತ್ರ ʻವಿಕಲ್ಪʼ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ʻವಿಕಲ್ಪʼ ಒಂದು ಸೈಕಾಲಜಿಕಲ್ - ಥ್ರಿಲ್ಲರ್ ಕಥಾಹಂದರವಿದೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ, ತಲ್ಲಣಗಳನ್ನು ವಿಕಲ್ಪ ಮೂಲಕ ತೆರೆಮೇಲೆ ತರುತ್ತಿದ್ದಾರೆ ನಟ/ನಿರ್ದೇಶಕ ಪೃಥ್ವಿರಾಜ್ ಪಾಟೀಲ್.
ಪ್ರತಿ ಪಾತ್ರಗಳು ನೋಡುಗರ ಮನಮುಟ್ಟುತ್ತವೆ
"ವಿಕಲ್ಪ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದರ್ಥ. ನಮ್ಮ ಚಿತ್ರದ ಶೀರ್ಷಿಕೆಯ ಪ್ರಕಾರ, ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕೂಡ ಹೌದು. ಸೈಕಾಲಜಿಕಲ್ ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಮನರಂಜನೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಇಡೀ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರಕ್ಕೆ ಚಿತ್ರದ ಕಥೆಯೇ ಹೀರೋ. ಇಲ್ಲಿ ಪ್ರತಿ ಪಾತ್ರಗಳೂ ಮಾತನಾಡುತ್ತವೆ. ಪ್ರತಿ ಪಾತ್ರಗಳೂ ನೋಡುಗರ ಮನಮುಟ್ಟುತ್ತವೆ" ಎನ್ನುತ್ತಾರೆ ಪೃಥ್ವಿರಾಜ್ ಪಾಟೀಲ್.
ನಟನೆ ಜೊತೆಗೆ ನಿರ್ದೇಶನ
ಸುಮಾರು 2 ದಶಕಗಳಿಗೂ ಹೆಚ್ಚು ಸಮಯ ಹವ್ಯಾಸಿ ರಂಗಭೂಮಿಯಲ್ಲಿ ಅನುಭವಪಡೆದಿರುವ ಪೃಥ್ವಿರಾಜ್ ಪಾಟೀಲ್, ಪ್ರತಿಷ್ಠಿತ ಬಹುರಾಷ್ಟ್ರೀಯ ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸುರೂಸ್ ಟಾಕೀಸ್ ಸಂಸ್ಥೆ ಅಡಿಯಲ್ಲಿ ಇಂದಿರಾ ಶಿವಸ್ವಾಮಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಿಕಲ್ಪ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಪಾಟೀಲ್ ಅವರೇ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ʻವಿಕಲ್ಪʼ ಚಿತ್ರದ ಮತ್ತೊಂದು ವಿಶೇಷತೆಯೆಂದರೆ, ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಈ ಚಿತ್ರದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿರುವುದು. ಚಿತ್ರದ ದೃಶ್ಯಗಳು ಸಹಜತೆಗೆ ಅತ್ಯಂತ ಹತ್ತಿರವಾಗಿರಬೇಕು ಎಂಬ ಆಶಯದಿಂದ ಚಿತ್ರತಂಡ ಇಂಥದ್ದೊಂದು ಕೆಲಸ ಮಾಡಿದೆ. ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ʻವಿಕಲ್ಪʼ ಚಿತ್ರದ ಬಹುತೇಕ ಚಿತ್ರೀಕರಣ ನಡಸಲಾಗಿದ್ದು, ಸಿಂಗಪುರ, ನೆದರ್ಲ್ಯಾಂಡ್ ಸೇರಿದಂತೆ ವಿದೇಶಗಳಲ್ಲೂ ಚಿತ್ರೀಕರಣ ಮಾಡಲಾಗಿದೆಯಂತೆ
ಹರಿಣಿ ಶ್ರೀಕಾಂತ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಪೃಥ್ವಿರಾಜ್ ಪಾಟೀಲ್ ಜೊತೆಗೆ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಮಾಧವ ಶರ್ಮಾ, ಗಿರೀಶ್ ಹೆಗಡೆ, ಗಣಪತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಪ್ರಮುಖ ಪಾತ್ರ ಮಾಡಿರುವುದು ವಿಶೇಷ.
ʻವಿಕಲ್ಪʼ ಚಿತ್ರಕ್ಕೆ ಮಿಥುನ್ ತೀರ್ಥಹಳ್ಳಿ ಸಹ ನಿರ್ದೇಶನ ಮಾಡಿದ್ದಾರೆ. ಅಭಿರಾಮ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್ ಆರುಮುಗಮ್ ಚಿತ್ರಕ್ಕೆ ಸಂಕಲನ ಮಾಡಿದ್ದು, ಹಾಡುಗಳಿಗೆ ಸಂವತ್ಸರ ಸಂಗೀತ ಸಂಯೋಜಿಸಿದ್ದು, ಪೃಥ್ವಿರಾಜ್ ಪಾಟಿಲ್ ಮತ್ತು ಕೌಂಡಿನ್ಯ ಕುಡ್ಲುತೋಟ ಸಾಹಿತ್ಯ ಬರೆದಿದ್ದಾರೆ. ಸಿದ್ದಾರ್ಥ್ ಬೆಳ್ಮಣ್ಣು, ಸಂವತ್ಸರ, ಶ್ರೀರಂಜಿನಿ, ಇಂಚರ ಮೊದಲಾದ ಗಾಯಕರ ಧ್ವನಿಯಲ್ಲಿ ʻವಿಕಲ್ಪʼದ ಹಾಡುಗಳು ಮೂಡಿಬಂದಿವೆ. ಸದ್ಯ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಚಿತ್ರದ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ.