ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ ಅವರು ಸದ್ಯ ʻರಾಕಾʼ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆಯೇ ಹೊಸ ಮನೆಯನ್ನು ಕಟ್ಟಿಸುವುದರಲ್ಲಿಯೂ ಅವರು ತಲ್ಲೀನರಾಗಿದ್ದಾರೆ. ಹೌದು, ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್ ಭವ್ಯವಾದ ಹೊಸ ಮನೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸುತ್ತಿದ್ದು, ಸದ್ಯ ಎಲ್ಲರ ಕಣ್ಣು ಈ ಮನೆಯ ಮೇಲಿದೆ.
ಇದು 100 ಕೋಟಿ ರೂ. ಬೆಲೆಯ ಮನೆ
ಹೈದರಾಬಾದ್‌ನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜೂಬಿಲಿ ಹಿಲ್ಸ್‌ನಲ್ಲಿ ಈ ಹೊಸ ಮನೆ ನಿರ್ಮಾಣವಾಗುತ್ತಿದೆ. ಸುಮಾರು 36 ಸಾವಿರ ಚದರ ಅಡಿಗಳ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಮನೆಯ ಸೈಟ್‌ನ ಬೆಲೆಯೇ ಬರೋಬ್ಬರಿ 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಈ ಭವ್ಯವಾದ ಮನೆಯನ್ನು 100 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈ ಮನೆಯ ನಿರ್ಮಾಣ ಕಾರ್ಯವು ಈಗಾಗಲೇ ಭರದಿಂದ ಸಾಗುತ್ತಿದ್ದು, ಇದು ಜೂಬಿಲಿ ಹಿಲ್ಸ್‌ನಲ್ಲಿಯೇ ಇರುವ ಅಲ್ಲು ಅರ್ಜುನ್ ಸಂಬಂಧಿ, ಮೆಗಾಸ್ಟಾರ್ ಚಿರಂಜೀವಿ ಅವರ ನಿವಾಸದ ಪಕ್ಕದಲ್ಲೇ ಇದೆ.
2026ರ ಡಿಸೆಂಬರ್‌ನಲ್ಲಿ ಗೃಹಪ್ರವೇಶ
ಈ ಮನೆ ಸಂಪೂರ್ಣಗೊಂಡ ಬಳಿಕ ನಟ ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಈ ಹೊಸ ಮನೆಗೆ ಶಿಫ್ಟ್ ಆಗುವ ನಿರೀಕ್ಷೆಯಿದೆ. 2026ರ ಡಿಸೆಂಬರ್ ಹೊತ್ತಿಗೆ ಸಂಪೂರ್ಣಗೊಳ್ಳಲಿದ್ದು, ಆಗಲೇ ಅದ್ದೂರಿಯಾಗಿ ಗೃಹಪ್ರವೇಶ ಸಮಾರಂಭ ಮಾಡುವ ಪ್ಲ್ಯಾನ್ ಇದೆ. ತಮ್ಮ ನೆಚ್ಚಿನ ನಟನ ಹೊಸ ಮನೆ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ಯ ಅಲ್ಲು ಅರ್ಜುನ್ ಅವರು ತಂದೆ ಅಲ್ಲು ಅರವಿಂದ್ ಅವರೊಂದಿಗೆ ವಾಸವಿದ್ದಾರೆ. ಈ ಹೊಸ ಮನೆ ರೆಡಿ ಆಗುತ್ತಿದ್ದಂತೆಯೇ, ಪತ್ನಿ ಮತ್ತು ಮಕ್ಕಳೊಂದಿಗೆ ಈ ಮನೆಗೆ ಬರಲಿದ್ದಾರೆ ಎನ್ನಲಾಗಿದೆ.
ಸದ್ಯ ಅಲ್ಲು ಅರ್ಜುನ್ ಕೈತುಂಬಾ ಸಿನಿಮಾ ಅಫರ್ ಹೊಂಗಿದ್ದಾರೆ. ಅಟ್ಲೀ ನಿರ್ದೇಶನದ, ದೀಪಿಕಾ ಪಡುಕೋಣೆ ನಾಯಕಿಯಾಗಿರುವ 'ರಾಕಾ' ಚಿತ್ರದಲ್ಲಿ ಅಲ್ಲು ಅರ್ಜುನ್ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಲೋಕೇಶ್ ಕನಕರಾಜ್ ಅವರೊಂದಿಗೆ 'AA23' ಚಿತ್ರಕ್ಕಾಗಿ ಕೈಜೋಡಿಸುತ್ತಿದ್ದಾರೆ. ಇನ್ನೂ ಕೆಲ ನಿರ್ದೇಶಕರ ಕಥೆಗಳನ್ನು ಅಲ್ಲು ಅರ್ಜುನ್ ಫೈನಲ್ ಮಾಡುತ್ತಿದ್ದಾರೆ.
ಅಲ್ಲು ಅರ್ಜುನ್ ಅವರ ಹೊಸ ಮನೆ ಕುರಿತ ಮಾಹಿತಿ
ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ ಬಾಲಕೃಷ್ಣ
ಅಲ್ಲು ಅರ್ಜುನ್ ಮನೆ ಕಟ್ಟಿಸುತ್ತಿರುವ ಜೂಬಿಲಿ ಹಿಲ್ಸ್ ಏರಿಯಾದಲ್ಲೇ ನಟ ನಂದಮೂರಿ ಬಾಲಕೃಷ್ಣ ಅವರು ಕೂಡ ಐಷಾರಾಮಿ ಬಂಗಲೆಯನ್ನು ಕಟ್ಟಿಸುತ್ತಿದ್ದು, ಅತ್ಯಾಧುನಿಕ ಶೈಲಿಯಲ್ಲಿ ಇದು ನಿರ್ಮಾಣವಾಗುತ್ತಿದೆ. ಅವರು ಕೂಡ ಶೀಘ್ರದಲ್ಲೇ ಗೃಹಪ್ರವೇಶ ಮಾಡಲಿದ್ದಾರಂತೆ. ಹಲವು ವರ್ಷಗಳ ಹಿಂದೆಯೇ ಜೂಬಿಲಿ ಹಿಲ್ಸ್ ಏರಿಯಾದ ಹೃದಯಭಾಗದಲ್ಲಿ ಬೃಹತ್ ಜಾಗವನ್ನು ಖರೀದಿಸಿದ್ದ ನಟ ಬಾಲಯ್ಯ, ಈಗ ತಮ್ಮ ಕನಸಿನ ಅರಮನೆಯನ್ನು ಕಟ್ಟಿಸುತ್ತಿದ್ದಾರೆ.