ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಭರವಸೆಯ ಕ್ರೈಮ್ ಥ್ರಿಲ್ಲರ್ ಸಿನಿಮಾ ಸೆನ್ಸೇಷನ್ ಸೃಷ್ಟಿಸಲು ಸಜ್ಜಾಗಿದೆ. ಎಸ್ ಎನ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅನಿವಾಸಿ ಭಾರತೀಯ ಸಾಲಿಗ್ರಾಮ ಸುರೇಶ್ ನಿರ್ಮಿಸಿರುವ ಹಾಗೂ ವೆಂಕಟ್ ಭಾರದ್ವಾಜ್ ನಿರ್ದೇಶನದ, ನೂತನ ನಟ ರಕ್ಕಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ರಕ್ಕಿ’ ಚಿತ್ರದ ಅಧಿಕೃತ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಅಧಿಕೃತವಾಗಿ ಶುಭ ಹಾರೈಸಿದ್ದಾರೆ. ಸದ್ಯ ಈ ಟ್ರೇಲರ್ ಪಿಆರ್‌ಕೆ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಭಾರಿ ಪ್ರಶಂಸೆ ಗಳಿಸುತ್ತಿದೆ.
ಡಾ. ರಾಜ್ ಕುಟುಂಬದೊಂದಿಗಿನ ಒಡನಾಟ
ಟ್ರೇಲರ್ ಬಿಡುಗಡೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವೆಂಕಟ್ ಭಾರದ್ವಾಜ್, "ನಿರ್ಮಾಪಕ ಸುರೇಶ್ ಅವರು ನನಗೆ ಎರಡು ದಶಕಗಳ ಆಪ್ತ ಸ್ನೇಹಿತರು. ಈ ಚಿತ್ರದ ಕಥೆಯನ್ನು ಮೊದಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ವಿವರಿಸಲಾಗಿತ್ತು. ಅವರು ಕಥೆಯನ್ನು ಮೆಚ್ಚಿ ಗ್ರೀನ್ ಸಿಗ್ನಲ್ ನೀಡಿದ ಬಳಿಕವೇ ಸಿನಿಮಾ ಆರಂಭವಾಯಿತು. ಮುಹೂರ್ತದಿಂದ ಹಿಡಿದು ಟ್ರೇಲರ್ ಲಾಂಚ್‌ವರೆಗೆ ಅಶ್ವಿನಿ ಮೇಡಂ ನೀಡಿದ ಸಹಕಾರ ದೊಡ್ಡದು. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದೆ ಯು/ಎ ಪ್ರಮಾಣಪತ್ರ ದೊರೆತಿದೆ. ಜುಲೈ 10 ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ," ಎಂದು ಮಾಹಿತಿ ನೀಡಿದರು.
ಜರ್ಮನಿಯಿಂದ ಬಂದ ಸ್ಟೈಲಿಶ್ ಗ್ಯಾಂಗ್‌ಸ್ಟರ್
ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ರಕ್ಕಿ ಮಾತನಾಡಿ, "ಇದು ಕಂಪ್ಲೀಟ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ನಾನು ಇದರಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಇದು ಮಾಮೂಲಿ ಮಚ್ಚು ಹಿಡಿಯುವ ರೌಡಿಯ ಪಾತ್ರವಲ್ಲ, ಅತ್ಯಂತ ಸ್ಟೈಲಿಶ್ ಆದ ಗ್ಯಾಂಗ್‌ಸ್ಟರ್ ಲುಕ್ ಇಲ್ಲಿದೆ. ಜರ್ಮನಿಯಲ್ಲಿ ಸಿನಿಮಾಗಾಗಿ ವಿಶೇಷ ತಯಾರಿ ಮಾಡಿಕೊಂಡು ಬಂದು ಇಲ್ಲಿ ಪರೀಕ್ಷೆ ಬರೆದಿದ್ದೇನೆ. ಜುಲೈ 10ರಂದು ಪ್ರೇಕ್ಷಕರು ರಿಸಲ್ಟ್ ನೀಡಲಿದ್ದಾರೆ" ಎಂದರು.
ನಿರ್ಮಾಪಕ ಸಾಲಿಗ್ರಾಮ ಸುರೇಶ್ ತಮ್ಮ ಹಿನ್ನೆಲೆ ಹಂಚಿಕೊಳ್ಳುತ್ತಾ, "ನಾನು ಮೂಲತಃ ಸಾಲಿಗ್ರಾಮದವನಾಗಿದ್ದು, ಕಳೆದ 20 ವರ್ಷಗಳಿಂದ ಜರ್ಮನಿಯಲ್ಲಿ ಐಟಿ ಉದ್ಯೋಗಿಯಾಗಿದ್ದೇನೆ. ನನ್ನ ತಂದೆ ರಾಜಶೇಖರ್ ಅವರು ಹಿಂದೆ ಡಾ. ರಾಜ್‌ಕುಮಾರ್ ಅಭಿನಯದ ಕ್ಲಾಸಿಕ್ ಸಿನಿಮಾ ‘ಹೊಸ ಬೆಳಕು’ ಚಿತ್ರವನ್ನು ನಿರ್ಮಿಸಿದ್ದರು. ಈಗ ಅವರ ಹಾದಿಯಲ್ಲೇ ನನ್ನ ಮಗ ರಕ್ಕಿ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ನಮ್ಮ ಕುಟುಂಬದ ಹಿತೈಷಿಯಾದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪ್ರೋತ್ಸಾಹ ಈ ಚಿತ್ರಕ್ಕೆ ಬೆನ್ನೆಲುಬಾಗಿದೆ" ಎಂದು ಎಂದರು.
Ashwini Puneeth Rajkumar: ಶಿಕ್ಷಣ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್!
ಭರ್ಜರಿ ತಾರಾಗಣ ಹಾಗೂ ತಾಂತ್ರಿಕ ವರ್ಗ
ಈ ಚಿತ್ರದಲ್ಲಿ ಭೂಗತ ಲೋಕದ ದೊರೆ 'ಡ್ಯಾನಿ' ಎಂಬ ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಬಿ.ಸುರೇಶ ನಟಿಸಿದ್ದಾರೆ. ಇನ್ನುಳಿದಂತೆ ನಾಯಕಿಯರಾಗಿ ಆಶಿಕಾ ಸೋಮಶೇಖರ್ ಹಾಗೂ ಪಲ್ಲವಿ ಮಂಜುನಾಥ್ ಅಭಿನಯಿಸಿದ್ದಾರೆ. ಸಂಪತ್ ಮೈತ್ರೇಯ, ರಮೇಶ್ ಪಂಡಿತ್, ಬಲ ರಾಜವಾಡಿ, ಗೋವಿಂದೇಗೌಡ, ಹರಿಣಿ ಶ್ರೀಕಾಂತ್ ಒಳಗೊಂಡ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಚಿತ್ರಕ್ಕೆ ಲೋಕಿ ತವಸ್ಯ ಸಂಗೀತ ನೀಡಿದ್ದು, ಐಸಾಕ್ ಪ್ರಭಾಕರ್ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ದೀಪಕ್ ಕಾಮತ್ ಕಲಾ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ವಜ್ರೇಶ್ವರಿ ಸ್ವಾಮಿ ಸಾಥ್ ನೀಡಿದ್ದಾರೆ.