ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿಬಾಬು ಸಾನ ಕಾಂಬಿನೇಷನ್‌ನ 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡುತ್ತ ಮುನ್ನುಗ್ಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಪೆದ್ದಿ ಸಿನಿಮಾ ಮೊದಲ ದಿನದಿಂದಲೇ ಉತ್ತಮ ಕಲೆಕ್ಷನ್ ಮಾಡುತ್ತಿದೆ.
ಮೊದಲ ದಿನವೇ ಬರೋಬ್ಬರಿ 135.36 ಕೋಟಿ ರೂಪಾಯಿಗಳ ಗಳಿಸುವ ಭರ್ಜರಿ ಓಪನಿಂಗ್ ಪಡೆದಿತ್ತು. ಇದೀಗ ಚಿತ್ರದ ಮೊದಲ ವೀಕೆಂಡ್‌ನ ಅಧಿಕೃತ ಕಲೆಕ್ಷನ್ ವಿವರವನ್ನು ಚಿತ್ರತಂಡ ಹೊರಹಾಕಿದೆ. "ಬಾಕ್ಸ್ ಆಫೀಸ್ ಚಾಂಪಿಯನ್ 'ಪೆದ್ದಿ' ಮೊದಲ ವೀಕೆಂಡ್‌ನಲ್ಲೇ ವಿಶ್ವಾದ್ಯಂತ 292.50 ಕೋಟಿ ರೂಪಾಯಿಗಳ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ಬ್ಲಾಕ್‌ಬಸ್ಟರ್ ದಾಖಲೆ ಬರೆದಿದೆ" ಎಂದು ಹೇಳಿಕೊಂಡಿದೆ.
ವೃದ್ಧಿ ಸಿನಿಮಾಸ್ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಅಧಿಕೃತ ಗಳಿಕೆಯನ್ನ ಹೊರಹಾಕಿದೆ. ಮುಖ್ಯವಾಗಿ ಓವರ್‌ಸೀಸ್ (ವಿದೇಶಿ) ಮಾರುಕಟ್ಟೆಯಲ್ಲಿ ಉತ್ತಮ ಕಮಾಯಿ ಆಗುತ್ತಿದೆ. ಮೊದಲ ವೀಕೆಂಡ್‌ನಲ್ಲಿ ಗಟ್ಟಿ ಕಮಾಯಿ ಮಾಡಿದ್ದರೂ, ಸೋಮವಾರದಿಂದ ‘ಪೆದ್ದಿ’ಗೆ ಅಸಲಿ ಪರೀಕ್ಷೆ ಎದುರಾಗಲಿದೆ. ವಾರದ ದಿನಗಳಲ್ಲೂ ಇದೇ ಟ್ರೆಂಡ್ ಮುಂದುವರಿದರೆ, ಎರಡನೇ ವೀಕೆಂಡ್ ಮುಗಿಯುವಷ್ಟರಲ್ಲಿ ಸಿನಿಮಾ 500 ಕೋಟಿ ಕ್ಲಬ್‌ಗೆ ಸೇರಿದರೂ ಆಶ್ಚರ್ಯ ಪಡಬೇಕಾಗಿಲ್ಲ.
Peddi Box Office Collection: ಮೊದಲ ದಿನವೇ 100 ಕೋಟಿ ರೂ. ಕಲೆಕ್ಷನ್! ರಾಮ್ ಚರಣ್ ಮಾಸ್ ಕ್ರೇಜ್
ಅಂದಹಾಗೆ, ಮೊದಲ ದಿನ 135.36 ಕೋಟಿ ರೂ. ಗಳಿಸಿದ್ದ ಈ ಸಿನಿಮಾವು ಎರಡನೇ ದಿನ 46.44 ಕೋಟಿ ರೂ., ಮೂರನೇ ದಿನ 54.90 ಕೋಟಿ ರೂ. ಕಮಾಯಿ ಮಾಡಿತು. ಕೇವಲ 3 ದಿನಗಳಲ್ಲಿ 236.70 ಕೋಟಿ ರೂ. ಲೂಟಿ ಮಾಡಿದ್ದ ಈ ಸಿನಿಮಾ ಈಗ ಮೊದಲ ವಾರಾಂತ್ಯಕ್ಕೆ 292.50 ಕಮಾಯಿ ಮಾಡಿದೆ.
ವೆಂಕಟ ಸತೀಶ್ ಕಿಲಾರು ನಿರ್ಮಿಸಿರುವ ಈ ಚಿತ್ರಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರ ಸಂಗೀತ ಹಾಗೂ ರತ್ನವೇಲು ಅವರ ಛಾಯಾಗ್ರಹಣ ಪ್ರಮುಖ ಆಕರ್ಷಣೆಯಾಗಿದೆ. ಸಾಮಾನ್ಯವಾದ ಮೊದಲ ಸೋಮವಾರದ ಗಳಿಕೆ ಮೇಲೆ ಚಿತ್ರದ ಮುಂದಿನ ದಿನಗಳ ಗತಿಯನ್ನ ನಿರ್ಧರಿಸಬಹುದಾಗಿದೆ.
ಇದೀಗ ಜೂನ್ 8ರ ಸೋಮವಾರ ಎಷ್ಟರಮಟ್ಟಿಗೆ ಪೆದ್ದಿ ಗಳಿಕೆ ಮಾಡಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ. ಮೊದಲ ದಿನ 100 ಕೋಟಿ ರೂ. ಗಳಿಕೆ ಮಾಡಿದ್ದ ಈ ಸಿನಿಮಾವು ನಂತರದ ದಿನಗಳಲ್ಲಿ 40-50 ಕೋಟಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ. ಸೋಮವಾರ 35+ ಕೋಟಿ ರೂ. ಗಳಿಸಿದರೂ, ಪೆದ್ದಿಗೆ ದೊಡ್ಡ ಬೂಸ್ಟ್ ಸಿಕ್ಕಂತೆ ಆಗಲಿದೆ.
ಪೆದ್ದಿಯ ಕಥೆ ಏನು?
ವಿಜಯನಗರಂ ಜಿಲ್ಲೆಯ ಬೆಟ್ಟದ ಕೆಳಗಿನ ಊರಿನಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಆ ಊರಿನ ಜನರಿಗೆ ಕನಿಷ್ಠ ಗುರುತಾಗಲಿ, ಸಾರಿಗೆ ಸೌಕರ್ಯವಾಗಲಿ, ಕೊನೆಗೆ ವೋಟ್ ಹಾಕುವ ಹಕ್ಕು ಕೂಡ ಇರುವುದಿಲ್ಲ. ಅಂತಹ ತನ್ನ ಹಳ್ಳಿಗಾಗಿ ಮತ್ತು ತಮ್ಮ ಹಕ್ಕುಗಳಿಗಾಗಿ 'ಪೆದ್ದಿ' (ರಾಮ್ ಚರಣ್) ಎಂಬ ಯುವಕ ಕ್ರೀಡೆಯ ಮೂಲಕ ಹೇಗೆ ಹೋರಾಟ ಮಾಡುತ್ತಾನೆ? ಒಬ್ಬ ಕ್ರೀಡಾಪಟುವಾಗಿ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದು ತನ್ನ ಊರಿನ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಾನೆ? ಎಂಬುದನ್ನು ಒಂದು ಎಮೋಷನಲ್ ಸ್ಪೋರ್ಟ್ಸ್ ಬಯೋಪಿಕ್ ಮಾದರಿಯಲ್ಲಿ ನಿರ್ದೇಶಕ ಬುಚ್ಚಿಬಾಬು ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.