ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Rajkumar ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಜಗ್ಗೇಶ್‌; 'ಈ ಚಿತ್ರ ನೋಡಿ ಭಾವುಕನಾಗಿಬಿಟ್ಟೆ' ಎಂದ ನವರಸ ನಾಯಕ

‌Dr Rajkumar: ನಟ ಜಗ್ಗೇಶ್‌ ಅವರು ಅಪರೂಪದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಜೊತೆಗಿನ 1992ರಲ್ಲಿನ ಅಪರೂಪದ ಫೋಟೋಗಳು ಇದಾಗಿದ್ದು, ಛಾಯಾಗ್ರಾಹಕ ಪ್ರವೀಣ್ ನಾಯಕ್ ಅವರು ಈ ಫೋಟೋಗಳನ್ನು ಸೆರೆಹಿಡಿದಿದ್ದಾರೆ.

ರಾಜ್ಯ ಸಭಾ ಸದಸ್ಯ, ʻನವರಸ ನಾಯಕʼ ಜಗ್ಗೇಶ್‌ ಅವರು ಆಗಾಗ ಅಪರೂಪವಾದ ವಿಶೇಷ ಫೋಟೋಗಳನ್ನು ಹಳೆಯ ಘಟನೆಗಳನ್ನು ಮೆಲುಕು ಹಾಕುತ್ತಿರುತ್ತಾರೆ. ಅಂದಹಾಗೆ, ವರನಟ ಡಾ. ರಾಜ್‌ಕುಮಾರ್‌ ಎಂದರೆ, ಜಗ್ಗೇಶ್‌ ಎಷ್ಟೊಂದು ಅಭಿಮಾನಿಸುತ್ತಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಆಗಾಗ ಅಣ್ಣಾವ್ರ ಬಗ್ಗೆ ಜಗ್ಗೇಶ್‌ ಅವರು ಮಾತನಾಡುತ್ತಿರುತ್ತಾರೆ. ಸದ್ಯ ಅವರೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದಾರೆ. ಇವು ಕೂಡ ಡಾ. ರಾಜ್‌ಕುಮಾರ್ ಅವರ ಜೊತೆಗಿನ ಅಪರೂಪದ ಕ್ಷಣಗಳ ಫೋಟೋಗಳು ಎಂಬುದು ವಿಶೇಷ.

ಪ್ರವೀಣ್‌ ನಾಯಕ್‌ ಸೆರೆಹಿಡಿದ ಫೋಟೋಗಳು

ಡಾ. ರಾಜ್‌ಕುಮಾರ್‌ ಅವರಿಗೆ ಆಪ್ತರಾಗಿದ್ದ ಛಾಯಾಗ್ರಾಹಕ ಪ್ರವೀಣ್‌ ನಾಯಕ್‌ ಅವರು ಈಚೆಗೆ ಒಂದೆರಡು ಅಪರೂಪದ ಫೋಟೋಗಳನ್ನ ಹಂಚಿಕೊಂಡಿದ್ದರು. ಅದು ಡಾ. ರಾಜ್‌ಕುಮಾರ್‌ ಅವರನ್ನು ಜಗ್ಗೇಶ್‌ ಅವರ ಕುಟುಂಬ ಭೇಟಿ ಮಾಡಿದ್ದ ಕ್ಷಣಗಳ ಫೋಟೋಗಳಾಗಿದ್ದವು. "ಹಾಗೇ ಸುಮ್ಮನೆ ನಾನು ಕ್ಲಿಕ್ಕಿಸಿದ ಹಳೆಯ ಚಿತ್ರಗಳನ್ನು ನೋಡುತ್ತಿದ್ದಾಗ ಜಗ್ಗೇಶ್ ಅವರ ಅಪರೂಪದ ಈ ಎರಡು ಚಿತ್ರಗಳು ಸಿಕ್ಕಿದವು" ಎಂದು ಹೇಳಿಕೊಂಡಿದ್ದರು. ಇದೀಗ ಆ ಅಪರೂಪದ ಫೋಟೋಗಳನ್ನು ಹಂಚಿಕೊಂಡಿರುವ ನಟ ಜಗ್ಗೇಶ್‌, "ಫೋಟೋ ಕೃಪೆ ಪ್ರವೀಣ್ ನಾಯಕ್.. ಕಳಿಸಿಕೊಟ್ಟವ ಯುವಮಿತ್ರ ಯೋಗಿಗೌಡ.. ಧನ್ಯವಾದಗಳು.." ಎಂದು ಹೇಳಿದ್ದಾರೆ.

ಡಾ. ರಾಜ್‌ಕುಮಾರ್‌ ಅವರು ಹಾಸ್ಯರತ್ನ ಇದ್ದಂತೆ

"ರಾಜಣ್ಣ ಹಾಸ್ಯರತ್ನ ಇದ್ದಂತೆ.. ಸಣ್ಣದಾಗಿ ಹಾಸ್ಯ ಮಾಡಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು.. ಈ ಚಿತ್ರ ನೋಡಿ ತುಂಬ ಭಾವುಕನಾಗಿಬಿಟ್ಟೆ.. ಕಾರಣ ರಾಜಣ್ಣನ ಗುಣ ನೆನೆದು, ಹಿಮಾಲಯ ಪರ್ವತದ ಎತ್ತರದ ನಟರಾದರು ಸಹಕಲಾವಿದರಿಗೆ ಒಬ್ಬ ಅಣ್ಣನಂತೆ, ತಂದೆಯಂತೆ ಪ್ರೀತಿ ತೋರಿ ಸಂತೋಷ ಹಂಚುತ್ತಿದ್ದರು.." ಎಂದು ಜಗ್ಗೇಶ್‌ ಅವರು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಜಗ್ಗೇಶ್‌ ಹಂಚಿಕೊಂಡ ಪೋಸ್ಟ್‌



ನಾನು ಅವರಿಗೆ ಆಂಜನೇಯ

"ಇಂಥ ಶ್ರೇಷ್ಠ ರಾಜಋಷಿಗಳ ಸಂಪರ್ಕದಲ್ಲಿ ಬೆಳೆವ ಸೌಭಾಗ್ಯ ಸಿಕ್ಕದ್ದು ನನ್ನ ಜನ್ಮಾಂತರ ಪುಣ್ಯ. ಕಡೆಯವರೆಗೂ ಅವರ ದೃಷ್ಟಿಯಲ್ಲಿ ನಾನು ಅವರಿಗೆ (ನಮ್ಮ) ಆಂಜನೇಯ ಆಗಿದ್ದೆ.. ಐದು ವರ್ಷದ ಗುರುರಾಜ ಕೈಗೂಸು, ಯತಿರಾಜ, ಮಡದಿ ಪರಿಮಳಾ.... ರಾಜಣ್ಣನ ಜೊತೆ ಇದ್ದ ಮಧುರ ಕ್ಷಣ ಅದ್ಭುತ ಅನನ್ಯ ಅಮೋಘ.. 1992ರ ಚಿತ್ರ.. ಆದರೆ ತೆಗೆದ ಜಾಗ ಮತ್ತು ಸನ್ನಿವೇಶ ಮರೆತಿರುವೆ..." ಎಂದು ಜಗ್ಗೇಶ್‌ ಅವರು ಹೇಳಿದ್ಧಾರೆ.‌

ಇನ್ನು, ಈ ಫೋಟೋಗೆ "ಮಹಾಪುಣ್ಯವಂತ ಅಣ್ಣಾ ನೀವು" ಎಂದು ನಟ ರವಿಶಂಕರ್‌ ಗೌಡ ಕಾಮೆಂಟ್‌ ಮಾಡಿದ್ದಾರೆ. "ನೀವೇ ಅದೃಷ್ಟವಂತರು ಅಣ್ಣಾ... ಅಣ್ಣಾವ್ರ ದರ್ಶನ ಮಾಡಿದ್ದೀರಾ.. ನಾನು ಅಣ್ಣಾವ್ರ ದೊಡ್ಡ ಹುಚ್ಚು ಅಭಿಮಾನಿ.. ನಿಮ್ಮ ಅಭಿಮಾನಿ ಕೂಡ..", "ನಮ್ಮ ರಾಜಣ್ಣಅಣ್ಣಾವ್ರು... ನಮ್ಮ ಜಗ್ಗಣ್ಣ.. ಇಬ್ಬರನ್ನು ನೋಡಿ ಖುಷಿಯಾಯಿತು" ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.