ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

September 21 Review: ಮರೆವಿನ ಲೋಕದಲ್ಲಿ ಮೆಲೋಡ್ರಾಮಾ ಇಲ್ಲದ ಸರಳ ನಿರೂಪಣೆ

ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ, ಪ್ರಿಯಾಂಕಾ ಉಪೇಂದ್ರ ಹಾಗೂ ಪ್ರವೀಣ್ ನಟನೆಯ 'ಸೆಪ್ಟೆಂಬರ್ 21' ಚಿತ್ರವು ಅಲ್ಝೈಮರ್ಸ್ ಕಾಯಿಲೆಯಿಂದ ನಲುಗುವ ವೃದ್ಧ ಹಾಗೂ ಆತನನ್ನು ಸಾಕಿ ಸಲಹುವ ಮಧ್ಯಮ ವರ್ಗದ ಗೃಹಿಣಿಯ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.

Movie: ಸೆಪ್ಟೆಂಬರ್ 21
Release Date: ಮೇ 28, 2026
Language: ಕನ್ನಡ, ಹಿಂದಿ
Genre: ಡ್ರಾಮಾ
Director: ಕರೆನ್‌ ಕ್ಷಿತಿ ಸುವರ್ಣ
Cast: ಪ್ರಿಯಾಂಕಾ ಉಪೇಂದ್ರ, ಪ್ರವೀಣ್, ರಿಕ್ಕಿ ರುದ್ರ, ಅಮಿತ್ ಭೇಲ್, ಅಜಿತ್ ಶಿಧಾಯೆ ಮತ್ತಿತರರು
Duration: 124 ನಿಮಿಷ
Rating: 2.5/5

'ಅಲ್‌ಝೈಮರ್ಸ್‌' (ಸ್ಮರಣಶಕ್ತಿ ನಷ್ಟವಾಗುವ ಕಾಯಿಲೆ) ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸುಲಭದ ಮಾತಲ್ಲ. ಏಕೆಂದರೆ, ಇಲ್ಲಿ ಕಮರ್ಷಿಯಲ್ ಸಿನಿಮಾಗಳಂತೆ ಹೀರೋಯಿಸಂ ತೋರಿಸಲು ಸಾಧ್ಯವಿಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಕಾಯಿಲೆಯಲ್ಲ, ಬದಲಿಗೆ ಇಡೀ ಕುಟುಂಬದ ನೆಮ್ಮದಿ, ತಾಳ್ಮೆಯನ್ನು ಪರೀಕ್ಷಿಸುವ ಸೂಕ್ಷ್ಮ ಸನ್ನಿವೇಶ. ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರು 'ಸೆಪ್ಟೆಂಬರ್ 21' ಚಿತ್ರದ ಮೂಲಕ ಈ ಭಾವನಾತ್ಮಕ ಜಗತ್ತನ್ನು ಯಾವುದೇ ಅತಿರೇಕದ ಮೆಲೋಡ್ರಾಮಾ ಇಲ್ಲದೆ ತೆರೆಮೇಲೆ ತಂದಿದ್ದಾರೆ.

ʻಸೆಪ್ಟೆಂಬರ್‌ 21ʼ ಚಿತ್ರದ ಕಥೆ ಏನು?

ವಿಶ್ವ ಆಲ್ಝೈಮರ್ ದಿನವನ್ನಾಗಿ ಸೆಪ್ಟೆಂಬರ್‌ 21 ಅನ್ನು ಘೋಷಿಸಲಾಗಿದೆ. ಆ ಕಾರಣಕ್ಕಾಗಿಯೇ ಈ ಸಿನಿಮಾಕ್ಕೆ ʻಸೆಪ್ಟೆಂಬರ್‌ 21ʼ ಎಂದು ಟೈಟಲ್‌ ಇಡಲಾಗಿದೆ. ಇಬ್ಬರು ಮಕ್ಕಳು, ಸದಾ ಕಿರಿಕಿರಿ ಮಾಡುವ ಅತ್ತೆ, ಜವಾಬ್ದಾರಿಯಿಲ್ಲದ ಗಂಡ.. ಹೀಗೆ ಈಗಾಗಲೇ ಸಂಸಾರದ ನೊಗ ಹೊತ್ತು ಸುಸ್ತಾಗಿರುವ ಕಮಲಾ (ಪ್ರಿಯಾಂಕಾ ಉಪೇಂದ್ರ) ಎಂಬ ಮಧ್ಯಮ ವರ್ಗದ ಮಹಿಳೆಯ ಬದುಕಿಗೆ 'ಅಲ್ಝೈಮರ್ಸ್'ನಿಂದ ಬಳಲುತ್ತಿರುವ ರಾಜ್ (ಪ್ರವೀಣ್) ಎಂಬ ವೃದ್ಧನನ್ನು ನೋಡಿಕೊಳ್ಳುವ ಜವಾಬ್ದಾರಿ ಬರುತ್ತದೆ. ಚಿತ್ರದ ಆರಂಭದಲ್ಲೇ ರಾಜ್ ನಾಪತ್ತೆಯಾಗುವ ದೃಶ್ಯ ಪ್ರೇಕ್ಷಕರಲ್ಲಿ ಆತಂಕ ಸೃಷ್ಟಿಸುತ್ತದೆ. ರಾಜ್ ತನ್ನ ಮರೆವಿನ ಜಗತ್ತಿನಲ್ಲೇ ಬದುಕುತ್ತಿರುತ್ತಾನೆ. ಆತನಿಗೆ ತನ್ನ ಮೃತ ಪತ್ನಿ ಸುಧಾ ಇಂದಿಗೂ ಕೋವಿಡ್ ಕ್ವಾರಂಟೈನ್‌ನಲ್ಲಿದ್ದಾಳೆ, ಅವಳು ವಾಪಸ್ ಬರುತ್ತಾಳೆ ಎಂಬ ಭ್ರಮೆ. ಇಂತಹ ಒಬ್ಬ ಮುಗ್ಧ ವೃದ್ಧನನ್ನು ಕಮಲಾ ಹೇಗೆ ಸಾಕಿ ಸಲಹುತ್ತಾಳೆ? ಅವಳ ವೈಯಕ್ತಿಕ ಬದುಕಿನ ಸವಾಲುಗಳೇನು? ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.

ಪ್ರಿಯಾಂಕಾ ಉಪೇಂದ್ರ ನಟನೆಯ ʻಸೆಪ್ಟೆಂಬರ್ 21ʼ ಚಿತ್ರದ ಟೀಸರ್‌ ರಿಲೀಸ್;‌ ಗಮನಸೆಳೆದ 22ರ ಹರೆಯದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ

ಮೇಕಿಂಗ್‌ ಹೇಗಿದೆ?

ವಿಶ್ವದಲ್ಲಿ ಪ್ರತಿ ಕೆಲವು ಸೆಕೆಂಡಿಗೆ ಒಬ್ಬರು ಅಲ್ಝೈಮರ್ಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂಬ ಕಹಿ ಸತ್ಯವನ್ನು ಸಿನಿಮಾ ನೆನಪಿಸುತ್ತದೆ. ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ನಿರ್ದೇಶಕರು ಕಾಯಿಲೆಯನ್ನು ಕೇವಲ ಮರೆವಿನ ಆಟವನ್ನಾಗಿ ತೋರಿಸದೆ, ಅದರ ಆಳವಾದ ಭಾವನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕೇವಲ 22 ವರ್ಷದ ಯುವ ನಿರ್ದೇಶಕಿ ಕರೆನ್‌ ಕ್ಷಿತಿ ಸುವರ್ಣ ಇಂತಹ ಗಂಭೀರ ವಿಷಯವನ್ನು ಹ್ಯಾಂಡಲ್ ಮಾಡಿರುವ ರೀತಿ ಚೆನ್ನಾಗಿದೆ. ಇಂತಹ ಒಬ್ಬ ರೋಗಿಯನ್ನು ನೋಡಿಕೊಳ್ಳುವಾಗ ಎದುರಾಗುವಂತಹ ದಣಿವು, ಕಿರಿಕಿರಿ ಮತ್ತು ಪ್ರೀತಿಯನ್ನು ನೈಜವಾಗಿ ತೋರಿಸಿದ್ದಾರೆ. ಆದರೆ, ಚಿತ್ರಕಥೆ ಕೆಲವು ಕಡೆ ಪತ್ನಿಯ ನೆನಪಿನ ದೃಶ್ಯಗಳಲ್ಲೇ ಮತ್ತೆ ಮತ್ತೆ ಸುತ್ತುವುದರಿಂದ, ಬಹುತೇಕ ಕಥೆ ಒಂದೇ ಮನೆಯಲ್ಲಿ ನಡೆಯುವುದರಿಂದ ಏಕತಾನತೆ ಕಾಡುತ್ತದೆ. ಅಲ್ಲದೆ, ನಿರೂಪಣೆಯು ಕೂಡ ಕೊಂಚ ನಿಧಾನವಾಗಿರುವುದು ಆಗಾಗ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಉತ್ತಮವಾಗಿದೆ. ಈ ಸಿನಿಮಾವನ್ನು ಹಿಂದಿಯಲ್ಲಿ ಚಿತ್ರೀಕರಿಸಿದ್ದು, ಕನ್ನಡಕ್ಕೆ ಡಬ್‌ ಮಾಡಲಾಗಿದೆ. ಡಬ್ಬಿಂಗ್‌ ಕ್ವಾಲಿಟಿಯನ್ನು ಇನ್ನಷ್ಟು ಉತ್ತಮಗೊಳಿಸುವ ಅವಕಾಶಗಳಿದ್ದವು.

ಪ್ರಿಯಾಂಕಾ ಉಪೇಂದ್ರ ನಟನೆ ಹೇಗಿದೆ?

ನಟ ಪ್ರವೀಣ್ ಸಿಂಗ್ ಅವರು 'ರಾಜ್' ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಅವರ ನಟನೆಯನ್ನು ನೋಡಿದರೆ, ಅವರೇ ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದಾರೇನೋ ಎಂಬ ಭಾವನೆಯನ್ನು ಮೂಡಿಸುತ್ತದೆ. ಅಷ್ಟೊಂದು ನೈಜವಾಗಿ ಅವರು ನಟಿಸಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ ಅವರು 'ಕಮಲಾ' ಪಾತ್ರದಲ್ಲಿ ಅವರು ಅಬ್ಬರವಿಲ್ಲದ ನಟನೆ ನೀಡಿದ್ದಾರೆ. ಕೌಟುಂಬಿಕ ಸಮಸ್ಯೆಗಳು, ಸಾಲದ ಬಾಧೆ, ರೋಗಿಯ ಕಿರಿಕಿರಿ.. ಇದೆಲ್ಲವನ್ನೂ ಬ್ಯಾಲೆನ್ಸ್‌ ಮಾಡುವ ಓರ್ವ ಗೃಹಿಣಿಯ ಪಾತ್ರದಲ್ಲಿ ಪ್ರಿಯಾಂಕಾ ಮಿಂಚಿದ್ದಾರೆ. ಝರೀನಾ ವಹಾಬ್‌ ಇಷ್ಟವಾಗುತ್ತಾರೆ. ರಿಕ್ಕಿ ರುದ್ರ, ಅಮಿತ್ ಭೇಲ್, ಅಜಿತ್ ಶಿಧಾಯೆ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.