ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸದ್ದಿಲ್ಲದೇ ಸೆಟ್ಟೇರಿತು ರಾಜ್‌ ಬಿ. ಶೆಟ್ಟಿ ನಿರ್ದೇಶನದ 4ನೇ ಸಿನಿಮಾ; ಕರಾವಳಿ ಹಿನ್ನೆಲೆಯ ಥ್ರಿಲ್ಲರ್‌ಗೆ ಸೈಲೆಂಟ್ ಆಗಿ ನಡೀತಿದೆ ಶೂಟಿಂಗ್!

Raj B Shetty New Movie: ರಾಜ್‌ ಬಿ. ಶೆಟ್ಟಿ ನಿರ್ದೇಶನದ 4ನೇ ಸಿನಿಮಾವು ಸದ್ದಿಲ್ಲದೆ ಆರಂಭವಾಗಿದೆ. ಈಗಾಗಲೇ ಸುಮಾರು 30 ದಿನಗಳ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಈ ಬಾರಿ ಕರಾವಳಿ ಮಣ್ಣಿನ ಸೊಗಡಿನ ರೋಚಕ ಥ್ರಿಲ್ಲರ್ ಕಥೆಯು ತೆರೆಯ ಮೇಲೆ ಮೂಡಿಬರಲಿದೆಯಂತೆ.

ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಸದ್ದಿಲ್ಲದೇ ತಮ್ಮ ನಿರ್ದೇಶನದ 4ನೇ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ಕರಾವಳಿ ಭಾಗದಲ್ಲಿ ಚಿತ್ರೀಕರಣ ಶುರು ಮಾಡಿರುವ ರಾಜ್, ಈಗಾಗಲೇ ಮಂಗಳೂರು ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಭರದಿಂದ ಶೂಟಿಂಗ್ ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ, ಚಿತ್ರತಂಡವು ಯಾರಿಗೂ ಸುಳಿವು ನೀಡದೆ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕಂಟೆಂಟ್ ಆಧಾರಿತ ವಿಶಿಷ್ಟ ಸಿನಿಮಾಗಳ ಮೂಲಕವೇ ಸದ್ದು ಮಾಡುವ ರಾಜ್, ಈ ಬಾರಿಯೂ ಅದೇ ಹಾದಿ ತುಳಿದಿದ್ದಾರೆ.

ಮತ್ತೆ ನಿರ್ದೇಶನಕ್ಕೆ ಮರಳಿದ ರಾಜ್

ಚೊಚ್ಚಲ ನಿರ್ದೇಶನದ ‘ಒಂದು ಮೊಟ್ಟೆಯ ಕಥೆ’ ಮೂಲಕ ಗಮನ ಸೆಳೆದಿದ್ದ ರಾಜ್, ಆ ನಂತರ ‘ಗರುಡ ಗಮನ ವೃಷಭ ವಾಹನ’ ಎಂಬ ಆ್ಯಕ್ಷನ್-ಗ್ಯಾಂಗ್‌ಸ್ಟರ್ ಡ್ರಾಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು. ಬಳಿಕ ‘ಟೋಬಿ’ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಟಿಸಿದ್ದ ಅವರು, ನಿರ್ದೇಶಕರಾಗಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಮೂಲಕ ಸೂಕ್ಷ್ಮ ಪ್ರೇಮಕಥೆಯನ್ನೂ ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದರು.

ಕರಾವಳಿ ಸೊಗಡಿನ ಥ್ರಿಲ್ಲರ್‌

ನಟನೆಯಲ್ಲಿ ತೀವ್ರ ಬ್ಯುಸಿಯಾಗಿದ್ದರೂ, ಹೊಸ ಚಿತ್ರಕಥೆಗಾಗಿ ಸಂಪೂರ್ಣ ಸಮಯ ಮೀಸಲಿಡುವುದಾಗಿ ಈ ಹಿಂದೆ ತಿಳಿಸಿದ್ದರು. ಅದರಂತೆ ಹಲವು ತಿಂಗಳುಗಳ ಕಾಲ ಪರಿಶ್ರಮಪಟ್ಟು ಸ್ಕ್ರಿಪ್ಟ್ ಅಂತಿಮಗೊಳಿಸಿರುವ ಅವರು, ಈ ಬಾರಿ ಕರಾವಳಿ ಕರ್ನಾಟಕದ ಹಿನ್ನೆಲೆಯಲ್ಲೇ ಸಾಗುವ ರೋಚಕ ಥ್ರಿಲ್ಲರ್ ಕಥಾಹಂದರವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಎಂದಿನಂತೆ ತಮ್ಮದೇ ವಿಶಿಷ್ಟ, ಮಣ್ಣಿನ ಸೊಗಡಿನ ಶೈಲಿಯಲ್ಲೇ ಈ ಕಥೆ ರೂಪುಗೊಳ್ಳುತ್ತಿದೆ ಎನ್ನಲಾಗಿದೆ.

ನಟರಾಗಿಯೂ ಬ್ಯುಸಿ ಇರುವ ರಾಜ್

ಇನ್ನೊಂದೆಡೆ, ರಾಜ್ ಬಿ. ಶೆಟ್ಟಿ ವಿವಿಧ ಭಾಷೆಗಳಲ್ಲಿ ನಟರಾಗಿಯೂ ಸಖತ್ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ‘ಸು ಫ್ರಮ್ ಸೋ’ ಚಿತ್ರವನ್ನು ನಿರ್ಮಿಸಿ, ನಟಿಸಿದ್ದ ಅವರು, ‘ಬಂದರ್’ ಮೂಲಕ ಬಾಲಿವುಡ್ ಅಂಗಳಕ್ಕೂ ಪದಾರ್ಪಣೆ ಮಾಡಿದರು. ಕನ್ನಡದಲ್ಲಿ ಸ್ಟಾರ್ ನಟರ ಜೊತೆಗೆ ‘45’ ಚಿತ್ರದಲ್ಲಿ ಬಣ್ಣಹಚ್ಚಿರುವ ಅವರು, ‘ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದಾರೆ.

Raj B Shetty: ಸದ್ದಿಲ್ಲದೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ, ; ಟ್ರೈಲರ್‌ ಔಟ್‌

ಜೊತೆಗೆ ರವಿ ಸಾರಂಗ ಅವರ ‘ರಕ್ಕಸಪುರದೊಳ್’ ಹಾಗೂ ಗುರುದತ್ತ ಗಾಣಿಗ ಅವರ ‘ಕರಾವಳಿ’ ಚಿತ್ರಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮಿಳಿನಲ್ಲಿ ಖ್ಯಾತ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಅವರ ‘ಪಾಕೆಟ್ ನಾವೆಲ್’ ಹಾಗೂ ‘ಸೇಯೋನ್’ ಸೇರಿದಂತೆ ಹಲವು ಪರಭಾಷಾ ಪ್ರಾಜೆಕ್ಟ್‌ಗಳನ್ನು ರಾಜ್ ಶೆಟ್ಟಿ ನಿಭಾಯಿಸುತ್ತಿದ್ದಾರೆ.

ಹೀಗೆ ಸಾಲು ಸಾಲು ಭಾಷೆಗಳಲ್ಲಿ ಬ್ಯುಸಿ ಇದ್ದರೂ, ರಾಜ್ ಬಿ. ಶೆಟ್ಟಿ ಮತ್ತೆ ನಿರ್ದೇಶನದ ಕ್ಯಾಪ್ ಧರಿಸಿರುವುದು ಅಭಿಮಾನಿಗಳಿಗೆ ಭಾರಿ ಕುತೂಹಲ ಮೂಡಿಸಿದೆ. ಪ್ರಸ್ತುತ ಚಿತ್ರದ ಶೂಟಿಂಗ್ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಚಿತ್ರತಂಡವು ಶೀರ್ಷಿಕೆ, ನಿರ್ಮಾಣ ಸಂಸ್ಥೆ ಹಾಗೂ ತಾರಾಗಣದ ಅಧಿಕೃತ ವಿವರಗಳನ್ನು ಹಂಚಿಕೊಳ್ಳಲು ನಿರ್ಧರಿಸಿದೆ.