ಪ್ಲಾಸ್ಟಿಕ್ ಬಳಕೆ, ಅರಣ್ಯ ನಾಶ, ವಾಯು ಹಾಗೂ ಜಲ ಮಾಲಿನ್ಯದಂತಹ ಪರಿಸರ ಕಾಳಜಿಯ ವಿಷಯಗಳನ್ನಿಟ್ಟುಕೊಂಡು ಕನ್ನಡದಲ್ಲಿ ಈಗಾಗಲೇ ಹಲವು ಚಿತ್ರಗಳು ತೆರೆಕಂಡಿವೆ. ಇದೀಗ ಆ ಸಾಲಿಗೆ ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಹೆಚ್ಚಾಗುತ್ತಿರುವ ಗಾಜಿನ ಬಳಕೆ ಮತ್ತು ಅದರಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುವ ‘ಗಾಜು’ ಎಂಬ ಹೊಸ ಚಿತ್ರ ಸೇರ್ಪಡೆಯಾಗಿದೆ. ಕೆಲ ವರ್ಷಗಳ ಹಿಂದೆ ಕಿರುಚಿತ್ರವಾಗಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದ್ದ ಈ ಕಥೆ, ಇದೀಗ ಪೂರ್ಣ ಪ್ರಮಾಣದ ಸಿನಿಮಾ ರೂಪದಲ್ಲಿ ಹಿರಿತೆರೆಗೆ ಬರಲು ಸಜ್ಜಾಗಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಾಮಾಜಿಕ ಹೋರಾಟಗಾರ ಡಾ. ಸಿ. ಎನ್. ಮಂಜುನಾಥ್ (ದಂಡೋರ ಮಂಜಣ್ಣ) ಬಂಡವಾಳ ಹೂಡಿ ನಿರ್ಮಿಸಿರುವ ಈ ಚಿತ್ರಕ್ಕೆ ವೆಂಕಟೇಶ್ ಗಿರಿಕ್ಷೇತ್ರ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಗಾಜು’ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ.
ಟ್ರೇಲರ್ ಹೇಗಿದೆ?
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ. ಮ. ಹರೀಶ್ ಅವರು ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಬಿಡುಗಡೆಯಾಗಿರುವ ಟ್ರೇಲರ್ನಲ್ಲಿ ಎಲ್ಲೆಂದರಲ್ಲಿ ಗಾಜುಗಳನ್ನು ಒಡೆಯುವುದರಿಂದ ಪರಿಸರಕ್ಕೆ, ಜನರಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಯಾವ ರೀತಿಯ ತೊಂದರೆಯಾಗುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಗಾಜಿನ ಅತಿಯಾದ ಬಳಕೆಯ ವಿರುದ್ಧ ಪುಟ್ಟ ಬಾಲಕನೊಬ್ಬ ಹೇಗೆ ಹೋರಾಡುತ್ತಾನೆ ಮತ್ತು ಆತನ ಹೋರಾಟದಿಂದ ಸಮಾಜದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬ ಕುತೂಹಲಕಾರಿ ಎಳೆಯನ್ನು ಚಿತ್ರ ಹೊಂದಿರುವುದು ಟ್ರೇಲರ್ ಮೂಲಕ ಅನಾವರಣಗೊಂಡಿದೆ.
ಗಾಜಿನ ಅಸಮರ್ಪಕ ಬಳಕೆಯಿಂದ ಆಗುವ ಅನಾಹುತಗಳು
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ಡಾ. ಸಿ. ಎನ್. ಮಂಜುನಾಥ್ (ದಂಡೋರ ಮಂಜಣ್ಣ), "ಇದೊಂದು ಅಪ್ಪಟ ಪರಿಸರ ಕಾಳಜಿ ಹೊಂದಿರುವ ಸಿನಿಮಾ. ರೈತಾಪಿ ಹಿನ್ನೆಲೆಯಿಂದ ಬಂದಿರುವ ನಾವು ಕೇವಲ ಲಾಭದ ಉದ್ದೇಶವಿಲ್ಲದೆ, ಸಾಮಾಜಿಕ ಕಳಕಳಿಯಿಂದ ಈ ಚಿತ್ರವನ್ನು ನಿರ್ಮಿಸಿದ್ದೇವೆ. ಗಾಜಿನ ಅಸಮರ್ಪಕ ಬಳಕೆ ಹಾಗೂ ಅದರಿಂದಾಗುತ್ತಿರುವ ಅನಾಹುತಗಳ ಬಗ್ಗೆ ಚಿತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದ್ದು, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಗಾಜು ಇಂದು ಪರಿಸರಕ್ಕೆ ಮಾರಕವಾಗಿದೆ
ಚಿತ್ರದ ಕಥಾಹಂದರದ ಕುರಿತು ವಿವರಿಸಿದ ನಿರ್ದೇಶಕ ವೆಂಕಟೇಶ್ ಗಿರಿಕ್ಷೇತ್ರ, "ಬಳಸಿದ ಗಾಜಿನ ಉತ್ಪನ್ನಗಳ ಸಮರ್ಥ ವಿಲೇವಾರಿ ಮತ್ತು ಮರುಬಳಕೆ ಸರಿಯಾಗಿ ಆಗದ ಕಾರಣ ಗಾಜು ಇಂದು ಪರಿಸರಕ್ಕೆ ಹಾಗೂ ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದೇ ಗಂಭೀರ ವಿಷಯವನ್ನು ಇಟ್ಟುಕೊಂಡು ಗ್ರಾಮೀಣ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದೇವೆ. ಬೇಲೂರು ಮತ್ತು ಚನ್ನರಾಯಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸ್ಥಳೀಯ ಗ್ರಾಮೀಣ ಪ್ರತಿಭೆಗಳನ್ನು ಬಳಸಿಕೊಂಡು ಚಿತ್ರೀಕರಣ ನಡೆಸಲಾಗಿದೆ. ನಮ್ಮ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲಿದ್ದೇವೆ" ಎಂದು ಮಾಹಿತಿ ನೀಡಿದರು.
ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನ
ಚಿತ್ರದಲ್ಲಿ ಹಿರಿಯ ನಟರಾದ ರಾಮಕೃಷ್ಣ, ಬಲರಾಜವಾಡಿ ಅವರೊಂದಿಗೆ ಮಾಸ್ಟರ್ ವಿಸ್ಮಯ್ ವೆಂಕಟೇಶ್, ಅಪ್ಪಣ್ಣ ರಾಮದುರ್ಗ, ವಾಣಿ, ಮಿಲ್ಟ್ರಿ ಮಂಜು, ಸಂತೋಷ್ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ನಾಗೇಂದ್ರ ರಂಗಾರಿ ಛಾಯಾಗ್ರಹಣ, ಸೂರ್ಯೋದಯ ಸಂಕಲನ, ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನ ಹಾಗೂ ಮಸ್ತಾನ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ವಿಭಿನ್ನ ಕಥಾವಸ್ತುವಿನ ಟ್ರೇಲರ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ‘ಗಾಜು’, ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.