ʻಸೂಪರ್‌ಸ್ಟಾರ್ʼ ರಜನಿಕಾಂತ್ ಅವರ ಹವಾ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ, ಜಾಗತಿಕ ಮಟ್ಟದಲ್ಲೂ ಅವರ ಕ್ರೇಜ್ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸದ್ಯ ಸಿಂಗಾಪುರದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹೌದು, ಕರ್ತವ್ಯದ ಒತ್ತಡದ ನಡುವೆಯೂ ಜನರ ಗಮನ ಸೆಳೆಯಲು ಮುಂದಾಗಿರುವ ಸಿಂಗಾಪುರ ಕಸ್ಟಮ್ಸ್ ಇಲಾಖೆಯು, ‘ಜೈಲರ್ 2’ ಚಿತ್ರದ ‘ಹುಕುಮ್ ರಿಲೋಡೆಡ್’ ಹಾಡನ್ನು ಸಾರ್ವಜನಿಕ ಜಾಗೃತಿಗೆ ಬಳಸಿಕೊಂಡಿದ್ದಾರೆ.
ಜಾಗೃತಿ ಅಭಿಯಾನಕ್ಕೆ ರಜನಿಕಾಂತ್ ಜನಪ್ರಿಯತೆ ಬಳಕೆ
ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆಯ ‘ಹುಕುಮ್ ರಿಲೋಡೆಡ್’ ಹಾಡಿಗೆ ಸಿಂಗಾಪುರ ಕಸ್ಟಮ್ಸ್‌ನ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿನಿಮೀಯ ಶೈಲಿಯಲ್ಲಿ ಹೆಜ್ಜೆ ಹಾಕಿ ರೀಲ್ಸ್ ಮಾಡಿದ್ದಾರೆ. ಜೈಲಿನ ಕೋಣೆಗಳ ಹಿನ್ನೆಲೆಯಲ್ಲಿ ಕಸ್ಟಮ್ಸ್ ಮುಖ್ಯಸ್ಥರು ರಜನಿಕಾಂತ್ ಅವರ ಶೈಲಿಯಲ್ಲಿ ಖಡಕ್ ಎಂಟ್ರಿ ಕೊಡುವುದು ಮತ್ತು ಅವರೊಂದಿಗೆ ಇತರ ಅಧಿಕಾರಿಗಳು ಸಾಥ್ ನೀಡುವುದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
"ಎಂಟ್ರಿ ಕೇವಲ ರೀಲ್ (ರೀಲ್ಸ್), ಕಸ್ಟಮ್ಸ್ ಕೆಲಸ ಮಾತ್ರ ರಿಯಲ್ (ನಿಜ)" ಎಂಬ ಸಂದೇಶದೊಂದಿಗೆ ಕೊನೆಗೊಳ್ಳುವ ಈ ಕ್ಲಿಪ್, ರಜನಿಕಾಂತ್ ಅವರ ಜನಪ್ರಿಯತೆಯನ್ನು ಜಾಗೃತಿ ಅಭಿಯಾನಕ್ಕೆ ಬಳಸಿಕೊಂಡ ಅಪರೂಪದ ಪ್ರಯತ್ನವಾಗಿ ಮೆಚ್ಚುಗೆ ಗಳಿಸಿದೆ.
ಸಿಂಗಾಪುರದಲ್ಲಿ ವೈರಲ್ ಆಗಿರುವ ವಿಡಿಯೋ
ಥಿಯೇಟರ್‌ನಲ್ಲಿ ʻಜೈಲರ್ 2ʼ ಸಿನಿಮಾ ನೋಡಿದ ರಜನಿಕಾಂತ್
ಈ ಮಧ್ಯೆ ಬರೋಬ್ಬರಿ 4 ದಶಕಗಳ ಬಳಿಕ ರಜನಿಕಾಂತ್ ಅವರು ತಮ್ಮ ʻಜೈಲರ್ 2ʼ ಚಿತ್ರವನ್ನು ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜತೆ ಕುಳಿತು ವೀಕ್ಷಿಸಿದ್ದಾರೆ. ಶುಕ್ರವಾರ (ಅ.23) ರಾತ್ರಿ ಚೆನ್ನೈನ ವೇಲಾಚೇರಿಯಲ್ಲಿರುವ ಫೀನಿಕ್ಸ್ ಮಾರ್ಕೆಟ್‌ಸಿಟಿಯ ಪಿವಿಆರ್ ಮಲ್ಟಿಪ್ಲೆಕ್ಸ್‌ಗೆ ಆಗಮಿಸಿದ ಅವರು, ಮೊಮ್ಮಗ ಲಿಂಗಾ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ಜತೆ ಕುಳಿತು ಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ. ಈ ಕ್ಷಣದ ವಿಡಿಯೋವನ್ನು ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್, "40 ವರ್ಷಗಳ ನಂತರ ಮೊದಲ ಬಾರಿಗೆ ಸೂಪರ್‌ಸ್ಟಾರ್ ಅಭಿಮಾನಿಗಳ ಜತೆ ಕುಳಿತು ಸಿನಿಮಾ ನೋಡಿದ್ದಾರೆ" ಎಂದು ತಿಳಿಸಿದೆ.
ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ʻಜೈಲರ್ 2ʼ
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಮೆಗಾ ಬ್ಲಾಕ್‌ಬಸ್ಟರ್ ಚಿತ್ರವು 2023ರ ಸೂಪರ್‌ಹಿಟ್ ‘ಜೈಲರ್’ನ ಮುಂದುವರಿದ ಭಾಗವಾಗಿದ್ದು, ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ಮತ್ತೆ ಗತ್ತು ಪ್ರದರ್ಶಿಸಿದ್ದಾರೆ. ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ‘ರಾಡ್ಡಿ’ ಎಂಬ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ. ಅಕ್ಟೋಬರ್ 15ರಂದು ತೆರೆಕಂಡ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಈಗಾಗಲೇ ಚಿತ್ರದ ಗಳಿಕೆಯು 700 ಕೋಟಿ ರೂ. ಗಡಿಯಲ್ಲಿದೆ.