Film: ಕಂಗ್ರಾಜುಲೇಷನ್ ಬ್ರದರ್
Release Date - ನವೆಂಬರ್ 21, 2025
Language - ಕನ್ನಡ
Genre - ಡ್ರಾಮಾ, ರೊಮ್ಯಾಂಟಿಕ್,
Director - ಪ್ರತಾಪ್ ಗಂಧರ್ವ
Cast - ರಕ್ಷಿತ್ ನಾಗ್, ಸಂಜನಾ ದಾಸ್, ಅನುಷಾ, ಶಶಿಕುಮಾರ್, ರಘು ರಾಮನಕೊಪ್ಪ, ಚೇತನ್ ದುರ್ಗ
Duration - 135 Minutes
Rating: 3/5
ʻತಾನೊಂದು ಬಗೆದರೆ ದೈವವೊಂದು ಬಗೆಯಿತುʼ- ಇಂಟರ್‌ವಲ್ ಬರುವುದಕ್ಕೂ ಮುನ್ನ ಹೀರೋ ರಕ್ಷಿತ್ ಪಾಡು ಹೀಗೆ ಆಗಿರುತ್ತದೆ. ಲೈಫ್‌ನಲ್ಲಿ ಹಲವು ಕನಸು ಕಂಡಿದ್ದ ಹುಡುಗ ಸಂದಿಗ್ಧ ಪರಿಸ್ಥಿತಿಗೆ ಸಿಲುಕುತ್ತಾನೆ. ಫ್ಯಾಮಿಲಿಯಿಂದ ದೂರ ಇರುವ ಹುಡುಗ ರಕ್ಷಿತ್. ಈತನ ಆಫೀಸ್‌ಗೆ ಹೊಸದಾಗಿ ಬಂದಿರುವ ಹೊಸ ಹುಡುಗಿ ಸಿರಿ (ಅನುಷಾ) ಮೇಲೆ ರಕ್ಷಿತ್‌ಗೆ ಹೇವಿ ಲವ್ವು. ಅದನ್ನು ಆಕೆ ಬಳಿಯೂ ನಿವೇದನೆ ಮಾಡಿಕೊಳ್ಳುತ್ತಾನೆ ರಕ್ಷಿತ್. ಇನ್ನೇನು ಎಲ್ಲಾ ಸರಿ ಹೋಯ್ತು ಎನ್ನುವಾಗಲೇ ನಿರ್ದೇಶಕರು ಭಯಂಕರ ಟ್ವಿಸ್ಟ್ ಕೊಡುತ್ತಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಆಗಬೇಕಿದ್ದ ʻಕಂಗ್ರಾಜುಲೇಷನ್ ಬ್ರದರ್ʼ ಸಿನಿಮಾವು ಅಲ್ಲಿಂದ ರೊಮ್ಯಾಂಟಿಕ್ ಕಾಮಿಡಿ, ರೊಮ್ಯಾಂಟಿಕ್ ಟ್ರ್ಯಾಜಿಡಿ ರೂಪಕ್ಕೂ ಟರ್ನ್ ಆಗಿಬಿಡುತ್ತದೆ. ಚಿತ್ರದ ಹೀರೋಗೆ ಲಡ್ಡು ಬಂದು ಬಾಯೀಗ್ ಬಿತ್ತು ಎನ್ನುವಷ್ಟರಲ್ಲಿ, ಏನೇನ್ ಆಗುತ್ತದೆ. ಇದೆಲ್ಲವನ್ನೂ ಜಾಸ್ತಿ ನಗಿಸುತ್ತಾ, ಅಲ್ಲಲ್ಲಿ ಭಾವುಕರನ್ನಾಗಿಸುತ್ತಾ ಹೇಳುವುದಕ್ಕೆ ಪ್ರಯತ್ನಿಸಿದ್ದಾರೆ ನಿರ್ದೇಶಕರು.
ಹೊಸ ಮಾದರಿಯ ಕಥೆ
ನಿರ್ದೇಶಕ ಪ್ರತಾಪ್ ಗಂಧರ್ವ ಹೊಸ ಮಾದರಿಯ ಫ್ರೆಶ್ ಕಥೆಯೊಂದನ್ನು ಹೇಳಿದ್ದಾರೆ. ತಮಿಳಿನಲ್ಲಿ GenZ ಆಡಿಯೆನ್ಸ್‌ನ ಕ್ಯಾಚ್ ಮಾಡಿರುವ ನಟ ಪ್ರದೀಪ್ ರಂಗನಾಥನ್ ಸಿನಿಮಾಗಳಲ್ಲಿ ಇರುವಂತಹ ಎಂಟರ್‌ಟೇನ್‌ಮೆಂಟ್ ಅನ್ನು ʻಕಂಗ್ರಾಜುಲೇಷನ್ ಬ್ರದರ್ʼ ಸಿನಿಮಾದಲ್ಲೂ ತರುವುದಕ್ಕೆ ಟ್ರೈ ಮಾಡಿದ್ದಾರೆ ನಿರ್ದೇಶಕರು. ಈಗಿನ ಕಾಲದ ಯೂಥ್ಸ್‌ಗೆ ಇದು ಬಹಳ ಬೇಗನೇ ಕನೆಕ್ಟ್ ಆಗಬಹುದು. ಕಥೆಯ ಎಳೆ ಅಸ್ವಾಭಾವಿಕ ಎನಿಸಿದರೂ, ಅದಕ್ಕೊಂದಿಷ್ಟು ಮನರಂಜನೆಯ ಮಸಾಲೆ ಹಾಕಿ, ನೋಡುಗರ ಅಟೆಂನ್ಷನ್ ಪಡೆಯವುಕ್ಕೆ ಕಷ್ಟಪಟ್ಟಿದ್ದಾರೆ ನಿರ್ದೇಶಕರು.
Congratulations Brother Movie: ‘ಕಂಗ್ರಾಜುಲೇಷನ್ ಬ್ರದರ್’ ಚಿತ್ರದ ʼಹಳೇ ಸನ್ಯಾಸಿʼ ಹಾಡು ರಿಲೀಸ್
ಕಥೆಯ ಆಯ್ಕೆಯಲ್ಲಿ ಗೆದ್ದಿರುವ ನಿರ್ದೇಶಕ ಮತ್ತು ರೈಟರ್ ಹರಿ ಸಂತೋಷ್, ಅದನ್ನು ಇನ್ನಷ್ಟು ರಸಮಯವಾಗಿ ನಿರೂಪಣೆ ಮಾಡಬಹುದಿತ್ತು. ಚಿತ್ರಕಥೆಯಲ್ಲಿಯೂ ಬಿಗಿತನ ಕಾಪಾಡಿಕೊಳ್ಳಬಹುದಿತ್ತು. ಕಥೆ ತೆರೆದುಕೊಳ್ಳುವುದಕ್ಕೆ ಕೊಂಚ ಸಮಯ ಬೇಡುತ್ತದೆ. ಮೊದಲರ್ಧದಲ್ಲಿ ಹಾಡುಗಳು ಕೂಡ ಜಾಸ್ತಿ ಬಂದ್ವು ಅನ್ನೋ ಫೀಲಿಂಗ್ ಬರುತ್ತದೆ. ಗುರುಪ್ರಸಾದ್ ಅವರ ಛಾಯಾಗ್ರಹಣ ಚೆನ್ನಾಗಿದೆ. ಹಾಗೆಯೇ ಸಂಗೀತ ನಿರ್ದೇಶಕರ ಕೆಲಸ ಹಿನ್ನೆಲೆ ಸಂಗೀತದಲ್ಲಿ ಎದ್ದು ಕಾಣುತ್ತದೆ. ಒಟ್ಟಾರೆ ಸಿನಿಮಾದ ಕ್ವಾಲಿಟಿ ಚೆನ್ನಾಗಿದೆ. ಕಾಮಿಡಿ ಜೊತೆಗೆ ಅಪ್ಪ - ಮಗನ ಎಮೋಷನಲ್ ಸೀನ್‌ಗಳು ಕೂಡ ಇವೆ. ಪ್ರೇಕ್ಷಕರ ತಲೆಗೂ ಹುಳ ಬಿಡುವಂತಹ ಕಥೆ ಕೊಟ್ಟು, ʻಇಂತಹದ್ದಕ್ಕೆ ಎಂಡಿಂಗ್ ಹೇಗೆ ಕೊಡ್ತಾರೋʼ ಎಂದು ಯೋಚಿಸುವಷ್ಟರಲ್ಲಿ ಉತ್ತಮವಾಗಿಯೇ ಅಂತ್ಯ ಹಾಡಲಾಗಿದೆ.
ಸರ್ಪ್ರೈಸ್ ಎನಿಸುವ ಕಲಾವಿದರ ನಟನೆ
ಈ ಚಿತ್ರದ ಹೀರೋ ರಕ್ಷಿತ್ ನಾಗ್ ಅವರಿಗೆ ಇದು ಮೊದಲ ಪ್ರಯತ್ನ. ಆದರೆ ಎಲ್ಲಿಯೂ ಅದು ಗೊತ್ತಾಗದಂತೆಯೇ ನಟಿಸಿದ್ದಾರೆ ರಕ್ಷಿತ್. ಅವರ ಕಾಮಿಡಿ ಟೈಮಿಂಗ್ ಚೆನ್ನಾಗಿದೆ. ಜೊತೆಗೆ ಲವರ್ ಬಾಯ್ ಆಗಿಯೂ ಗಮನಸೆಳೆಯುತ್ತಾರೆ. ಎಮೋಷನಲ್ ಸೀನ್‌ಗಳಲ್ಲಿಯೂ ಜಾಸ್ತಿ ಮಾರ್ಕ್ಸ್ ಪಡೆಯುತ್ತಾರೆ. ಇನ್ನಷ್ಟು ಪಳಗಿದರೆ, ಉತ್ತಮ ಭವಿಷ್ಯ ಖಂಡಿತ ಇದೆ. ನಟಿಯಲ್ಲಿ ಸಂಜನಾ ದಾಸ್ ಜಾಸ್ತಿ ಸ್ಕೋರ್ ಮಾಡಿದರೆ, ಅನುಷಾ ಗಮನಸೆಳೆಯುತ್ತಾರೆ. ಚೇತನ್ ದುರ್ಗ ನಗಿಸುವುದಕ್ಕೆ ಸೀಮಿತ. ತಂದೆಯಾಗಿ ಶಶಿಕುಮಾರ್ ನಟನೆ ಮನೋಜ್ಞ.