ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

30 ವರ್ಷಗಳ ಹಿಂದೆಯೇ ತಮ್ಮ ಪೊಲಿಟಿಕಲ್‌ ಪವರ್‌ ತೋರಿಸಿದ್ದ ʻಸೂಪರ್‌ ಸ್ಟಾರ್‌ʼ ರಜನಿಕಾಂತ್;‌ ಅಂದು ಕಂಗಾಲಾಗಿತ್ತು ಜಯಲಲಿತಾ ಪಾರ್ಟಿ!

ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ತಾರೆಯರ ಪ್ರಭಾವ ಅಪ್ರತಿಮ. 1996ರ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನೀಡಿದ ಒಂದೇ ಒಂದು ಹೇಳಿಕೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷವನ್ನು ಧೂಳೀಪಟ ಮಾಡಿತ್ತು. ಭ್ರಷ್ಟಾಚಾರದ ಆರೋಪ ಮತ್ತು ರಜನಿ ಹವಾ ಸೇರಿ 225 ಸ್ಥಾನಗಳಿದ್ದ ಪಕ್ಷವನ್ನು ಕೇವಲ 4 ಸ್ಥಾನಗಳಿಗೆ ಕುಸಿಯುವಂತೆ ಮಾಡಿದ್ದ ಆ ರೋಚಕ ಮಾಹಿತಿ ಇಲ್ಲಿದೆ.

ತಮಿಳುನಾಡು ರಾಜಕೀಯಕ್ಕೂ ಮತ್ತು ಸಿನಿಮಾರಂಗಕ್ಕೂ ಎಂತಹ ಸಂಬಂಧವಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಎಂಜಿಆರ್‌ ಕಾಲದಿಂದ ಮೊನ್ನೆ ಮೊನ್ನೆ ಗೆದ್ದ ಟಿವಿಕೆ ವಿಜಯ್‌ ತನಕ ಅಲ್ಲಿನ ಮತದಾರರು ಸಿನಿಮಾದೊಂದಿಗೆ ಎಷ್ಟು ಬೆರೆತು ಹೋಗಿದ್ದಾರೆ ಎಂಬುದನ್ನು ಕಂಡಿದ್ದೇವೆ. ಅಲ್ಲಿನ ಚುನಾವಣೆಗಳಲ್ಲಿ ಸಿನಿಮಾ ತಾರೆಯ ಪ್ರಭಾವ ದೊಡ್ಡಮಟ್ಟದಲ್ಲಿರುತ್ತದೆ. 1996ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲೂ ಇದು ಸಾಬೀತಾಗಿತ್ತು ಮತ್ತು ರಾಜಕೀಯದಲ್ಲಿ ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ಅವರ ಹವಾ ಎಂಥದ್ದು ಎಂಬುದನ್ನು ತೋರಿಸಿಕೊಟ್ಟಿತ್ತು.

ಜಯಲಲಿತಾ ಸೋಲಿಗೆ ಕಾರಣವಾಗಿತ್ತು ರಜನಿ ಹೇಳಿಕೆ

1991ರ ವಿಧಾನಸಭಾ ಚುನಾವಣೆಯನ್ನು AIADMK ಪಕ್ಷವು ನಟಿ ಜಯಲಲಿತಾ ನೇತೃತ್ವದಲ್ಲಿ ಎದುರಿಸಿತ್ತು. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜಯಲಲಿತಾ, ಪ್ರಚಂಡ ಗೆಲುವು ಸಾಧಿಸಿದ್ದರು. ಆಗ ರಾಜೀವ್‌ ಗಾಂಧಿ ನಿಧನದ ಅನುಕಂಪದ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಜಯಲಲಿತಾ ಪಕ್ಷವು ಸ್ಪರ್ಧಿಸಿದ್ದ 234 ಕ್ಷೇತ್ರಗಳಲ್ಲಿ 225 ಅನ್ನು ತನ್ನದಾಗಿಸಿಕೊಂಡು, ಎದುರಾಳಿ ಡಿಎಂಕೆಯನ್ನು ಅಕ್ಷರಶಃ ಧೂಳೀಪಟ ಮಾಡಿತ್ತು.

ಆದರೆ, 1996ರಲ್ಲಿ ನಡೆದ ವಿಧಾನಸಭಾ ಚುನಾವಣೆ ಮಾತ್ರ ಜಯಲಲಿತಾ AIADMK ಪಕ್ಷಕ್ಕೆ ದೊಡ್ಡ ಹೊಡೆತ ನೀಡಿತು. ಅದಕ್ಕೆ ನಟ ರಜನಿಕಾಂತ್‌ ಅವರ ಬಿರುಸಿನ ಹೇಳಿಕೆಯೂ ಕಾರಣವಾಗಿತ್ತು.

ತಮಿಳುನಾಡು ರಾಜಕೀಯದಲ್ಲಿ ಭಾರೀ ಬದಲಾವಣೆ; DMK ಸೇರಿದ ಜಯಲಲಿತಾ ಆಪ್ತ!

ʻಬಾಷಾʼ ಸಕ್ಸಸ್‌ಮೀಟ್‌ನಲ್ಲಿ ಆಗಿದ್ದೇನು?

1995ರಲ್ಲಿ ರಜನಿಕಾಂತ್‌ ನಟಿಸಿದ್ದ ʻಬಾಷಾʼ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಆ ಚಿತ್ರವನ್ನು ನಿರ್ಮಾಣ ಮಾಡಿದವರು AIADMK ಸರ್ಕಾರದಲ್ಲಿ ಸಚಿವರಾಗಿದ್ದ ಆರ್‌ ಎಂ ವೀರಪ್ಪನ್.‌ ʻಬಾಷಾʼ ಸಿನಿಮಾದ 100ನೇ ದಿನದ ಫಂಕ್ಷನ್‌ನಲ್ಲಿ ರಜನಿಕಾಂತ್‌ ಅಡಳಿತರೂಡ AIADMK ಪಕ್ಷದ ನಡೆಗಳನ್ನು ಪರೋಕ್ಷವಾಗಿ ಟೀಕಿಸಿದ್ದರು. ತಮಿಳುನಾಡಿನಲ್ಲಿ ಬಾಂಬ್‌ ಸಂಸ್ಕೃತಿ ಹೆಚ್ಚುತ್ತದೆ ಎಂದು ಆರೋಪಿಸಿದ್ದರು.

ಆದರೆ ಅದೇ ವೇದಿಕೆಯಲ್ಲಿದ್ದ ತಮ್ಮದೇ ಸರ್ಕಾರದ ಸಚಿವ ಆರ್‌ ಎಂ ವೀರಪ್ಪನ್ ಇದನ್ನು ಖಂಡಿಸಲಿಲ್ಲ, ರಜನಿಕಾಂತ್‌ಗೆ ತಿರುಗೇಟು ನೀಡಲಿಲ್ಲ ಎಂಬುದು ಜಯಲಲಿತಾ ಕೋಪಕ್ಕೆ ಕಾರಣವಾಯಿತು. ಆ ಸಮಾರಂಭ ನಡೆದ ಮರುದಿನವೇ ಆರ್‌ ಎಂ ವೀರಪ್ಪನ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿದ್ದರು ಜಯಲಲಿತಾ. ಇದು ರಜನಿಕಾಂತ್‌ ಅವರಿಗೆ ತೀವ್ರವಾಗಿ ನೋವುಂಟು ಮಾಡಿತ್ತು.

ಆರ್‌. ಎಂ. ವೀರಪ್ಪನ್ ಅವರ ಬಳಿ ಇದರ ಬಗ್ಗೆ ರಜನಿಕಾಂತ್ ಮಾತನಾಡಿದರು. "ನನ್ನ ಹೇಳಿಕೆಗೆ ನಿಮ್ಮನ್ನು ಹೊಣೆ ಮಾಡುವುದು ಎಷ್ಟು ಸರಿ? ನಾನೊಮ್ಮೆ ಜಯಲಲಿತಾ ಬಳಿ ಮಾತನಾಡಲಾ?‌ ನನಗೆ ಇದು ತುಂಬಾ ಕಾಡುತ್ತಿದೆ" ಎಂದು ರಜನಿಕಾಂತ್‌ ಕೇಳಿದ್ದರು. ಆದರೆ, ಆರ್‌ ಎಂ ವೀರಪ್ಪನ್, ಅದನ್ನು ಒಪ್ಪಲಿಲ್ಲ.

ಎಐಎಡಿಎಂಕೆಗೆ ಸವಾಲು; ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಜಯಲಲಿತಾ ಆಪ್ತೆ ಶಶಿಕಲಾ: ತಮಿಳುನಾಡು ರಾಜಕೀಯದಲ್ಲಿ ಸಂಚಲನ

"ಆಗಿದ್ದು ಆಗಿದೆ ಬಿಟ್ಟುಬಿಡಿ, ಅದನ್ನೆಲ್ಲಾ ನೀವು ಮನಸ್ಸಿನಲ್ಲೇ ಇಟ್ಟುಕೊಳ್ಳಬೇಡಿ. ಅಮ್ಮ ಒಮ್ಮೆ ನಿರ್ಧಾರ ಮಾಡಿದರೆ, ಅದನ್ನು ಬದಲಾಯಿಸುವುದಿಲ್ಲ. ಅಲ್ಲಿ ಹೋಗಿ ನಿಮ್ಮ ಮರ್ಯಾದೆಯನ್ನು ಕಳೆದುಕೊಳ್ಳಬೇಡಿ. ನೀವು ಮನವಿ ಮಾಡಿದ ಮೇಲೆ ನಾನು ಹೋಗಿ ಸಂಪುಟ ಸೇರುವ ಅವಶ್ಯಕತೆಯೂ ನನಗಿಲ್ಲ" ಎಂದು ವೀರಪ್ಪನ್‌ ಹೇಳಿದ್ದರು. ಆದರೂ ಈ ಬೆಳವಣಿಗೆ ರಜನಿಕಾಂತ್‌ರನ್ನು ತುಂಬ ಕಾಡುತ್ತಿತ್ತು.

ಇನ್ನು, ಅಧಿಕಾರಕ್ಕೆ ಬಂದ ಐದೇ ವರ್ಷದಲ್ಲಿ ಜಯಲಲಿತಾ ಸರ್ಕಾರವು ಸಾಕಷ್ಟು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿತು. ದತ್ತು ಮಗನ ಮದುವೆಯನ್ನು ಜಯಲಲಿತಾ ಅತ್ಯಂತ ವೈಭವದಿಂದ ನಡೆಸಿದ ಘಟನೆ ಜನರಲ್ಲಿ ಕೆಟ್ಟ ಅಭಿಪ್ರಾಯ ಉಂಟುಮಾಡಿತು. ಅಧಿಕಾರ ದುರುಪಯೋಗ ಮತ್ತು ಅಹಂಕಾರಶಾಹಿ ಆಡಳಿತ ಎಂಬ ಆರೋಪಗಳು ಹೆಚ್ಚಾದವು.

ಇದೆಲ್ಲದಕ್ಕಿಂತ ಹೆಚ್ಚಾಗಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಬಹಿರಂಗವಾಗಿ ನೀಡಿದ, "ಜಯಲಲಿತಾ ಮತ್ತೆ ಅಧಿಕಾರಕ್ಕೆ ಬಂದರೆ ತಮಿಳುನಾಡನ್ನು ದೇವರೂ ಕೂಡ ಉಳಿಸಲಾರ" ಎಂಬ ಹೇಳಿಕೆ ದೊಡ್ಡ ಸಂಚಲನವನ್ನು ಸೃಷ್ಟಿಸಿತು. ತಲೈವಾ ನೀಡಿದ ಈ ಹೇಳಿಕೆ ನಗರ ಮತ್ತು ಯುವ ಮತದಾರರ ಮೇಲೆ ದೊಡ್ಡ ಪರಿಣಾಮ ಬೀರಿತು.

ಅದು ಯಾವಮಟ್ಟಕ್ಕೆಂದರೆ, 1991ರಲ್ಲಿ 225 ಸ್ಥಾನ ಪಡೆದು ಅಧಿಕಾರಕ್ಕೇರಿದ್ದ ಜಯಲಲಿತಾ ಅವರ ಪಕ್ಷ 1996ರ ಚುನಾವಣೆಯಲ್ಲಿ ಪಡೆದುಕೊಂಡಿದ್ದು ಬರೀ 4 ಸ್ಥಾನಗಳನ್ನು ಮಾತ್ರ! ಸ್ವತಃ ಜಯಲಲಿತಾ ಕೂಡ ಚುನಾವಣೆಯಲ್ಲಿ ಸೋತರು. ರಜನಿಕಾಂತ್‌ ಅವರ ಸಹಾಯದಿಂದಾಗಿ ಅಂದು ಡಿಎಂಕೆ ಪಕ್ಷವು 221 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿತ್ತು.

ಅಮ್ಮ ಸಾವಿನ ಬಳಿಕೆ ರಜನಿಕಾಂತ್‌ ಹೇಳಿದ್ದೇನು?

2016ರಲ್ಲಿ ಜಯಲಲಿತಾ ಅವರು ನಿಧನರಾದರು. ಆಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ನಡಿಗರ್ ಸಂಘಂ’ (ಕಲಾವಿದರ ಸಂಘ) ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಜನಿಕಾಂತ್‌ ಭಾಗಿಯಾಗಿದ್ದರು. "ಅಂದು ನನ್ನ ಭಾಷಣದಿಂದ ಜಯಲಲಿತಾ ಅವರು ಹತಾಶರಾಗಿದ್ದರು. ಅವರು 1996ರ ಚುನಾವಣೆಯಲ್ಲಿ ಸೋಲುವಂತಾಗಲು ನಾನು ಪ್ರಮುಖ ಕಾರಣವಾಗಿದ್ದೆ" ಎಂದು ರಜನಿಕಾಂತ್‌ ಅವರು 20 ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪು ಮಾಡಿಕೊಂಡಿದ್ದರು.

ಹಳೆಯ ಘಟನೆಯನ್ನು ನೆನಪು ಮಾಡಿಕೊಂಡಿದ್ದ ರಜನಿಕಾಂತ್



"ನನ್ನ ಮಗಳ ಮದುವೆಗೆ ಜಯಲಲಿತಾರನ್ನು ಆಮಂತ್ರಿಸಲು ಹೋದಾಗ ನನ್ನ ಹೃದಯ ಭಾರವಾಗಿತ್ತು. ನನ್ನ ಮಗಳ ಮದುವೆಗೆ ಖಂಡಿತಾ ಅವರು ಬರುವುದಿಲ್ಲ ಎಂದುಕೊಂಡಿದ್ದೆ. ಆದರೆ ಆಹ್ವಾನ ಪತ್ರ ಸ್ವೀಕರಿಸಿದ ಅವರು, ʻಈ ಮದುವೆಗೆ ನಾನು ಬರುತ್ತೇನೆ, ಅಂದು ನಮ್ಮ ಪಕ್ಷದ ಕಾರ್ಯಕರ್ತರ ಮದುವೆ ಇದ್ದರೂ, ಮೊದಲು ನಿಮ್ಮ ಪುತ್ರಿ ಮದುವೆಗೆ ಬರುತ್ತೇನೆʼ ಎಂದಿದ್ದರು. ನನ್ನ ಮಗಳ ಮದುವೆಗೆ ಜಯಲಲಿತಾ ಆಗಮಿಸಿದ್ದು ನನ್ನನ್ನು ಅಚ್ಚರಿಗೆ ನೂಕಿತ್ತು. ಇಂತಹ ವಿಶಾಲ ಹೃದಯದ ನಾಯಕಿ ಇಂದು ನಮ್ಮೊಂದಿಗಿಲ್ಲ ಎಂಬುದೇ ಬೇಸರದ ವಿಷಯ. ಅವರು ಕೊಹಿನೂರ್ ವಜ್ರದಂತೆ ಎಂದಿಗೂ ಪ್ರಕಾಶಮಾನವಾಗಿ ಬೆಳಗುತ್ತಾರೆ" ಎಂದು ರಜನಿಕಾಂತ್‌ ತಿಳಿಸಿದ್ದರು.