ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rajinikanth: ಕರ್ನಾಟಕದಲ್ಲಿ 50 ಕೋಟಿ ರೂ. ಬಾಚಿಕೊಂಡ ʻಜೈಲರ್‌ 2ʼ; ವಿತರಕರಿಗೆ ಲಾಭವೋ ಲಾಭ, ವಿಶ್ವಾದ್ಯಂತ ಎಷ್ಟಾಯ್ತು ಕಲೆಕ್ಷನ್?

Jailer 2 Movie: ರಜನಿಕಾಂತ್‌ ಅಭಿನಯದ ʻಜೈಲರ್‌ 2ʼ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಅಕ್ಷರಶಃ ಧೂಳೆಬ್ಬಿಸಿದ್ದು, ಕೇವಲ ಐದೇ ದಿನಗಳಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 50 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ. ವಿಶ್ವಾದ್ಯಂತ 477.75 ಕೋಟಿ ಬಾಚಿಕೊಂಡಿರುವ ಈ ಸಿನಿಮಾ ಸದ್ಯದಲ್ಲೇ ಜಾಗತಿಕವಾಗಿ 500 ಕೋಟಿ ಕ್ಲಬ್‌ ಸೇರಲಿದೆ.

‘ಸೂಪರ್‌ ಸ್ಟಾರ್‌’ ರಜನಿಕಾಂತ್‌ ಅಭಿನಯದ ‘ಜೈಲರ್‌ 2’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಅದರಲ್ಲೂ ಕರ್ನಾಟಕದ ವಿತರಕರಿಗೆ ಜಾಕ್‌ಪಾಟ್‌ ಹೊಡೆದಂತಾಗಿದ್ದು, ಕೇವಲ 5 ದಿನಗಳಲ್ಲೇ ‘ಜೈಲರ್‌ 2’ ಕರ್ನಾಟಕದಲ್ಲಿ ಅಂದಾಜು 50 ಕೋಟಿ ಗಳಿಕೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಖ್ಯಾತ ನಿರ್ಮಾಪಕ ಕೆ. ಮಂಜು ವಿತರಣೆ ಮಾಡಿದ್ದಾರೆ. ಮೊದಲ ವಾರದಲ್ಲೇ ಈ ಸಿನಿಮಾ 60 ಕೋಟಿ ಗಡಿ ತಲುಪುವ ನಿರೀಕ್ಷೆಯಿದ್ದು, ಕರುನಾಡಿನಲ್ಲಿ ಅನಾಯಾಸವಾಗಿ 100 ಕೋಟಿ ಕ್ಲಬ್‌ ಸೇರುವ ಎಲ್ಲಾ ಸಾಧ್ಯತೆಗಳಿವೆ.

ಕರುನಾಡಲ್ಲಿ ರಜನಿಕಾಂತ್‌ ದಾಖಲೆ

ಕರ್ನಾಟಕದಲ್ಲಿ 50 ಕೋಟಿ ಕ್ಲಬ್‌ ಸೇರಿದ ರಜನಿಕಾಂತ್ ಅವರ 3ನೇ ಚಿತ್ರವಿದು. ಈ ಹಿಂದೆ 'ಜೈಲರ್' ಮೊದಲ ಭಾಗವು 9 ದಿನಗಳಲ್ಲಿ 50 ಕೋಟಿ ಗಳಿಸಿ ಬರೆದಿದ್ದ ದಾಖಲೆಯನ್ನು 'ಜೈಲರ್ 2' ಕೇವಲ 5 ದಿನಗಳಲ್ಲೇ ಮುರಿದು ಹಾಕಿದೆ. ಆ ಮೂಲಕ ಕರ್ನಾಟಕದಲ್ಲಿ ಈ ಮೈಲಿಗಲ್ಲನ್ನು ಅತ್ಯಂತ ವೇಗವಾಗಿ ತಲುಪಿದ ಕಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ, ಚಿತ್ರದ ಕನ್ನಡ ಡಬ್ಬಿಂಗ್ ಆವೃತ್ತಿಯು 3 ಕೋಟಿ ಗ್ರಾಸ್ ಗಳಿಕೆ ಕಂಡಿದ್ದು, ಕನ್ನಡದಲ್ಲಿ ಈ ಸಾಧನೆ ಮಾಡಿದ ರಜನಿಕಾಂತ್ ಅವರ ಮೂರನೇ ಸಿನಿಮಾ ಎನಿಸಿಕೊಂಡಿದೆ.

ಕರ್ನಾಟಕದಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಚಿತ್ರಕ್ಕೆ ‘ಜೈಲರ್‌ 2’ ಸಿನಿಮಾದಿಂದ ಸಮಸ್ಯೆ ಆಗುತ್ತಾ? ವಿತರಕರು ಹೇಳೋದೇನು?

ದೇಶ-ವಿದೇಶಗಳಲ್ಲಿ ಅತ್ಯುತ್ತಮ ಗಳಿಕೆ

2023ರ ಬ್ಲಾಕ್‌ಬಸ್ಟರ್ 'ಜೈಲರ್' ಚಿತ್ರದ ಮುಂದುವರಿದ ಭಾಗವಾಗಿ ಅಕ್ಟೋಬರ್ 15ರಂದು ತೆರೆಕಂಡ ಈ ಸಿನಿಮಾ, ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಪಾರುಪತ್ಯ ಮೆರೆದಿದೆ. ನವರಾತ್ರಿ ಮತ್ತು ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಬಿಡುಗಡೆಯಾದ ಹಲವು ಹೊಸ ಸಿನಿಮಾಗಳ ತೀವ್ರ ಪೈಪೋಟಿಯ ನಡುವೆಯೂ, ದೇಶ-ವಿದೇಶಗಳಲ್ಲಿ ಅತ್ಯುತ್ತಮ ಗಳಿಕೆ ಕಾಯ್ದುಕೊಳ್ಳುವ ಮೂಲಕ ರಜನಿಕಾಂತ್ ತಾವು ಇಂದಿಗೂ ಬಾಕ್ಸ್ ಆಫೀಸ್ ಕಿಂಗ್‌ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಶೀಘ್ರದಲ್ಲೇ 500 ಕೋಟಿ ರೂ. ಕ್ಲಬ್‌ಗೆ ಎಂಟ್ರಿ

ಮೂಲಗಳ ಪ್ರಕಾರ, ಸಿನಿಮಾ ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ದೇಶಾದ್ಯಂತ ಭರ್ತಿ 284 ಕೋಟಿ ಕಲೆಕ್ಷನ್ ಮಾಡಿದೆ. 5ನೇ ದಿನದಂದು ದೇಶಾದ್ಯಂತ 15,215 ಪ್ರದರ್ಶನಗಳಿಂದ ಒಟ್ಟು 42.35 ಕೋಟಿ ನಿವ್ವಳ ಗಳಿಕೆ ದಾಖಲಿಸಿದೆ. ವಿದೇಶಿ ಮಾರುಕಟ್ಟೆಯಿಂದಲೂ ಅತ್ಯುತ್ತಮ ಗಳಿಕೆ ಆಗುತ್ತಿದ್ದು, ವಿಶ್ವಾದ್ಯಂತ 'ಜೈಲರ್ 2' ಒಟ್ಟು ಗಳಿಕೆಯು 477.75 ಕೋಟಿಗೆ ಏರಿಕೆಯಾಗಿದೆ. ಶೀಘ್ರದಲ್ಲೇ ʻಜೈಲರ್‌ 2ʼ ಸಿನಿಮಾ 500 ಕೋಟಿ ರೂ. ಕ್ಲಬ್‌ ಸೇರುವ ನಿರೀಕ್ಷೆ ಇದೆ.

ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಈ ಚಿತ್ರದಲ್ಲಿ ರಮ್ಯಾ ಕೃಷ್ಣನ್, ಎಸ್. ಜೆ. ಸೂರ್ಯ, ಶಿವರಾಜ್‌ಕುಮಾರ್‌, ಮೋಹನ್‌ಲಾಲ್, ವಿದ್ಯಾ ಬಾಲನ್, ಸೂರಜ್ ವೆಂಜಾರಮೂಡು ಹಾಗೂ ಮಿಥುನ್ ಚಕ್ರವರ್ತಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಹಾಗೂ ಆರ್. ನಿರ್ಮಲ್ ಅವರ ಸಂಕಲನ ಚಿತ್ರಕ್ಕಿದೆ.