ಜೋಗಿ ಪ್ರೇಮ್ ಅವರ ʻಕೆಡಿ: ದಿ ಡೆವಿಲ್' ಸಿನಿಮಾವು ದೇಶಾದ್ಯಂತ ಏಪ್ರಿಲ್ 30ರಂದು ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ನಟ ಧ್ರುವ ಸರ್ಜಾ ಅವರಿಗೂ ಕೂಡ ದೊಡ್ಡ ಯಶಸ್ಸು ತಂದುಕೊಡುವ ಸೂಚನೆ ನೀಡಿದೆ. ಈ ಮಧ್ಯೆ ಕೆಡಿ ಸಿನಿಮಾ ರಕ್ಷಿತಾ ಪ್ರೇಮ್ ದಂಪತಿಗೆ ತುಂಬಾ ವಿಶೇಷ. ಯಾಕೆ ಗೊತ್ತಾ? ಈ ಚಿತ್ರದ ಮೂಲಕ ಜೋಗಿ ಪ್ರೇಮ್ ಮಗ ಸೂರ್ಯ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಚಿತ್ರದಲ್ಲಿ ಒಂದು ಪುಟ್ಟ ಪಾತ್ರವನ್ನು ಸೂರ್ಯ ನಿಭಾಯಿಸಿದ್ದು, ಆ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.
"ಕೇವಲ ಒಂದು ಪ್ರಯತ್ನ ಎಂಬಂತೆ ಈ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದೇನೆ. ಸಿನಿಮಾದಲ್ಲಿ ರೋಮಾಂಚನಕಾರಿ (ಗೂಸ್‌ಬಂಪ್ಸ್ ಬರುವಂತಹ) ದೃಶ್ಯಗಳು ತುಂಬಾ ಇವೆ" ಎಂದು ಹೇಳಿಕೊಂಡಿದ್ದಾರೆ ಸೂರ್ಯ. ರಕ್ಷಿತಾ ಪ್ರೇಮ್ ಅವರ ಅಭಿಮಾನಿಗಳು ಕೂಡ ಸೂರ್ಯ ಅವರನ್ನು ತೆರೆಮೇಲೆ ಕಂಡು ಥ್ರಿಲ್ ಆಗಿದ್ದಾರೆ.
KD Review: ಇದು ನೆತ್ತರಿನಲ್ಲಿ ಬರೆದ ಕಾಳಿದಾಸನ ಸ್ಟೋರಿ; ಬ್ರದರ್ ಸೆಂಟಿಮೆಂಟ್‌ನಲ್ಲಿ ಧ್ರುವ ಸರ್ಜಾ ಭರ್ಜರಿ!
ತಂದೆ ಬಗ್ಗೆ ಮಾತನಾಡಿದ ಸೂರ್ಯ
ಕೆಡಿ ಸಿನಿಮಾವು ಅದ್ದೂರಿಯಾಗಿ ತೆರೆಕಂಡ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸೂರ್ಯ, "ಈ ಚಿತ್ರಕ್ಕಾಗಿ ನಾವು ಸುದೀರ್ಘ ಕಾಲ ಕಾದಿದ್ದೆವು. ಈಗ ಸಿನಿಮಾ ಬಿಡುಗಡೆಯಾಗಿರುವುದು ತುಂಬಾ ಖುಷಿ ತಂದಿದೆ. ಚಿತ್ರದ ಕುರಿತು ಈ ಹಿಂದೆ ಅನೇಕರು ಟೀಕಿಸಿದ್ದರು, ಇನ್ನೂ ಕೆಲವರು ಹೊಗಳಿದ್ದರು. ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನಮ್ಮನ್ನು ತೆಗಳಿದವರ ಬಗ್ಗೆ ನಮಗೆ ಯಾವುದೇ ದ್ವೇಷವಿಲ್ಲ. ಆದರೆ, ಯಾರೆಲ್ಲಾ ಈ ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೋ ಅವರಿಗೆಲ್ಲ 'ಕೆಡಿ' ಸಿನಿಮಾದ ಯಶಸ್ಸೇ ಸೂಕ್ತ ಉತ್ತರ ಎಂದು ಹೇಳಲು ಬಯಸುತ್ತೇನೆ. ಕೆಡಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿಯಾಗಿ ಓಡುತ್ತಿದೆ, ಇನ್ಮೇಲೆ ಎಲ್ಲವೂ ಶುಭವಾಗಲಿದೆ" ಎಂದು ಸೂರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ʻಕೆಡಿʼ ಸಿನಿಮಾ ನೋಡಿ ಖುಷಿಯಾದ ಧ್ರುವ ಸರ್ಜಾ ಫ್ಯಾಮಿಲಿ; ಚಿರು ಸರ್ಜಾ ಬಗ್ಗೆ ಪತ್ನಿ ಪ್ರೇರಣಾ ಹೇಳಿದ್ದೇನು?
ನಮ್ಮ ಅಪ್ಪ ತುಂಬಾ ಕಷ್ಟಪಡ್ತಾರೆ
"ನಮ್ಮ ತಂದೆ ಯಾವತ್ತೂ ಸ್ವಾರ್ಥಕ್ಕಾಗಿ ಸಿನಿಮಾ ಮಾಡುವುದಿಲ್ಲ. ಚಿತ್ರದ ನಾಯಕರಿಗಾಗಿ ಮತ್ತು ಅವರ ನಿರ್ದೇಶನದ ತಂಡಕ್ಕಾಗಿ ಅವರು ಅಪಾರವಾಗಿ ಕಷ್ಟಪಡುತ್ತಾರೆ. ಇಡೀ ತಂಡದ ಶ್ರಮದಿಂದಾಗಿ ಇಂದು ಸಿನಿಮಾ ಯಶಸ್ವಿಯಾಗಿದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ" ಎಂದು ಪ್ರೇಮ್ ಮಗ ಸೂರ್ಯ ವಿನಂತಿಸಿಕೊಂಡಿದ್ದಾರೆ.
ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಡಿ ಸಿನಿಮಾ
ʻಕೆಡಿʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ದಾಖಲೆ ಪ್ರಮಾಣದ ಗಳಿಕೆ ಆಗಿದ್ದು, ವಾರಾಂತ್ಯ ಸಾಲು ಸಾಲು ರಜೆಗಳು ಇರೋದ್ರಿಂದ ದೊಡ್ಡಮಟ್ಟದ ಕಲೆಕ್ಷನ್ ಆಗಲಿದೆ ಎಂಬ ನಿರೀಕ್ಷೆ ಬಾಕ್ಸ್ ಆಫೀಸ್ ವಲಯದಲ್ಲಿ ಕೇಳಿಬಂದಿದೆ.