ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಂಎಂ ಕೀರವಾಣಿ ಪುತ್ರ ಕಾಲಭೈರವ ಜೊತೆ ಕಾವ್ಯ ಕಲ್ಯಾಣ್‌ರಾಮ್‌ ಡೇಟಿಂಗ್; ನಿರ್ದೇಶಕ ರಾಜಮೌಳಿ ಕುಟುಂಬದ ಸೊಸೆ ಆಗಲಿದ್ದಾರೆ ಈ ಜನಪ್ರಿಯ ನಟಿ!

ಕಾಲಭೈರವ ಮತ್ತು ಕಾವ್ಯ ಕಲ್ಯಾಣ್‌ರಾಮ್ ಜೋಡಿ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಹೇಳಿಕೊಂಡಿದೆ. ಆಸ್ಕರ್ ಪುರಸ್ಕೃತ ಕೀರವಾಣಿ ಪುತ್ರ, ಗಾಯಕ ಕಾಲಭೈರವ ಹಾಗೂ 'ಬಲಗಂ' ಖ್ಯಾತಿಯ ಕಾವ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಭಾವನಾತ್ಮಕ ಸಂದೇಶಗಳು ವೈರಲ್ ಆಗಿವೆ. ರಾಜಮೌಳಿ ಕುಟುಂಬದ ಸಂಬಂಧಿಕರಾಗಿರುವ ಈ ಯುವ ತಾರಾ ಜೋಡಿಯ ಹೊಸ ಪಯಣಕ್ಕೆ ಚಿತ್ರರಂಗದ ಗಣ್ಯರು ಹಾರೈಸಿದ್ದಾರೆ.

ಟಾಲಿವುಡ್‌ನ ಮತ್ತೊಂದು ಸೆಲೆಬ್ರಿಟಿ ಜೋಡಿ ತಮ್ಮ ರಿಲೇಷನ್‌ಶಿಪ್‌ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಗಾಯಕ ಕಾಲಭೈರವ ಹಾಗೂ ಯುವ ನಟಿ ಕಾವ್ಯ ಕಲ್ಯಾಣ್‌ರಾಮ್ ತಾವು ರಿಲೇಶನ್‌ಶಿಪ್‌ನಲ್ಲಿರುವುದನ್ನು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. "ಜೀವನಪೂರ್ತಿ ಜೊತೆಯಾಗಿರುತ್ತೇವೆ ಎಂಬ ಈ ವಿಷಯವನ್ನು ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ" ಎಂದು ಕಾಲಭೈರವ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತೊಂದೆಡೆ ಕಾವ್ಯ ಕೂಡ "ಲೈಫ್ ಅಪ್‌ಡೇಟ್" ಎಂದು ಹೇಳಿ ಆಸಕ್ತಿಕರ ಪೋಸ್ಟ್ ಹಂಚಿಕೊಂಡಿದ್ದು, ಇಬ್ಬರೂ ಜೊತೆಯಾಗಿರುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಾಜಮೌಳಿ ಕುಟುಂಬದಲ್ಲಿ ಮದುವೆ ಸಂಭ್ರಮ

ಹೌದು, ಗಾಯಕ ಕಾಲಭೈರವ ಬೇರಾರೂ ಅಲ್ಲ, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರ ಪುತ್ರ ಹಾಗೂ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಸಂಬಂಧಿ. ರಾಜಮೌಳಿ ಪತ್ನಿ ರಮಾ ಮತ್ತು ಕಾಲಭೈರವ ಅವರ ತಾಯಿ ಶ್ರೀವಲ್ಲಿ ಇಬ್ಬರೂ ಸಹೋದರಿಯರು. ಹೀಗಾಗಿ ಈ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ ಮನೆಮಾಡಿದೆ.

ಕಾಲಭೈರವ ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಹೆಸರು ಗಳಿಸಿದ್ದಾರೆ. ಹಾಗೆಯೇ ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿದ ಕಾವ್ಯ ಕಲ್ಯಾಣ್‌ರಾಮ್, ನಂತರ ನಾಯಕಿಯಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಮಸೂದಾ', 'ಬಲಗಂ' ನಂತಹ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕಾಲಭೈರವ ಮತ್ತು ಕಾವ್ಯ ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಆ ವಿಷಯ ಅಧಿಕೃತವಾಗಿ ಬಹಿರಂಗವಾಗಿದೆ.

ಕಾವ್ಯ ಕಲ್ಯಾಣ್‌ರಾಮ್ ಏನಂದ್ರು?

"ಲೈಫ್ ಅಪ್‌ಡೇಟ್: ನನ್ನ ಯೆಲ್ಲೋ ಪೇಪರ್ ಡೈಸಿಯನ್ನು ಕಂಡುಕೊಂಡೆ. ಕೆಲವರು ನಮ್ಮ ಜೀವನಕ್ಕೆ ಬಂದಾಗ, ‘ನಾವು ದೇವರಿಗೆ ಅತ್ಯಂತ ಪ್ರಿಯವಾದ ಮಕ್ಕಳು’ ಎಂದು ಅನಿಸುತ್ತದೆ. ಸರಿಯಾದ ವ್ಯಕ್ತಿ ನಮ್ಮ ಬದುಕಿಗೆ ಪ್ರವೇಶಿಸಿದಾಗ, ಈ ಪ್ರಪಂಚವನ್ನು ಗುಲಾಬಿ ಕನ್ನಡಕದ ಮೂಲಕ ನೋಡುವುದು ಕೆಟ್ಟ ವಿಷಯವೇನಲ್ಲ ಎಂದೆನಿಸುತ್ತದೆ. ನನ್ನ ದಿನಗಳಲ್ಲಿ ಬೆಳಕನ್ನು ತುಂಬಿ, ಈ ಜಗತ್ತಿನಲ್ಲೇ ಅತ್ಯಂತ ಅದೃಷ್ಟವಂತ ಹುಡುಗಿ ನಾನೇ ಎಂದು ಅನಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು" ಎಂದು ಕಾವ್ಯ ಕಲ್ಯಾಣ್‌ರಾಮ್ ಬರೆದುಕೊಂಡಿದ್ದಾರೆ.

SS Rajamouli Varanasi: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜಮೌಳಿಗೆ ಅವಮಾನ?

ನನಗೆ ಇಷ್ಟವಾದ ಕಾಫಿ ಕುಡಿದಂತೆ ಹಿತ ನೀಡುತ್ತದೆ

"ಕಾವ್ಯ ಬಾಬು.. ನಿನ್ನೊಂದಿಗೆ ಸಮಯ ಕಳೆಯುವುದು ಎಂದರೆ ಬೆಟ್ಟದ ತುದಿಯಲ್ಲಿ ಕುಳಿತು ಹರಿಯುವ ತೊರೆಯನ್ನು ನೋಡಿದಂತೆ ಭಾಸವಾಗುತ್ತದೆ. ನಿನ್ನೊಂದಿಗೆ ಯಾವುದೇ ಕೆಲಸ ಮಾಡಿದರೂ, ಅದು ಎಂದಿಗೂ ಮುಗಿಯದ ಪ್ರವಾಸದಂತೆ ಇರುತ್ತದೆ. ನಿನ್ನೊಂದಿಗೆ ಮಾತನಾಡುವುದು ಚಳಿಗಾಲದ ಬೆಳಿಗ್ಗೆ ನನಗೆ ಇಷ್ಟವಾದ ಕಾಫಿ ಕುಡಿದಂತೆ ಹಿತ ನೀಡುತ್ತದೆ. ಇಂತಹ ಅನುಭವಗಳು ಇನ್ನೂ ಎಷ್ಟೋ ಇವೆ... ಬಹುತೇಕ ಸಂದರ್ಭಗಳಲ್ಲಿ, ಈ ಭಾವನೆಗೆ ಏನು ಹೆಸರಿಡಬೇಕೆಂದು ನನಗೆ ತಿಳಿಯುತ್ತಿರಲಿಲ್ಲ. ಆದರೆ ನಮ್ಮ ಈ ಪಯಣದಲ್ಲಿ ಎಲ್ಲೋ ಒಂದು ಕಡೆ ಅದು ಏನೆಂದು ಕೊನೆಗೂ ನನಗೆ ಅರ್ಥವಾಯಿತು. ಅದುವೇ ‘ಮನೆ’ ಎಂಬ ಭಾವನೆ" ಎಂದಿದ್ದಾರೆ ಕಾಲಭೈರವ.

ನನಗೆ ಅಪಾರ ಸಂತೋಷವಾಗುತ್ತಿದೆ

"ನಾನು ನಿನ್ನನ್ನು ಮೊದಲ ಬಾರಿಗೆ ಭೇಟಿಯಾದಾಗ, ಒಬ್ಬ ಹೊಸ ವ್ಯಕ್ತಿಯನ್ನು ಭೇಟಿಯಾದಂತೆ ಅನಿಸಲೇ ಇಲ್ಲ. ಅದು ಹೇಗಿತ್ತೆಂದರೆ, ನಾನು ನನ್ನ ಮನೆಗೆ ಬಂದು, ಅಲ್ಲಿಂದ ನಂತರ ಎಂದಿಗೂ ಆ ಮನೆಯನ್ನು ಬಿಟ್ಟುಹೋಗದಂತೆ ಅನಿಸಿತು. ನಾವಿಬ್ಬರೂ ಜೊತೆಯಾಗಿ ಜೀವನಪೂರ್ತಿ ಒಂದೇ ಮನೆಯಲ್ಲಿರುತ್ತೇವೆ ಎಂಬ ಈ ಸುದ್ದಿಯನ್ನು ಈಗ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಅಪಾರ ಸಂತೋಷವಾಗುತ್ತಿದೆ" ಎಂದು ಕಾಲಭೈರವ ಬರೆದುಕೊಂಡಿದ್ದಾರೆ.

ಕಾಲಭೈರವ ಮತ್ತು ಕಾವ್ಯ ಕಲ್ಯಾಣ್‌ರಾಮ್ ಜೋಡಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇವರ ಮದುವೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.