ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Rajinikanth: ಕಮಲ್‌ ಹಾಸನ್‌ ಜತೆಗಿನ ಚಿತ್ರದ ಬಳಿಕ ನಟನೆಗೆ ರಜನಿಕಾಂತ್‌ ವಿದಾಯ?

ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌ ಹೊರ ಬಿದ್ದಿದೆ. ಅದೇನಪ್ಪ ಎಂದರೆ ಅವರು ನಟನೆಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ. ಕಮಲ್‌ ಹಾಸನ್‌ ಜತೆಗಿನ ಚಿತ್ರದ ಬಳಿಕ ರಜನಿಕಾಂತ್‌ ನಟನೆಯಿಂದ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅದಾಗಲೇ ಫ್ಯಾನ್ಸ್‌ ಆಘಾತ ವ್ಯಕ್ತಪಡಿಸುತ್ತಿದ್ದಾರೆ.

ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌

ಚೆನ್ನೈ, ಅ. 28: ಕಾಲಿವುಡ್‌ ಸೂಪರ್‌ ಸ್ಟಾರ್‌ಗಳಾದ ರಜನಿಕಾಂತ್‌ (Rajinikanth) ಮತ್ತು ಕಮಲ್‌ ಹಾಸನ್‌ (Kamal Haasan) ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇಬ್ಬರ ಅಭಿಮಾನಿಗಳೂ ಥ್ರಿಲ್‌ ಆಗಿದ್ದಾರೆ. ಬರೋಬ್ಬರಿ 4 ದಶಕಗಳ ಬಳಿಕ ಇವರು ಜತೆಯಾಗಿ ಅಭಿನಯಿಸಲಿದ್ದು, ಈಗಾಗಲೇ ಕುತೂಹಲ, ನಿರೀಕ್ಷೆ ಹುಟ್ಟುಹಾಕಿದೆ. ಈ ಮಧ್ಯೆ ಇದೀಗ ರಜನಿಕಾಂತ್‌ ಫ್ಯಾನ್ಸ್‌ಗೆ ಬ್ಯಾಡ್‌ ನ್ಯೂಸ್‌ ಕೂಡ ಹೊರ ಬಿದ್ದಿದೆ. ಈ ಚಿತ್ರದ ಬಳಿಕ ರಜನಿಕಾಂತ್‌ ನಟನೆಯಿಂದ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ.

ವಿಭಿನ್ನ ಸ್ಟೈಲ್‌, ವಿಶಿಷ್ಟ ಮ್ಯಾನರಿಸಂನಿಂದಲೇ ಭಾರತೀಯ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದ ರಜನಿಕಾಂತ್‌ ಅವರಿಗೆ ಈಗ 74 ವರ್ಷ. ಈ ಇಳಿ ವಯಸ್ಸಿನಲ್ಲೂ ಅವರು ಸಿನಿಮಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸರಾಸರಿ ವರ್ಷಕ್ಕೊಂದರಂತೆ ಚಿತ್ರ ಮಾಡುತ್ತಿದ್ದಾರೆ. ಈಗಲೂ ಅವರು ತೆರೆ ಮೇಲೆ ಬಂದಾಗ ವಿಷಲ್‌ ಹೊಡೆಯುವವರ ಸಂಖ್ಯೆಗೆ ಕಡಿಮೆ ಏನಿಲ್ಲ. ಘೋಷಣೆಯಾದಾಗಿನಿಂದಲೇ ಅವರ ಚಿತ್ರಕ್ಕಾಗಿ ಕಾದು ಕೂರುವವರೂ ಇದ್ದಾರೆ. ಇಷ್ಟೆಲ್ಲ ಛಾಪು ಮೂಡಿರುವ ಅವರು ಚಿತ್ರರಂಗಕ್ಕೆ ಗುಡ್‌ ಬೈ ಹೇಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಅದಾಗ್ಯೂ ಈ ಬಗ್ಗೆ ರಜನಿಕಾಂತ್‌ ಅಧಿಕೃತ ಹೇಳಿಕೆ ನೀಡಿಲ್ಲ.

ಈ ಸುದ್ದಿಯನ್ನೂ ಓದಿ: Rajinikanth And Kamal Haasan: ರಜನಿ- ಕಮಲ್ ಕಾಂಬಿನೇಶನ್ ಹೊಸ ಸಿನಿಮಾ ಘೋಷಣೆ; ನಿರ್ದೇಶಕ ಯಾರು ಗೊತ್ತಾ?

ಸದ್ಯ ರಜನಿಕಾಂತ್‌ ನೆಲ್ಸನ್‌ ನಿರ್ದೇಶನದ ʼಜೈಲರ್‌ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2023ರಲ್ಲಿ ತೆರೆಕಂಡ ʼಜೈಲರ್‌ʼ ಚಿತ್ರದ ಸೀಕ್ವೆಲ್‌ ಇದಾಗಿದ್ದು, ಶೂಟಿಂಗ್‌ ಭರದಿಂದ ಸಾಗಿದೆ. ನೆಲ್ಸನ್‌ ಅವರೇ ರಜನಿಕಾಂತ್‌-ಕಮಲ್‌ ಹಾಸನ್‌ ಕಾಂಬಿನೇಷನ್‌ನ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ವರದಿಯೊಂದರ ಪ್ರಕಾರ ನೆಲ್ಸನ್‌ ನಿರ್ದೇಶನದಲ್ಲಿ ಮೂಡಿ ಬರಲಿರುವ ರಜನಿಕಾಂತ್‌-ಕಮಲ್‌ ಹಾಸನ್‌ ನಟನೆಯ ಚಿತ್ರದ ಬಳಿಕ ತಲೈವಾ ನಿವೃತ್ತಿ ಪಡೆದುಕೊಳ್ಳಲಿದ್ದಾರೆ. ಈ ಚಿತ್ರ ಮುಂದಿನ ವರ್ಷ ಸೆಟ್ಟೇರಲಿದೆ. ಚಿತ್ರಕಥೆಗೆ ಬಹಳಷ್ಟು ಸಮಯ ತೆಗೆದುಕೊಳ್ಳಲಿದ್ದು, 2027ರಲ್ಲಿ ಇದು ತೆರೆಗೆ ಬರುವ ಸಾಧ್ಯತೆ ಇದೆ.

ʼಜೈಲರ್‌ 2' ಬಳಿಕ ಕಮಲ್‌ ಹಾಸನ್‌ ಒಡೆತನದ ಚಿತ್ರ ನಿರ್ಮಾಣ ಸಂಸ್ಥೆ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಬ್ಯಾನರ್‌ನಡಿ ಸುಂದರ್‌ ಸಿ. ನಿರ್ದೇಶಿಸುತ್ತಿರುವ ಚಿತ್ರದಲ್ಲಿ ರಜನಿಕಾಂತ್‌ ನಟಿಸಲಿದ್ದಾರೆ. ಇದಾದ ನಂತರ ಕಮಲ್‌-ರಜನಿಕಾಂತ್‌ ಕಾಂಬಿನೇಷನ್‌ನ ಚಿತ್ರವನ್ನೂ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ನಿರ್ಮಿಸಲಿದೆ ಎನ್ನಲಾಗಿದೆ. ಆ ಮೂಲಕ ರಜನಿಕಾಂತ್‌ ಅವರ ಸತತ 2 ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಈ ಬ್ಯಾನರ್‌ನದ್ದಾಗಲಿದೆ.

ಸದ್ಯ ರಜನಿಕಾಂತ್‌-ಕಮಲ್‌ ಹಾಸನ್‌ ಚಿತ್ರದ ಕಥೆಯ ಗುಟ್ಟು ಹೊರಬಿದ್ದಿಲ್ಲ. ಇದು ಗ್ಯಾಂಗ್‌ಸ್ಟರ್‌ ಹಿನ್ನೆಲೆಯ ಚಿತ್ರವಾಗಿರುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತಾದರೆ ರಜನಿಕಾಂತ್‌ ಮತ್ತು ಕಮಲ್‌ ಆಹಾಸನ್‌ ಬರೋಬ್ಬರಿ 40 ವರ್ಷಗಳ ಬಳಿಕ ಒಟ್ಟಿಗೆ ನಟಿಸಿದಂತಾಗಲಿದೆ. 1985ರಲ್ಲಿ ರಿಲೀಸ್‌ ಆದ ʼಗೆರಾಫ್ತಾರ್ʼ ಹಿಂದಿ ಚಿತ್ರದಲ್ಲಿ ಕಮಲ್‌ ಹಾಸನ್‌ ಮತ್ತು ರಜನಿಕಾಂತ್‌ ಜತೆಯಾಗಿ ನಟಿಸಿದ್ದರು. ಸದ್ಯ ರಜನಿಕಾಂತ್‌ ನಿವೃತ್ತಿ ಸುದ್ದಿ ಕೇಳಿ ಅವರ ಫ್ಯಾನ್ಸ್‌ ಬೇಸರ ವ್ಯಕ್ತಪಡಿಸಿದ್ದಾರೆ.