ಕರ್ನಾಟಕದ ಕರಾವಳಿ ಭಾಗದ ಆಚರಣೆಗಳು, ದೈವದ ನಂಬಿಕೆ ಹಾಗೂ ಅಲ್ಲಿನ ವಿಶಿಷ್ಟ ಸಂಸ್ಕೃತಿಯ ಹಿನ್ನೆಲೆಯುಳ್ಳ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಹೆಚ್ಚುತ್ತಿವೆ. ಇದೇ ಸಾಲಿಗೆ ಸೇರಲು ಈಗ ಮತ್ತೊಂದು ಹೊಸ ಸಿನಿಮಾ ಸಜ್ಜಾಗುತ್ತಿದೆ. ಅದೇ ‘ಕ್ಷೇತ್ರಪಾಲ’. ಹಿರಿಯ ಪತ್ರಕರ್ತ ಜಗದೀಶ್ ಮಂಜಣ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಶೀರ್ಷಿಕೆ ಹಾಗೂ ಮೋಶನ್ ಪೋಸ್ಟರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
‘ಕ್ಷೇತ್ರಪಾಲ’ನ ಕಥೆ?
ಕರಾವಳಿಯ ನಂಬಿಕೆಯಂತೆ ಪ್ರತಿ ಊರು ಅಥವಾ ಕ್ಷೇತ್ರವನ್ನು ರಕ್ಷಿಸಲು ‘ಕ್ಷೇತ್ರಪಾಲ’ ಎಂಬ ದೈವವಿರುತ್ತದೆ. ಆ ದೈವವು ನ್ಯಾಯ, ನೀತಿ ಮತ್ತು ಧರ್ಮವನ್ನು ಕಾಪಾಡುತ್ತದೆ ಎಂಬುದು ಜನರ ಬಲವಾದ ನಂಬಿಕೆ. ಆದರೆ, ಈ ಸಿನಿಮಾ ಕೇವಲ ಯಾವುದೋ ಒಂದು ದೈವದ ಕುರಿತಾದ ಕಥೆಯಲ್ಲ. ಬದಲಿಗೆ, ಧಾರ್ಮಿಕ ಹಿನ್ನೆಲೆಯಲ್ಲಿ ಇಡೀ ಊರನ್ನು ರಕ್ಷಣೆ ಮಾಡುವ ವ್ಯಕ್ತಿಯೊಬ್ಬನ ಹೋರಾಟದ ಕಥೆಯಾಗಿದೆ. ಇದರಲ್ಲಿ ಕರಾವಳಿಯ ಸಂಪ್ರದಾಯದ ಜೊತೆಗೆ ಸಸ್ಪೆನ್ಸ್, ಆ್ಯಕ್ಷನ್ ಹಾಗೂ ಥ್ರಿಲ್ಲರ್ ಅಂಶಗಳು ಒಳಗೊಂಡಿರಲಿವೆ. "ಇದು ಎರಡು ಎಳೆಗಳಲ್ಲಿ ಸಾಗುವ ಕಥೆ. ಕರಾವಳಿಯ ಸೌಂದರ್ಯದ ಜೊತೆಗೆ ಪ್ರೇಕ್ಷಕರು ಊಹಿಸಲಾಗದ ರೋಚಕ ತಿರುವುಗಳು ಈ ಸಿನಿಮಾದ ಹೈಲೈಟ್ಸ್" ಎಂದು ಹೇಳುತ್ತಾರೆ ಜಗದೀಶ್ ಮಂಜಣ್ಣ.
'ಕರಾವಳಿ' ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್; ʻಮುದ್ದು ಗುಮ್ಮʼ ಹಾಡನ್ನು ಮುದ್ದಾಗಿ ಹಾಡಿದ ಸಿದ್ ಶ್ರೀರಾಮ್
ಹೀರೋ ಆದ ರಾಘವ ಪೂಜಾರಿ
ಸುಮಾರು ಒಂದೂವರೆ ದಶಕಗಳ ಕಾಲ ಮಾಧ್ಯಮ ಲೋಕದಲ್ಲಿ ಜರ್ನಲಿಸ್ಟ್ ಆಗಿ ಕೆಲಸ ಮಾಡಿದ ಅನುಭವವಿರುವ ಜಗದೀಶ್ ಮಂಜಣ್ಣ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಕನ್ನಡದ ಹಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡಿದ್ದ ಕುಂದಾಪುರ ಮೂಲದ ರಾಘವ ಪೂಜಾರಿ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅದ್ಧೂರಿಯಾಗಿ ಲಾಂಚ್ ಆಗುತ್ತಿದ್ದಾರೆ.
ಚಿತ್ರದ ತಾರಾಗಣದಲ್ಲಿ ಬಲರಾಜ್ ವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ಅದ್ವಿಕಾ ಶೆಟ್ಟಿ, ರಾಘು ರಾಮನಕೊಪ್ಪ, ಗೌತಮಿ ಗೌಡ ಹಾಗೂ ನಮಿತಾ ಕಿರಣ್ ಅವರಂತಹ ಅನುಭವಿ ಕಲಾವಿದರ ದಂಡೇ ಇದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕನ್ನಡಪರ ಹೋರಾಟಗಾರ ನಿಂಗೇಗೌಡ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ಕೆ ವಿಶ್ವನಾಥ್ ಹಾಗೂ ನಟ ರಾಘು ರಾಮನಕೊಪ್ಪ ಮುಂತಾದ ಗಣ್ಯರು ಸೇರಿ ಚಿತ್ರದ ಟೈಟಲ್ ಹಾಗೂ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಜುಲೈನಲ್ಲಿ ಶೂಟಿಂಗ್ ಆರಂಭ
ಮುತ್ತಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಕೆ. ನವೀನ್ ಸುವರ್ಣ ಛಾಯಾಗ್ರಹಣ ಹಾಗೂ ಗಿರೀಶ್ ಕುಮಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಯತೀಶ್ ರಾಜ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಉಡುಪಿ ಮತ್ತು ಕುಂದಾಪುರ ಸುತ್ತಮುತ್ತ ಸದ್ದಿಲ್ಲದೆ 10 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಜುಲೈ ಅಂತ್ಯದಿಂದ ಸತತ 40 ದಿನಗಳ ಕಾಲ ಎರಡನೇ ಹಂತದ ಶೂಟಿಂಗ್ ನಡೆಸಲು ಭರ್ಜರಿ ಪ್ಲಾನ್ ಮಾಡಿಕೊಂಡಿದೆ.