ʻಸೂಪರ್ಸ್ಟಾರ್ʼ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಧೂಳೀಪಟ ಮಾಡಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವಾದ್ಯಂತ ಬರೋಬ್ಬರಿ ₹549 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ತಮಿಳು ಚಿತ್ರರಂಗದಲ್ಲೇ ಸಾರ್ವಕಾಲಿಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಕುರಿತು ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಸನ್ ಪಿಕ್ಚರ್ಸ್’ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಂಕಿ-ಅಂಶಗಳನ್ನು ಪ್ರಕಟಿಸಿದ್ದು, ಕಾಲಿವುಡ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ₹500 ಕೋಟಿ ಗಡಿ ದಾಟಿದ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಜೈಲರ್ 2’ ಪಾತ್ರವಾಗಿದೆ.
ರಜನಿಕಾಂತ್ ಹೆಸರಲ್ಲಿ ಹೊಸ ದಾಖಲೆ
ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನ ಹಾಗೂ ರಜನಿಕಾಂತ್ ಕಾಂಬಿನೇಷನ್ನಲ್ಲಿ ಅಕ್ಟೋಬರ್ 15ರಂದು ತೆರೆಕಂಡ ಈ ಚಿತ್ರಕ್ಕೆ ಮೊದಲ ಪ್ರದರ್ಶನದಿಂದಲೇ ವಿಶ್ವಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಹಬ್ಬದ ರಜಾ ದಿನಗಳು ಜೊತೆಯಾಗಿದ್ದರಿಂದ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಬೋರ್ಡ್ಗಳು ರಾರಾಜಿಸಿದವು. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರು ಹಾಗೂ ಗಣ್ಯರಿಂದ ಪ್ರಶಂಸೆ ವ್ಯಕ್ತವಾದ ಕಾರಣ, ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಚಿತ್ರಮಂದಿರಗಳನ್ನು ಸೇರಿಸಲಾಯಿತು. ಈ ಮುನ್ನ ‘2.0’, ‘ಜೈಲರ್’ ಮತ್ತು ‘ಕೂಲಿ’ ಚಿತ್ರಗಳ ಮೂಲಕ ₹500 ಕೋಟಿಗೂ ಅಧಿಕ ಗಳಿಕೆ ಕಂಡಿದ್ದ ರಜನಿಕಾಂತ್, ಈಗ ನಾಲ್ಕನೇ ಬಾರಿಗೆ ಈ ಮೈಲಿಗಲ್ಲು ತಲುಪುವ ಮೂಲಕ ದಕ್ಷಿಣ ಭಾರತದ ಬಾಕ್ಸ್ ಆಫೀಸ್ ಸುಲ್ತಾನ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಅಧಿಕೃತ ಮಾಹಿತಿ ನೀಡಿದ ನಿರ್ಮಾಣ ಸಂಸ್ಥೆ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್ ಅಂಕಿ-ಅಂಶಗಳನ್ನು ಯಾರೂ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಕೆಲವರಂತೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಸುಳ್ಳು ಮಾಹಿತಿ ನೀಡುತ್ತಾರೆ. ಆದರೆ ಸನ್ ಪಿಕ್ಚರ್ಸ್ ಸಂಸ್ಥೆಯು ನಿಖರ ವರದಿ ನೀಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರವು 575 ಕೋಟಿ ರೂ. ಮುಟ್ಟಿಲ್ಲ ಎಂಬ ವದಂತಿಗಳಿಗೆ ತೆರೆ ಎಳೆದ ಸಂಸ್ಥೆ, ಮೊದಲ ವಾರದ ಕಲೆಕ್ಷನ್ ನಿಖರವಾಗಿ 549 ಕೋಟಿ ರೂ. ದಾಟಿದೆ ಎಂದು ಸ್ಪಷ್ಟಪಡಿಸಿದೆ.
ದೀಪಾವಳಿ ಹಬ್ಬದವರೆಗೂ ಯಾವುದೇ ಪ್ರಮುಖ ಪೈಪೋಟಿ ಇಲ್ಲದಿರುವುದರಿಂದ, ಅಂದಾಜು 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ 800 ಕೋಟಿ ರೂ.ಗಳಿಗೂ ಹೆಚ್ಚು ಥಿಯೇಟ್ರಿಕಲ್ ಕಲೆಕ್ಷನ್ ಮಾಡುವುದು ಖಚಿತವಾಗಿದೆ. ಇದರ ಜೊತೆಗೆ ಒಟಿಟಿ, ಸ್ಯಾಟಲೈಟ್ ಹಾಗೂ ಆಡಿಯೋ ಹಕ್ಕುಗಳ ರೂಪದಲ್ಲೂ ಸನ್ ಪಿಕ್ಚರ್ಸ್ಗೆ ಬೃಹತ್ ಮೊತ್ತದ ಲಾಭ ಸಿಗಲಿದೆ.
ಕರ್ನಾಟಕದಲ್ಲೂ ಸಾರ್ವಕಾಲಿಕ ದಾಖಲೆ ಬರೆದ ತಲೈವಾ
ತಮಿಳುನಾಡು ಮಾತ್ರವಲ್ಲದೆ ಕರ್ನಾಟಕದಲ್ಲೂ ‘ಜೈಲರ್ 2’ ಕಲೆಕ್ಷನ್ ಸುನಾಮಿ ಸೃಷ್ಟಿಸಿದೆ. ಖ್ಯಾತ ನಿರ್ಮಾಪಕ, ವಿತರಕ ಕೆ. ಮಂಜು ಅವರಿಗೆ ಇದು ವೃತ್ತಿಜೀವನದ ಅತಿ ದೊಡ್ಡ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದೆ. ಮೊದಲ ವಾರದಲ್ಲಿ ರಾಜ್ಯಾದ್ಯಂತ ಬರೋಬ್ಬರಿ 62.41 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ, ಕರ್ನಾಟಕದಲ್ಲಿ ಕಾಲಿವುಡ್ ಚಿತ್ರವೊಂದು ಮೊದಲ ವಾರದಲ್ಲಿ ದಾಖಲಿಸಿದ ಸಾರ್ವಕಾಲಿಕ ಗರಿಷ್ಠ ಗಳಿಕೆ ಎಂಬ ಹೊಸ ದಾಖಲೆ ಬರೆದಿದೆ.
ʻಜೈಲರ್ 2ʼ ಸಿನಿಮಾದ ಕಲೆಕ್ಷನ್ ರಿಪೋರ್ಟ್
ಮೊದಲ ದಿನ 14.70 ಕೋಟಿಯೊಂದಿಗೆ ಭರ್ಜರಿ ಓಪನಿಂಗ್ ಪಡೆದ ಚಿತ್ರ, ಎರಡನೇ ದಿನ 7.10 ಕೋಟಿ, ಮೂರನೇ ದಿನ 9.07 ಕೋಟಿ, ನಾಲ್ಕನೇ ದಿನ 10.02 ಕೋಟಿ, ಐದನೇ ದಿನ 6.63 ಕೋಟಿ, ಆರನೇ ದಿನ 8.17 ಕೋಟಿ ಹಾಗೂ ಏಳನೇ ದಿನ 6.72 ಕೋಟಿ ಗಳಿಸುವ ಮೂಲಕ ಹಿಂದಿನ ‘ಜೈಲರ್’ ಚಿತ್ರದ ಮೊದಲ ವಾರದ ದಾಖಲೆಯನ್ನು ಪುಡಿಗಟ್ಟಿದೆ.