ನಟ ಯಶ್ ಅವರ ಬಗ್ಗೆ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಅವರು ಕೆಲ ವರ್ಷಗಳ ಹಿಂದೆ ಹೇಳಿಕೆಯೊಂದನ್ನು ನೀಡಿದ್ದರು. "ಕೆಜಿಎಫ್ ಸಿನಿಮಾಗೂ ಮೊದಲು ಯಶ್ ಯಾರು? ಯಾವ ದೊಡ್ಡ ಸ್ಟಾರ್ ಆಗಿದ್ದರು?" ಎಂದು ಅಲ್ಲು ಅರವಿಂದ್ ಪ್ರಶ್ನಿಸಿದ್ದರು. ಆ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಆನಂತರ ಆ ಹೇಳಿಕೆಗೆ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ತಿರುಗೇಟು ನೀಡಿದ್ದರು.
ಯಶ್ ತಾಯಿ ಹೇಳಿದ್ದೇನು?
"ಎಲ್ಲವನ್ನೂ ಇಟ್ಟುಕೊಂಡು ಬಂದವರ ಮಕ್ಕಳ ತರಹ ಅಲ್ಲ ಅವನು, ಏನೂ ಇಲ್ಲದೆಯೇ ಬೆಳೆದು ಬಂದವನು. ಅವತ್ತೇ ಹೆದರಿಲ್ಲ, ಇವತ್ತು ಹೆದರುತ್ತೀವಾ? ಯಾರು ಯಶ್, ಅವನು ಎಲ್ಲಿಂದ ಬಂದ? ಕೆಜಿಎಫ್‌ಗಿಂತ ಮುಂಚೆ ಅವನು ಯಾರು ಅಂತ ಯಾರೋ ಹೇಳಿದ್ದಾರೆ. ಯಶ್ ಎಂಬ ಬಡವರ ಹುಡುಗನ ಬಗ್ಗೆ ಅವರು ಇಷ್ಟೊಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಯಶ್ ಟೆರರಿಸ್ಟ್ ಅಲ್ಲ, ಕರ್ನಾಟಕದಲ್ಲಿ ರಾಜನ ತರಹ ಬಾಳಿದವನು. ಯಶ್ ಕೆಜಿಎಫ್‌ಗೂ ಮುಂಚೆಯೂ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾನೆ" ಎಂದು ಪುಷ್ಪಾ ಹೇಳಿದ್ದರು. ಅದಕ್ಕೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ನಿಜಕ್ಕೂ ತೀರಾ ನಗೆಪಾಟಲಿನದ್ದು
ಟ್ವೀಟ್ ಮಾಡಿರುವ ಅವರು, "ಯಶ್ ಕುರಿತಂತೆ ಅಲ್ಲು ಅರವಿಂದ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಸೃಷ್ಟಿಸಲಾಗಿರುವ ವಿವಾದ ನಿಜಕ್ಕೂ ತೀರಾ ನಗೆಪಾಟಲಿನದ್ದು. ಏಕೆಂದರೆ, ಹೊಸಬರು ಅಥವಾ ಪರಿಚಯವಿಲ್ಲದ ನಟರನ್ನು ಇಟ್ಟುಕೊಂಡು ಮಾಡುವ ದೊಡ್ಡ ಬಜೆಟ್ ಸಿನಿಮಾಗಳ ಬಗ್ಗೆ ಮಾತನಾಡುತ್ತಾ, ‘ಕೆಜಿಎಫ್‌ಗಿಂತ ಮೊದಲು ನನಗೆ ಯಶ್ ಯಾರೆಂದೇ ಗೊತ್ತಿರಲಿಲ್ಲ’ ಎಂದು ಅವರು ಹೇಳಿದ್ದರ ಹಿಂದಿನ ನಿಜವಾದ ಅರ್ಥವೇನು ಎಂಬುದು ಕನಿಷ್ಠ ಜ್ಞಾನವಿರುವವರಿಗೂ ಅರ್ಥವಾಗುವಂಥದ್ದು" ಎಂದಿದ್ದಾರೆ.
ರಿಷಬ್ ಶೆಟ್ಟಿ ಗೊತ್ತಾಗಿದ್ದು ‘ಕಾಂತಾರ’ದಿಂದ!
"ಹಿಂದಿ ಪ್ರೇಕ್ಷಕರಿಗೆ ʻಬಾಹುಬಲಿ’ ಬರುವ ಮುನ್ನ ಪ್ರಭಾಸ್ ಪರಿಚಿತರಿರಲಿಲ್ಲ, ‘ಕಾಂತಾರ’ಕ್ಕಿಂತ ಮೊದಲು ರಿಷಬ್ ಶೆಟ್ಟಿ ಯಾರೆಂದು ಅವರಿಗೆ ತಿಳಿದಿರಲಿಲ್ಲ. ನನಗೂ ಅಷ್ಟೇ, ‘ಗಾಡ್‌ಫಾದರ್’ ಬರುವುದಕ್ಕಿಂತ ಮುಂಚೆ ಮಾರ್ಲನ್ ಬ್ರಾಂಡೋ ಯಾರೆಂದೇ ಗೊತ್ತಿರಲಿಲ್ಲ. ಬಹುಶಃ ಅವರು ಅದಕ್ಕೂ ಮೊದಲಿನ ‘ಎ ಸ್ಟ್ರೀಟ್‌ಕಾರ್ ನೇಮ್ಡ್ ಡಿಸೈರ್’, ‘ಆನ್ ದಿ ವಾಟರ್‌ಫ್ರಂಟ್’ ಮುಂತಾದ ಚಿತ್ರಗಳ ಮೂಲಕ ಸ್ಟಾರ್ ಆಗಿರಬಹುದು. ಆ ಚಿತ್ರಗಳು ಭಾರತದಲ್ಲಿ ಬಿಡುಗಡೆಯಾಗಿದ್ದವೋ ಇಲ್ಲವೋ ನನಗಂತೂ ತಿಳಿದಿಲ್ಲ. ಆದರೆ, ಆ ಸಿನಿಮಾಗಳು ಅವರನ್ನು ದೊಡ್ಡ ಸ್ಟಾರ್‌ಗಳನ್ನಾಗಿ ಮಾಡಿದವೇ ವಿನಃ ಸ್ಟಾರ್‌ಗಳಿಂದಾಗಿ ಸಿನಿಮಾಗಳು ದೊಡ್ಡದಾಗಲಿಲ್ಲ" ಎಂದು ಆರ್‌ಜಿವಿ ಅಭಿಪ್ರಾಯಪಟ್ಟಿದ್ದಾರೆ.
ರಾಮ್ ಗೋಪಾಲ್ ವರ್ಮಾ ಟ್ವೀಟ್
ನಮಗೆಲ್ಲರಿಗೂ ಗೊತ್ತಿರುವ ಸತ್ಯ
"ಹಾಲಿವುಡ್‌ನಲ್ಲಿ ಯಾವಾಗಲೂ ಕಥಾವಸ್ತು ಹಾಗೂ ಕಾನ್ಸೆಪ್ಟ್ ಆಧಾರಿತ ಚಿತ್ರಗಳಿಗೇ ದೊಡ್ಡ ಮೊತ್ತ ಹೂಡಿಕೆ ಮಾಡುತ್ತಾರೆಯೇ ಹೊರತು ಕೇವಲ ಸ್ಟಾರ್‌ಗಳ ಮೇಲಲ್ಲ. ಕ್ರಿಸ್ಟೋಫರ್ ನೋಲನ್‌ರಂತಹ ನಿರ್ದೇಶಕರು ಕೂಡ ನಟರ ನಟನಾ ಸಾಮರ್ಥ್ಯಕ್ಕಷ್ಟೇ ಅವರನ್ನು ಬಳಸಿಕೊಳ್ಳುತ್ತಾರೆಯೇ ಹೊರತು ಅವರ ಸ್ಟಾರ್‌ಡಮ್ ಅನ್ನು ನೆಚ್ಚಿಕೊಳ್ಳುವುದಿಲ್ಲ. ಅದು ‘ಓಪನ್‌ಹೈಮರ್’ ಆಗಿರಲಿ ಅಥವಾ ‘ಒಡಿಸ್ಸಿ’ ಆಗಿರಲಿ, ಅದರಲ್ಲಿ ಯಾರು ನಟಿಸಿದ್ದಾರೆ ಎಂಬುದಕ್ಕಿಂತ ಹೆಚ್ಚಾಗಿ ಕಂಟೆಂಟ್ ಬಲದಿಂದಲೇ ಅಷ್ಟೇ ಪ್ರಭಾವಶಾಲಿಯಾಗಿ ಗೆಲ್ಲುತ್ತವೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸತ್ಯ" ಎಂದಿದ್ದಾರೆ.
Yash Toxic: ‘ಲಗಾನ್’ ಸಿನಿಮಾ ಉದಾಹರಣೆ ನೀಡಿ ʼಟಾಕ್ಸಿಕ್ʼ ಬಗ್ಗೆ ಅಜನೀಶ್ ಲೋಕನಾಥ್ ಏನಂದ್ರು?
ಅಹಂ ಇರುವವರು ಮಾತ್ರ ಹೀಗೆ ಮಾಡ್ತಾರೆ
"ಮತ್ತೆ ಅಲ್ಲು ಅರವಿಂದ್ ವಿಚಾರಕ್ಕೆ ಬರುವುದಾದರೆ, ಅಷ್ಟು ಸರಳವಾದ ಹಾಗೂ ಒಳ್ಳೆಯ ಉದ್ದೇಶದ ಮಾತನ್ನು ವೈಯಕ್ತಿಕವಾಗಿ ತೆಗೆದುಕೊಂಡು ವಿವಾದ ಮಾಡುವವರು ಅತಿಯಾದ ಅಹಂ ಇರುವ ಜನರು ಮಾತ್ರ. ವಾಸ್ತವವಾಗಿ, ಇಂಥವರ ಈ ಬಗೆಯ ಪ್ರತಿಕ್ರಿಯೆಗಳೇ ಅವರು ಪ್ರಸ್ತುತ ಎಂಥ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತವೆ" ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.