ಅಪ್ರತಿಮ ಯೋಧ ಕರ್ಣನ ಅಮರ ಕಥಾನಕ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಅದ್ಧೂರಿಯಾಗಿ ಮೂಡಿಬರಲು ಸಜ್ಜಾಗಿದೆ. ಬಹುಮುಖ ಪ್ರತಿಭೆ ರಾಘವ ಲಾರೆನ್ಸ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾ ‘ಮಹಾವೀರ ಕರ್ಣ’ದ ಭರ್ಜರಿ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಖ್ಯಾತ ನಿರ್ದೇಶಕ ರಮೇಶ್ ವರ್ಮಾ ಸಾರಥ್ಯದಲ್ಲಿ ಸುಮಾರು 150 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಪೌರಾಣಿಕ ಸಿನಿಮಾ ನಿರ್ಮಾಣವಾಗುತ್ತಿದೆ.
ಐದು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್
ಈ ಸಿನಿಮಾವು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಪ್ರಮುಖ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ‘ಪೆನ್ ಮೂವೀಸ್’ನ ಡಾ. ಜಯಂತಿಲಾಲ್ ಗಡಾ, ‘ಆರ್.ವಿ. ಸ್ಟುಡಿಯೋಸ್’ ಹಾಗೂ ‘ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್’ ಸಹಯೋಗದಲ್ಲಿ ಅತ್ಯಂತ ಭವ್ಯವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.
Mahaveer Karna Teaser: ತೆರೆಮೇಲೆ 'ಮಹಾವೀರ ಕರ್ಣ'ನ ಸಿನಿಮಾ; ಆಕ್ಷನ್; ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ!
ಅತ್ಯಾಧುನಿಕ ವಿಎಫ್‌ಎಕ್ಸ್ ಬಳಕೆ
ಮಹಾಭಾರತದ ಕಾಲಘಟ್ಟವನ್ನು ಕಣ್ಣಿಗೆ ಕಟ್ಟುವಂತೆ ಮರುಸೃಷ್ಟಿಸಲು ಚಿತ್ರತಂಡ ಭರ್ಜರಿ ತಯಾರಿ ನಡೆಸಿದೆ. ಬೃಹತ್ ಹಾಗೂ ಕಲಾತ್ಮಕ ಸೆಟ್‌ಗಳು, ಪುರಾತನ ಸಾಮ್ರಾಜ್ಯಗಳು, ರೋಮಾಂಚನಕಾರಿ ರಣರಂಗದ ಸನ್ನಿವೇಶಗಳು ಮತ್ತು ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರನ್ನು ದ್ವಾಪರ ಯುಗಕ್ಕೆ ಕರೆದೊಯ್ಯುವ ಅದ್ಭುತ ಸಿನಿಮೀಯ ಅನುಭವವನ್ನು ನೀಡಲು ಯೋಜನೆ ರೂಪಿಸಲಾಗಿದೆ. ಅದ್ದೂರಿ ಸೆಟ್‌ಗಳ ವೈಭವ ಹಾಗೂ ದೃಶ್ಯ ವೈಭವದ ಮೂಲಕ ಕರ್ಣನ ಜಗತ್ತನ್ನು ಹಿಂದೆಂದೂ ಕಾಣದ ದೃಶ್ಯಕಾವ್ಯವಾಗಿ ಕಟ್ಟಿಕೊಡಲು ಚಿತ್ರತಂಡ ಸಜ್ಜಾಗಿದೆಯಂತೆ.
ಕರ್ಣನ ಪಾತ್ರ ರಾಘವ ನ್ಯಾಯ ಒದಗಿಸಲಿದ್ದಾರೆ
ಗೌರವ, ವಿಧಿ, ಅಚಲ ನಿಷ್ಠೆ ಹಾಗೂ ತ್ಯಾಗದ ಪ್ರತೀಕವಾದ ಕರ್ಣನ ಪಾತ್ರಕ್ಕೆ ರಾಘವ ಲಾರೆನ್ಸ್ ಸಂಪೂರ್ಣವಾಗಿ ನ್ಯಾಯ ಒದಗಿಸಲಿದ್ದಾರೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ. ನಿರ್ದೇಶಕ ರಮೇಶ್ ವರ್ಮಾ ಅವರ ನಿರ್ದೇಶನದಲ್ಲಿ ಭಾವನಾತ್ಮಕ ಅಂಶಗಳು, ಅದ್ಧೂರಿ ಆ್ಯಕ್ಷನ್ ಹಾಗೂ ರೋಮಾಂಚಕ ತಿರುವುಗಳೊಂದಿಗೆ ಈ ಕಥೆ ಅನಾವರಣಗೊಳ್ಳಲಿದೆ. ಸದ್ಯ ಫಸ್ಟ್ ಲುಕ್ ಮೂಲಕ ಸದ್ದು ಮಾಡಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಚಿತ್ರದ ತಾರಾಗಣ ಹಾಗೂ ತಂತ್ರಜ್ಞರ ವಿವರಗಳನ್ನು ಹಂತ ಹಂತವಾಗಿ ಬಹಿರಂಗಪಡಿಸುವುದಾಗಿ ತಿಳಿಸಿದೆ.