ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌ʻಪೆದ್ದಿʼ ಬಾಕ್ಸ್ ಆಫೀಸ್ ಕಲೆಕ್ಷನ್; ಮೊದಲ ದಿನವೇ 100 ಕೋಟಿ ಲೂಟಿ ಮಾಡಲು ಸಜ್ಜಾದ ರಾಮ್ ಚರಣ್!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಶಿವರಾಜ್‌ಕುಮಾರ್ ಅಭಿನಯದ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆಯಾಗುತ್ತಿದ್ದು, ಮೊದಲ ದಿನವೇ 100 ಕೋಟಿ ರೂ. ಗಳಿಸುವ ಭರವಸೆ ಮೂಡಿಸಿದೆ. ಜೂನ್ 3 ರಂದೇ ಪ್ರೀಮಿಯರ್ ಶೋಗಳು ಆರಂಭವಾಗಲಿದ್ದು, ಆಂಧ್ರ-ತೆಲಂಗಾಣದಲ್ಲಿ 75 ಕೋಟಿ ಗ್ರಾಸ್ ನಿರೀಕ್ಷಿಸಲಾಗಿದೆ.

ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾವು ಜೂನ್ 4 ರಂದು ಬಿಡುಗಡೆಗೆ ಸಜ್ಜಾಗಿದೆ. ಜೂನ್ 3 ರಂದೇ ಆಯ್ದ ಚಿತ್ರಮಂದಿರಗಳಲ್ಲಿ ವಿಶೇಷ ‘ಪೇಯ್ಡ್ ಪ್ರೀಮಿಯರ್’ ಶೋಗಳು ಸಹ ಆಯೋಜನೆಗೊಂಡಿವೆ. ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಚಿತ್ರವು ಈಗಾಗಲೇ ಭಾರಿ ಕುತೂಹಲ ಮೂಡಿಸಿದ್ದು, ಸದ್ಯದ ಮಾಹಿತಿ ಪ್ರಕಾರ‌, ಮೊದಲ ದಿನವೇ ಈ ಸಿನಿಮಾವು ವಿಶ್ವಾದ್ಯಂತ ಬರೋಬ್ಬರಿ 100 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಸೂಚನೆ ನೀಡಿದೆ.

ದೊಡ್ಡ ದಾಖಲೆ ಗ್ಯಾರಂಟಿ

ತೆಲುಗು ರಾಜ್ಯಗಳಲ್ಲಿನ ಭರ್ಜರಿ ಬಿಸಿನೆಸ್, ಪ್ರೀಮಿಯರ್ ಶೋಗಳು ಮತ್ತು ಓವರ್‌ಸೀಸ್‌ನ ಮುಂಗಡ ಬುಕಿಂಗ್ ಅನ್ನು ಗಮನಿಸಿದರೆ, ಈ ಚಿತ್ರವು ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ‘ಅತಿ ದೊಡ್ಡ ಸೋಲೋ ಓಪನರ್’ ಆಗುವ ಹಾದಿಯಲ್ಲಿದೆ. ಆದರೆ, ಮೊದಲ ದಿನದ ಕಲೆಕ್ಷನ್ ಸಂಖ್ಯೆಗಳ ಆಚೆಗೂ ‘ಪೆದ್ದಿ’ ಚಿತ್ರಕ್ಕೆ ಮತ್ತೊಂದು ದೊಡ್ಡ ಸವಾಲಿದೆ; ಅದೇನೆಂದರೆ, ‘ಗೇಮ್ ಚೇಂಜರ್’ ಚಿತ್ರದ ಸೋಲಿನ ನಂತರ ರಾಮ್ ಚರಣ್ ಅವರಿಗೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಒಬ್ಬಂಟಿಯಾಗಿ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಇದೆಯೇ ಎಂಬುದನ್ನು ಈ ಚಿತ್ರ ಸಾಬೀತುಪಡಿಸಬೇಕಿದೆ.

Ram Charan: ಮಗಳನ್ನು ಎತ್ತಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ; ‘ಪೆದ್ದಿ’ಗಾಗಿ ರಾಮ್ ಚರಣ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಕರ್ನಾಟಕದಲ್ಲಿ ಉತ್ತಮ ರೆಸ್ಪಾನ್ಸ್!‌

ಖ್ಯಾತ ಚಲನಚಿತ್ರ ವಿಶ್ಲೇಷಕ ರಮೇಶ್ ಬಾಲಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಸದ್ಯಕ್ಕೆ 'ಪೆದ್ದಿ' ಚಿತ್ರದ ಹೈಪ್ ಕೇವಲ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೇ ಹೆಚ್ಚಾಗಿದೆ. ಕರ್ನಾಟಕದಲ್ಲೂ ಸಹ 1 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳು ಮಾರಾಟವಾಗುವ ಮೂಲಕ ಉತ್ತಮ ಲಕ್ಷಣಗಳು ಕಾಣುತ್ತಿವೆ. ಆದರೆ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ (ಹಿಂದಿ ಬೆಲ್ಟ್) ಮಾರುಕಟ್ಟೆಗಳಲ್ಲಿ ಸದ್ಯಕ್ಕೆ ಹೈಪ್ ಕೊಂಚ ಕಡಿಮೆಯಿದೆ. ಅಲ್ಲದೆ, ಅಲ್ಲಿ ಮುಂಗಡ ಬುಕಿಂಗ್ ಈಗಷ್ಟೇ ಆರಂಭವಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

"ಇತ್ತೀಚೆಗಷ್ಟೇ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದ ದೊಡ್ಡ ಹಿನ್ನಡೆಯಿಂದ ರಾಮ್‌ ಚರಣ್ ಹೊರಬರುತ್ತಿದ್ದಾರೆ. ಒಮ್ಮೆ ಅವರ ಹೆಸರಿನಲ್ಲಿ ಪುಷ್ಪ, ಕೆಜಿಎಫ್ ಅಥವಾ ಸಲಾರ್‌ನಂತಹ ದೊಡ್ಡ ಸೋಲೋ ಹಿಟ್ ದಾಖಲಾದರೆ, ಆಟೋಮ್ಯಾಟಿಕ್ ಆಗಿ ಅವರ ಮುಂದಿನ ಚಿತ್ರಗಳಿಗೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರಿ ಹೈಪ್ ಕ್ರಿಯೇಟ್ ಆಗುತ್ತದೆ" ಎಂದು ಬಾಲಾ ವಿವರಿಸಿದ್ದಾರೆ.‌ ಸದ್ಯಕ್ಕೆ ಪೆದ್ದಿ ಸಿನಿಮಾಕ್ಕೆ ಉತ್ತರ ಭಾರತದಲ್ಲಿ ಹೇಳಿಕೊಳ್ಳುವಂತಹ ಹೈಪ್‌ ಸಿಕ್ಕಿಲ್ಲ ಎಂಬುದು ಗಮನಿಸಬೇಕಾದ ವಿಚಾರ.

Peddi Movie: 'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್‌ ಫಿದಾ!

"ಬೇರೆಲ್ಲಾ ಮಾರುಕಟ್ಟೆಗಳಿಗೆ ಹೋಲಿಸಿದರೆ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲೇ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ಆರಂಭಿಕ ಪ್ರೀಮಿಯರ್ ಶೋಗಳು ಮತ್ತು ಟಿಕೆಟ್ ದರ ಏರಿಕೆಯನ್ನು ಲೆಕ್ಕಹಾಕಿದರೆ, ಈ ಎರಡು ರಾಜ್ಯಗಳಿಂದಲೇ ಸುಮಾರು 75 ಕೋಟಿ ರೂ. ಗ್ರಾಸ್ ಕಲೆಕ್ಷನ್ ನಿರೀಕ್ಷಿಸಬಹುದು. ಇದಕ್ಕೆ ವಿದೇಶಿ ಮಾರುಕಟ್ಟೆಯ ಗಳಿಕೆಯನ್ನು ಸೇರಿಸಿದರೆ, ಪ್ರೀಮಿಯರ್ ಶೋಗಳು ಒಳಗೊಂಡಂತೆ 'ಪೆದ್ದಿ' ಮೊದಲ ದಿನವೇ 100 ಕೋಟಿ ಕ್ಲಬ್ ಸೇರಲಿದೆ" ಎಂದು ರಮೇಶ್‌ ಬಾಲಾ ಭವಿಷ್ಯ ನುಡಿದಿದ್ದಾರೆ.

ಇನ್ನು, ಆಂಧ್ರಪ್ರದೇಶದಲ್ಲಿ ಜೂನ್ 3 ರ ಪೇಯ್ಡ್ ಪ್ರೀಮಿಯರ್ ಶೋಗಳ ಟಿಕೆಟ್ ದರವನ್ನು 600 ರೂಪಾಯಿಗೆ ನಿಗದಿಪಡಿಸಲಾಗಿದೆ. ಆಂಧ್ರ ಸರ್ಕಾರವು ಚಿತ್ರದ ಆರಂಭಿಕ ದಿನಗಳಲ್ಲಿ ಟಿಕೆಟ್ ದರ ಏರಿಕೆ ಹಾಗೂ ಹೆಚ್ಚುವರಿ ಶೋಗಳನ್ನು ನಡೆಸಲು ತಾತ್ಕಾಲಿಕ ಅನುಮತಿ ನೀಡಿರುವುದು ಕಲೆಕ್ಷನ್‌ಗೆ ಮತ್ತಷ್ಟು ಬೂಸ್ಟ್ ನೀಡಲಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ 'ಪೆದ್ದಿ' ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ರಾಮ್ ಚರಣ್ ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ರಗಡ್ ಮತ್ತು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಜಾನ್ವಿ ಕಪೂರ್ ನಾಯಕಿಯಾಗಿದ್ದರೆ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಜಗಪತಿ ಬಾಬು ಮತ್ತು ದಿವ್ಯೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.