ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಭಾಸ್‌ ಕಾರಣಕ್ಕೆ ಶಾಹಿದ್‌ ಕಪೂರ್‌ ನಟನೆಯ ʻಅಶ್ವತ್ಥಾಮʼ ಸಿನಿಮಾ ಸ್ಥಗಿತ! ಕನ್ನಡದ ಆ ನಿರ್ದೇಶಕನಿಗೆ ನಿರಾಸೆ?

ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಕನ್ನಡದ 'ಅವನೇ ಶ್ರೀಮನ್ನಾರಾಯಣ' ಖ್ಯಾತಿಯ ನಿರ್ದೇಶಕ ಸಚಿನ್ ರವಿ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಅಶ್ವತ್ಥಾಮ' ಸದ್ಯಕ್ಕೆ ಸ್ಥಗಿತಗೊಂಡಿದೆ. 'ಕಲ್ಕಿ 2898 ಎಡಿ' ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಅಶ್ವತ್ಥಾಮ ಪಾತ್ರ ಸೃಷ್ಟಿಸಿದ ಪ್ರಭಾವದಿಂದಾಗಿ ನಿರ್ಮಾಪಕ ಜಾಕಿ ಭಗ್ನಾನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರಂತೆ.

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಕನ್ನಡದ ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ನಿರ್ದೇಶಕ ಸಚಿನ್ ಬಿ. ರವಿ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಸದ್ಯಕ್ಕೆ ಸ್ಥಗಿತಗೊಂಡಿದೆ. ಪೂಜಾ ಎಂಟರ್‌ಟೈನ್‌ಮೆಂಟ್ ಮತ್ತು ಪ್ರೈಮ್ ವಿಡಿಯೋ ಸಹಯೋಗದಲ್ಲಿ ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಅನ್ನು ಅದ್ಧೂರಿಯಾಗಿ ಘೋಷಿಸಲಾಗಿತ್ತಾದರೂ, ಚಿತ್ರೀಕರಣ ಆರಂಭವಾಗುವ ಮುನ್ನವೇ ಯೋಜನೆ ಕೈಬಿಡುವಂತಾಗಿದೆ. ಈ ಬೆಳವಣಿಗೆಯಿಂದಾಗಿ ಶಾಹಿದ್ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.

ಕಲ್ಕಿ ಸಿನಿಮಾದಿಂದ ಬಿತ್ತಾ ಹೊಡೆತ?

ಈ ಪ್ರಾಜೆಕ್ಟ್ ನಿಲ್ಲಲು ಪ್ರಮುಖ ಕಾರಣಗಳಲ್ಲಿ ಪ್ರಭಾಸ್ ಮತ್ತು ಅಮಿತಾಭ್ ಬಚ್ಚನ್ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ ‘ಕಲ್ಕಿ 2898 ಎಡಿ’ ಪ್ರಭಾವವೂ ಒಂದು ಎಂದು ನಿರ್ಮಾಪಕ ಜಾಕಿ ಭಗ್ನಾನಿ ಬಹಿರಂಗಪಡಿಸಿದ್ದಾರೆ. "ಬೃಹತ್ ಬಜೆಟ್ ಚಿತ್ರಗಳನ್ನು ನಿರ್ಮಿಸುವಾಗ ಹಣದ ಹೂಡಿಕೆಗಿಂತ ಕಥಾವಸ್ತುವಿನ ಫ್ರೆಶ್‌ನೆಸ್‌ ಮುಖ್ಯವಾಗಿರುತ್ತದೆ. ‘ಕಲ್ಕಿ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಅಶ್ವತ್ಥಾಮ ಪಾತ್ರವು ಸೃಷ್ಟಿಸಿದ ಹವಾ ಜೋರಾಗಿದೆ. ಆನಂತರ ತಮ್ಮ ಚಿತ್ರ ಪ್ರೇಕ್ಷಕರಿಗೆ ಯಾವ ಪ್ರಮಾಣದ ಹೊಸ ಅನುಭವ ನೀಡಬಲ್ಲದು ಎಂಬುದನ್ನು ಮರುಪರಿಶೀಲಿಸುವುದು ಅನಿವಾರ್ಯವಾಯಿತು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೂಡಿಕೆ ವ್ಯರ್ಥವಾಗುವ ಸಾಧ್ಯತೆ

"ವಿಷಯದಲ್ಲಿ ಹೊಸತನವಿಲ್ಲದಿದ್ದರೆ ದೊಡ್ಡ ಹೂಡಿಕೆ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆತುರದಲ್ಲಿ ಮುಂದುವರಿಯುವ ಬದಲು ಯೋಜನೆಯನ್ನು ಸದ್ಯಕ್ಕೆ ಕೈಬಿಡುವುದು ನಮ್ಮ ನಿರ್ಧಾರವಾಗಿತ್ತು" ಎಂದು ಜಾಕಿ ತಿಳಿಸಿದ್ದಾರೆ. ಶಾಹಿದ್ ಕಪೂರ್ ಹಾಗೂ ಜಾಕಿ ಭಗ್ನಾನಿ ನಡುವೆ ಎರಡು ದಶಕಗಳ ಕಾಲದ ಸ್ನೇಹವಿದ್ದು, ಸೂಕ್ತವಾದ ಹೊಸ ಕಥಾವಸ್ತು ಸಿಕ್ಕ ತಕ್ಷಣ ಇಬ್ಬರೂ ಒಟ್ಟಾಗಿ ಮತ್ತೊಂದು ಸಿನಿಮಾದಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

Shahid Kapoor: ಶಾಹಿದ್ ಕಪೂರ್ ನಟನೆಗೆ ಬಹುಪರಾಕ್‌ ಅಂದ್ರು ಫ್ಯಾನ್ಸ್‌; ʻಓ ರೋಮಿಯೋʼ ಸಿನಿಮಾ ಹೇಗಿದೆ?

ವಿಕ್ರಮ್ ಚಿತ್ರವೂ ಸದ್ಯಕ್ಕಿಲ್ಲ

ಕೇವಲ ‘ಅಶ್ವತ್ಥಾಮ’ ಮಾತ್ರವಲ್ಲದೆ, ದಕ್ಷಿಣ ಭಾರತದ ಸ್ಟಾರ್ ನಟ ಚಿಯಾನ್ ವಿಕ್ರಮ್ ಅವರೊಂದಿಗೆ ಯೋಜಿಸಲಾಗಿದ್ದ ಪೌರಾಣಿಕ ಚಿತ್ರ ‘ಸೂರ್ಯಪುತ್ರ ಮಹಾವೀರ ಕರ್ಣ’ ಪ್ರಾಜೆಕ್ಟ್ ಅನ್ನು ಕೂಡ ಸದ್ಯಕ್ಕೆ ಮುಂದೂಡಲಾಗಿದೆ ಎಂದು ಭಗ್ನಾನಿ ತಿಳಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿ ಮತ್ತು ಕಥೆಯ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಈ ಪ್ರಾಕ್ಟಿಕಲ್‌ ನಿರ್ಧಾರಗಳನ್ನು ಕೈಗೊಂಡಿದ್ದಾರಂತೆ.

ಸಚಿನ್‌ಗೆ ನಿರಾಸೆ

ಕನ್ನಡದಲ್ಲಿ ರಕ್ಷಿತ್‌ ಶೆಟ್ಟಿ ಜೊತೆ ʻಅವನೇ ಶ್ರೀಮನ್ನಾರಾಯಣʼ ಸಿನಿಮಾವನ್ನು ಮಾಡಿದ್ದ ಸಚಿನ್‌ ರವಿ, ಆ ಬಳಿಕ ಬಾಲಿವುಡ್‌ನತ್ತ ಮುಖ ಮಾಡಿದ್ದರು. ʻಅವನೇ ಶ್ರೀಮನ್ನಾರಾಯಣʼ ತೆರೆಕಂಡು 7 ವರ್ಷಗಳಾದರೂ, ಸಚಿನ್‌ ರವಿ ಹೊಸ ಸಿನಿಮಾವನ್ನು ಘೋಷಣೆ ಮಾಡಲು ಸಾಧ್ಯವಾಗಿಲ್ಲ. 2024ರಲ್ಲಿ ಶಾಹಿದ್‌ ಜೊತೆಗೆ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಸಿನಿಮಾ ಘೋಷಣೆ ಮಾಡಿದಾಗ ನಿರೀಕ್ಷೆ ಜೋರಾಗಿತ್ತು. ಆದರೆ, ಸದ್ಯದ ಮಾಹಿತಿಯು ಸಿನಿಪ್ರಿಯರಲ್ಲಿ ಬೇಸರ ಉಂಟು ಮಾಡಿದೆ.