ಸಣ್ಣ ವಿರಾಮದ ನಂತರ ಕನ್ನಡಿಗರ ಮೇಲೆ ಪುನಃ ಪರಭಾಷಾ ಸಿನಿಮಾಗಳ ದಬ್ಬಾಳಿಕೆ ಶುರುವಾಗಿದೆ. ‘ಸೂಪರ್ಸ್ಟಾರ್’ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15ರಂದು ತೆರೆಕಾಣುತ್ತಿದ್ದು, ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗುವುದರೊಂದಿಗೆ ದಕ್ಷಿಣ ಭಾರತದಾದ್ಯಂತ ಮುಂಜಾನೆಯ ಪ್ರದರ್ಶನಗಳಿಗೆ ಸಜ್ಜಾಗುತ್ತಿದೆ. ನೆಲ್ಸನ್ ನಿರ್ದೇಶನದ ಈ ಚಿತ್ರದ ಮೊದಲ ದಿನದ ಶೋಗಳ ಸಮಯ ಮತ್ತು ಟಿಕೆಟ್ ದರಗಳು ಈಗಾಗಲೇ ಎಲ್ಲರ ಗಮನ ಸೆಳೆದಿವೆ. ಎಂದಿನಂತೆ ಬೆಂಗಳೂರಿನಲ್ಲಿ ಟಿಕೆಟ್ ದರದ ಮೂಲಕ ಹಗಲು ದರೋಡೆ ಆರಂಭವಾಗಿದೆ.
ಬೆಂಗಳೂರಿನಲ್ಲಿ ದುಬಾರಿ ಟಿಕೆಟ್ ದರ!
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಮೊದಲ ಪ್ರದರ್ಶನಗಳು ಆರಂಭವಾಗಲು ನಿಗದಿಯಾಗಿದ್ದು, ಕೇರಳದಲ್ಲೂ ಬೆಳಿಗ್ಗೆ 6 ಗಂಟೆಯ ಶೋಗಳು ಕಾಣಿಸಿಕೊಂಡಿವೆ. ತಮಿಳುನಾಡಿನಲ್ಲಿ ಮಾತ್ರ ಬೆಳಿಗ್ಗೆ 8.30ಕ್ಕೆ ಮೊದಲ ಪ್ರದರ್ಶನಗಳು ಆರಂಭವಾಗುವ ನಿರೀಕ್ಷೆಯಿದೆ. ಈ ಮಧ್ಯೆ, ಬೆಂಗಳೂರಿನ ಆಯ್ದ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಬರೋಬ್ಬರಿ 1,600 ರಿಂದ 2,000 ರೂಪಾಯಿವರೆಗೆ ನಿಗದಿಯಾಗಿದೆ. ಉಳಿದಂತೆ, ಬೆಂಗಳೂರು ನಗರದಾದ್ಯಂತ ಮೊದಲ ದಿನದ ಸರಾಸರಿ ಟಿಕೆಟ್ ದರ ಸುಮಾರು 800 ರಿಂದ 1,000 ರೂಪಾಯಿಗಳ ಆಸುಪಾಸಿನಲ್ಲಿದೆ.
ಸಿಂಗಲ್ ಸ್ಕ್ರೀನ್ನಲ್ಲೂ ಲೂಟಿ
ಈ ಪ್ರೀಮಿಯಂ ದರಗಳು ಬೆಂಗಳೂರಿನ ಎಲ್ಲ ಚಿತ್ರಮಂದಿರಗಳಲ್ಲೂ ಒಂದೇ ರೀತಿ ಇಲ್ಲ. ಚಿತ್ರಮಂದಿರ, ಪ್ರದರ್ಶನದ ಸಮಯ ಮತ್ತು ಸ್ಕ್ರೀನ್ ಮಾದರಿಯನ್ನು ಆಧರಿಸಿ ದರಗಳು ಬದಲಾಗುತ್ತಿವೆ. ಅದರಲ್ಲೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನದ ಟಿಕೆಟ್ ದರ 1,000 ರೂಪಾಯಿ ಮುಟ್ಟಿರುವುದು ವಿಪರ್ಯಾಸ. ಸಾಮಾನ್ಯವಾಗಿ ಸಿಂಗಲ್ ಸ್ಕ್ರೀನ್ಗಳಲ್ಲಿ 100 ರಿಂದ 200 ರೂಪಾಯಿ ಟಿಕೆಟ್ ದರ ಇರುತ್ತದೆ. ಆದರೆ, ‘ಜೈಲರ್ 2’ ಚಿತ್ರಕ್ಕಾಗಿ ಮೊತ್ತವನ್ನು 1,000 ರೂಪಾಯಿವರೆಗೆ ಏರಿಸಿರುವುದು ಕನ್ನಡದ ಸಿನಿಪ್ರಿಯರ ಮೇಲೆ ಬರೆ ಎಳೆದಂತಾಗಿದೆ.
ತಮಿಳುನಾಡಿನಲ್ಲಿ 190 ರೂ. ಟಿಕೆಟ್ ದರ
ಆಂಧ್ರಪ್ರದೇಶದಲ್ಲಿ ಅಕ್ಟೋಬರ್ 15 ರಿಂದ 21 ರವರೆಗೆ, ಅಂದರೆ ಚಿತ್ರ ಪ್ರದರ್ಶನದ ಮೊದಲ ಏಳು ದಿನಗಳ ಕಾಲ ತಾತ್ಕಾಲಿಕವಾಗಿ ಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಸರ್ಕಾರದ ಆದೇಶದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಪ್ರತಿ ಟಿಕೆಟ್ಗೆ ಹೆಚ್ಚುವರಿಯಾಗಿ 50 ರೂಪಾಯಿ ಹಾಗೂ ಮಲ್ಟಿಪ್ಲೆಕ್ಸ್ಗಳು ಹೆಚ್ಚುವರಿಯಾಗಿ 75 ರೂಪಾಯಿ ವಿಧಿಸಬಹುದು.
ಈ ಅವಧಿಯಲ್ಲಿ ದಿನಕ್ಕೆ ಐದು ಪ್ರದರ್ಶನಗಳಿಗೆ ಅನುಮತಿ ನೀಡಲಾಗಿದೆ. ತೆಲಂಗಾಣದ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರಗಳು 295 ರಿಂದ 350 ರೂಪಾಯಿಗಳ ವ್ಯಾಪ್ತಿಯಲ್ಲಿದ್ದರೆ, ತಮಿಳುನಾಡಿನಲ್ಲಿ ಪ್ರಸ್ತುತ ಟಿಕೆಟ್ ದರ ಗರಿಷ್ಠ ಸುಮಾರು 190 ರೂಪಾಯಿಗಳಷ್ಟಿದೆ. ಆದರೆ ಕರ್ನಾಟಕದಲ್ಲಿ ಮಾತ್ರ 1,000 ರಿಂದ 2,000 ರೂಪಾಯಿವರೆಗೆ ಸುಲಿಗೆ ಮಾಡಲಾಗುತ್ತಿದೆ.
ಭಾರಿ ನಿರೀಕ್ಷೆ ಹೊತ್ತು ಬರುತ್ತಿರುವ ‘ಜೈಲರ್ 2’
2023ರಲ್ಲಿ ಭರ್ಜರಿ ಬಾಕ್ಸ್ ಆಫೀಸ್ ಯಶಸ್ಸು ಕಂಡ ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ರಜನಿಕಾಂತ್ ಮತ್ತೆ 'ಟೈಗರ್ ಮುತ್ತುವೇಲ್ ಪಾಂಡಿಯನ್' ಆಗಿ ತೆರೆಮೇಲೆ ಬರುತ್ತಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಮುಗಿಲುಮುಟ್ಟಿದೆ. ಸನ್ ಪಿಕ್ಚರ್ಸ್ ನಿರ್ಮಾಣದ ‘ಜೈಲರ್ 2’ ಚಿತ್ರದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು ಮತ್ತು ಮಿರ್ನಾ ಜೊತೆಗೆ ಮೋಹನ್ಲಾಲ್ ಹಾಗೂ ಶಿವರಾಜ್ಕುಮಾರ್ ಕೂಡ ಮುಂದುವರಿದಿದ್ದಾರೆ. ಇವರೊಂದಿಗೆ ವಿದ್ಯಾ ಬಾಲನ್, ಎಸ್. ಜೆ. ಸೂರ್ಯ, ಮಿಥುನ್ ಚಕ್ರವರ್ತಿ ಮತ್ತು ಸುರಾಜ್ ವೆಂಜಾರಮೂಡು ಸೇರಿದಂತೆ ಹಲವು ಪ್ರಮುಖ ತಾರಾಗಣ ಚಿತ್ರದಲ್ಲಿದೆ.