ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕಳೆದ 26 ವರ್ಷಗಳಿಂದ ಅನೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ನಮ್ಮನ್ನೆಲ್ಲಾ ನಗಿಸಿದವರು. ಫಿರ್ ಹೇರಾ ಫೇರಿ, ಭೂಲ್ ಭುಲೈಯಾ, ಹಂಗಾಮ, ಚುಪ್ ಚುಪ್ ಕೇ, ಗರಂ ಮಸಾಲಾ ಮುಂತಾದ ಸಿನಿಮಾಗಳಲ್ಲಿ ರಾಜ್‌ಪಾಲ್ ಕಾಮಿಡಿಗೆ ನಗದೇ ಇರುವವರೇ ಇಲ್ಲ. ಆದರೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಈ ನಟ ಈಗ ತಿಹಾರ್ ಜೈಲಿನಲ್ಲಿ ದಿನ ದೂಡುತ್ತಿದ್ದಾರೆ!
ಎಲ್ಲರಿಗೂ ಗೊತ್ತಿರುವಂತೆ, ಚೆಕ್ ಬೌನ್ಸ್ ಕೇಸ್‌ನಲ್ಲಿ ರಾಜ್‌ಪಾಲ್ ಯಾದವ್‌ಗೆ ಸಂಕಷ್ಟ ಎದುರಾಗಿದೆ. ಅವರೀಗ ಜೈಲು ಸೇರದೇ ವಿಧಿ ಇಲ್ಲ! 200ಕ್ಕೂ ಅಧಿಕ ಸಿನಿಮಾ ಮಾಡಿದ ಬೇಡಿಕೆಯ ನಟನಿಗೆ ಅಷ್ಟೊಂದು ಸಾಲವಿತ್ತಾ? ಸಾಲ ಪಾವತಿ ಮಾಡಲಾಗದೇ ಚೆಕ್ ಬೌನ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ರಾ ಅಂತ ನೀವು ಅಂದುಕೊಳ್ಳಬಹುದು. ಅಷ್ಟಕ್ಕೂ ಈ ಕೇಸ್‌ನತ್ತ ನೋವುದಾದರೆ..
2010ರಲ್ಲಿ ಮುಳ್ಳಾಯ್ತು ಅದೊಂದು ಸಿನಿಮಾ!
ಕಾಮಿಡಿ ರೋಲ್‌ಗಳಲ್ಲಿ ಎಲ್ಲರನ್ನು ನಗಿಸಿಕೊಂಡು ಆರಾಮಾಗಿದ್ದ ನಟ ರಾಜ್‌ಪಾಲ್ ಯಾದವ್‌ಗೆ ಅದೊಂದು ದಿನ ಸಿನಿಮಾ ನಿರ್ದೇಶನ ಮಾಡುವ ಬಯಕೆ ಉಂಟಾಯಿತು. ಆಗ ಶುರವಾಗಿದ್ದೇ 'ಅತಾ ಪತಾ ಲಾಫತಾ' (Ata Pata Laapata) ಸಿನಿಮಾ. 2010ರಲ್ಲಿ ಈ ಸಿನಿಮಾವನ್ನು ನಿರ್ದೇಶಿಸಲು ರಾಜ್‌ಪಾಲ್ ಮುಂದಾಗುತ್ತಾರೆ. ಜೊತೆಗೆ ಅವರೇ ಈ ಚಿತ್ರದ ನಿರ್ಮಾಪಕ ಕೂಡ.
Rajpal Yadav: ತಿಹಾರ್ ಜೈಲಿನಲ್ಲಿ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್; ಏನಿದು ಪ್ರಕರಣ?
ತಮ್ಮ ಪತ್ನಿ ರಾಧಾ ಅವರ ಹೆಸರಿನಲ್ಲಿ 'ಅತಾ ಪತಾ ಲಾಫತಾ' ಸಿನಿಮಾವನ್ನು ನಿರ್ಮಾಣ ಮಾಡಲು ಸಿದ್ಧರಾದ ರಾಜ್, ಅದಕ್ಕಾಗಿ ದೆಹಲಿ ಮೂಲದ 'ಮುರಳಿ ಪ್ರಾಜೆಕ್ಟ್ಸ್' ಎಂಬ ಕಂಪನಿಯಿಂದ 5 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳುತ್ತಾರೆ. ಅಲ್ಲಿಂದ ಶುರುವಾಯಿತು ನೋಡಿ ಸಮಸ್ಯೆ!
ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು
ಹೀರೋ, ನಿರ್ದೇಶನ, ನಿರ್ಮಾಣ ಎಲ್ಲವನ್ನು ನಿಭಾಯಿಸಲು ರಾಜ್ ಸೋಲುತ್ತಾರೆ. 'ಅತಾ ಪತಾ ಲಾಫತಾ' ಸಿನಿಮಾ ಸೋಲುತ್ತದೆ. ಸುಮಾರು 175ಕ್ಕೂ ಅಧಿಕ ಕಲಾವಿದರಿದ್ದ ಈ ಚಿತ್ರವನ್ನು ಪ್ರೇಕ್ಷಕ ಕ್ಯಾರೆ ಎನ್ನುವುದಿಲ್ಲ. ಅಂತಿಮವಾಗಿ ಸುಮಾರು 5 ಕೋಟಿ ರೂ. ಸಾಲವನ್ನು ರಾಜ್‌ಪಾಲ್ ಮೈಮೇಲೆ ಎಳೆದುಕೊಳ್ಳುತ್ತಾರೆ. ಅಷ್ಟೊಂದು ಹಣವನ್ನು ಅವರು ವಾಪಸ್ ನೀಡಲು ಸಾಧ್ಯವಾಗುವುದಿಲ್ಲ. ಕೊಟ್ಟ ಚೆಕ್‌ಗಳು ಬೌನ್ಸ್ ಆದವು. ಪ್ರಕರಣ ಕೋರ್ಟ್ ಮೆಟ್ಟಿಲೇರಿತು.
ಅಸಲು ಬಡ್ಡಿ ಸೇರಿ ಈ ಮೊತ್ತ ಈಗ 10 ಕೋಟಿ ರೂ. ದಾಟಿದೆಯಂತೆ. ಸಾಲು ತೀರಿಸಲು ಹಲವು ಬಾರಿ ಕೋರ್ಟ್ ರಾಜ್‌ಪಾಲ್‌ಗೆ ಕಾಲಾವಕಾಶ ನೀಡಿತ್ತು. ಆದರೆ, ಸರಿಯಾದ ಸಮಯಕ್ಕೆ ಹಣ ಹೊಂದಿಸಲು ರಾಜ್ ವಿಫಲರಾದರು. ಇದೀಗ ಅವರು ನ್ಯಾಯಾಲಯದ ಆದೇಶದ ಮೇರೆಗೆ ಶರಣಾಗಿರುವ ರಾಜ್, ತಿಹಾರ್ ಜೈಲಿನಲ್ಲಿದ್ದಾರೆ.
Rajpal Yadav : ಪೊಲೀಸರಿಗೆ ಶರಣಾಗುವಂತೆ ನಟ ರಾಜ್‌ಪಾಲ್ ಯಾದವ್‌ಗೆ ಹೈಕೋರ್ಟ್ ಆದೇಶ; ಕಾರಣ ಇದು
ಜೈಲಿಗೆ ಹೋಗುವ ಮುನ್ನ ಈ ಬಗ್ಗೆ ಮಾತನಾಡಿದ್ದ ರಾಜ್‌ಪಾಲ್ ಯಾದವ್, "ಸರ್, ನಾನು ಏನು ಮಾಡಲಿ? ನನ್ನ ಬಳಿ ದುಡ್ಡಿಲ್ಲ. ನನಗೆ ಬೇರೆ ದಾರಿ ಕಾಣುತ್ತಿಲ್ಲ. ಇಲ್ಲಿ ನಾನು ಒಬ್ಬಂಟಿಯಾಗಿದ್ದೇನೆ. ಈ ಬಿಕ್ಕಟ್ಟನ್ನು ನಾನೇ ನಿಭಾಯಿಸಬೇಕು" ಎಂದು ಹೇಳಿಕೊಂಡಿದ್ದರು. ಇವತ್ತು 5-10 ಸಿನಿಮಾ ಮಾಡಿದ ಯಶಸ್ವಿ ಕಲಾವಿದರು ಆರ್ಥಿಕವಾಗಿ ದೊಡ್ಡಮಟ್ಟದಲ್ಲಿ ಸೆಟ್ಲ್ ಆಗುತ್ತಿದ್ದಾರೆ. ಆದರೆ, 26 ವರ್ಷಗಳಿಂದ ಚಿತ್ರರಂಗದಲ್ಲಿದ್ದು, 200ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿರುವ ಬೇಡಿಕೆಯ ನಟನಿಗೆ ಈ ಪರಿಸ್ಥಿತಿ ಬಂದಿರುವುದು ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ.
ಸಹಾಯಕ್ಕೆ ಧಾವಿಸಿದ ನಟ ಸೋನು ಸೂದ್
ಅಂದಹಾಗೆ, ಬಾಲಿವುಡ್ ನಟ ಸೋನು ಸೂದ್ ಅವರು ರಾಜ್‌ಪಾಲ್ ಸಹಾಯಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, "ರಾಜ್‌ಪಾಲ್ ಯಾದವ್ ಒಬ್ಬ ಅದ್ಭುತ ಕಲಾವಿದ. ಅವರು ನಮ್ಮ ಚಿತ್ರರಂಗಕ್ಕೆ ಮರೆಯಲಾಗದಂತಹ ಕೊಡುಗೆಯನ್ನು ನೀಡಿದ್ದಾರೆ. ಕೆಲವೊಮ್ಮೆ ಪ್ರತಿಭೆ ಇದ್ದರೂ, ಸಮಯದ ಹೊಡೆತದಿಂದಾಗಿ ಜೀವನವು ಕಠಿಣವಾಗಬಹುದು. ಅವರು ನನ್ನ ಸಿನಿಮಾದ ಭಾಗವಾಗಲಿದ್ದಾರೆ. ಈ ಸಮಯದಲ್ಲಿ ನಿರ್ಮಾಪಕರು, ನಿರ್ದೇಶಕರು ಮತ್ತು ಸಹೋದ್ಯೋಗಿಗಳಾದ ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕಾದ ಅಗತ್ಯವಿದೆ ಎಂದು ನಾನು ನಂಬಿದ್ದೇನೆ.
ಅವರ ಮುಂದಿನ ಕೆಲಸಕ್ಕೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಈಗಲೇ ನೀಡುವ ಒಂದು ಸಣ್ಣ ಮೊತ್ತದ ಮುಂಗಡ ಹಣವು ದಾನವಲ್ಲ, ಅದು ಅವರ ಸ್ವಾಭಿಮಾನಕ್ಕೆ ನೀಡುವ ಗೌರವ. ನಮ್ಮವರಲ್ಲೊಬ್ಬರು ಕಷ್ಟದ ದಿನಗಳನ್ನು ಎದುರಿಸುತ್ತಿರುವಾಗ, ಅವರು ಒಂಟಿಯಲ್ಲ ಎಂಬ ಧೈರ್ಯವನ್ನು ಇಡೀ ಚಿತ್ರರಂಗ ಅವರಿಗೆ ತುಂಬಬೇಕಿದೆ. ನಾವು ಕೇವಲ ಒಂದು ಉದ್ಯಮವಲ್ಲ, ಅದಕ್ಕೂ ಮಿಗಿಲಾದವರು ಎಂಬುದನ್ನು ತೋರಿಸಿಕೊಡಲು ಇದೇ ಸರಿಯಾದ ಸಮಯ" ಎಂದು ಬರೆದುಕೊಂಡಿದ್ದಾರೆ.
ನಟ ರಾಜ್‌ಪಾಲ್ ಯಾದವ್ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಂದ ಬೇಗನೇ ಆಚೆ ಬರಲಿ. ಮತ್ತೆ ಸಿನಿಪ್ರಿಯರನ್ನು ಬೆಳ್ಳಿ ತೆರೆಮೇಲೆ ರಂಜಿಸಲಿ.