ಕೋಲ್ಕತ್ತಾದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬಾಯ್ತಪ್ಪಿ ಎಡವಟ್ಟು ಮಾಡಿಕೊಂಡಿದ್ದ ನಟ ರಣಬೀರ್ ಕಪೂರ್, ಇದೀಗ ಚೆನ್ನೈನಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಕ್ಟೋಬರ್ 21ರಂದು ಚೆನ್ನೈ ಟ್ರೇಡ್ ಸೆಂಟರ್ನಲ್ಲಿ ಆಯೋಜಿಸಲಾಗಿದ್ದ ತಮ್ಮ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಭವ್ಯ ಆಲ್ಬಂ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೋಲ್ಕತ್ತಾದಲ್ಲಿ ನಡೆದ ಪ್ರಮಾದವನ್ನು ಮುಕ್ತವಾಗಿ ಒಪ್ಪಿಕೊಂಡು ಸ್ಪಷ್ಟನೆ ನೀಡಿದ್ದಾರೆ.
ಅಚಾನಕ್ಕಾಗಿ ನಾಲಿಗೆ ಜಾರಿತು
ವೇದಿಕೆಯಲ್ಲಿ ಈ ಘಟನೆಯನ್ನು ಪ್ರಸ್ತಾಪಿಸಿದ ರಣಬೀರ್, "ನಿನ್ನೆ ಕೋಲ್ಕತ್ತಾದ ದಸರಾ ಕಾರ್ಯಕ್ರಮದಲ್ಲಿದ್ದಾಗ ಅಚಾನಕ್ಕಾಗಿ ನಾಲಿಗೆ ಜಾರಿತು, ಅದಕ್ಕಾಗಿ ನಾನು ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ. ಕೆಡುಕು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅಂತಿಮವಾಗಿ ಸತ್ಯ ಮತ್ತು ಒಳ್ಳೆಯತನಕ್ಕೇ ಜಯ ಸಿಗಲಿದೆ ಎಂದು ನಾನು ಹೇಳಲು ಬಯಸಿದ್ದೆ. ಆದರೆ ಪದಗಳ ಆಯ್ಕೆಯಲ್ಲಿ ತಪ್ಪಾಗಿ ಬೇರೆಯದೇ ಅರ್ಥ ಹೊರಟಿತು" ಎಂದು ಹೇಳಿದ್ದಾರೆ.
Ramayana Movie: ಥಿಯೇಟ್ರಿಕಲ್ ಬಿಡುಗಡೆಯ ಬಳಿಕ ಈ ಒಟಿಟಿಯಲ್ಲಿ ರಾಮಾಯಣ ಸ್ಟ್ರೀಮಿಂಗ್
'ರಾಕ್ಸ್ಟಾರ್' ಸಿನಿಮಾ ಹಾಡಿನ ಉಲ್ಲೇಖ
ಇದೇ ವೇಳೆ ತಮ್ಮ ಹಿಂದಿನ ಹಿಟ್ ಸಿನಿಮಾ 'ರಾಕ್ಸ್ಟಾರ್' ದಿನಗಳನ್ನು ಸ್ಮರಿಸಿದ ಅವರು, ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್ ಅವರ ಉಪಸ್ಥಿತಿಯಲ್ಲೇ ಆ ಚಿತ್ರದ ಪ್ರಸಿದ್ಧ ಹಾಡಿನ ಸಾಲನ್ನು ಉಲ್ಲೇಖಿಸಿದರು. "ನಾನು ಭಾವನೆಗಳನ್ನು ವ್ಯಕ್ತಪಡಿಸಲು ಹೇಗೆ ಪರದಾಡುತ್ತೇನೆ ಎಂಬುದಕ್ಕೆ ʻರಾಕ್ಸ್ಟಾರ್ʼ ಚಿತ್ರದ 'ಜೋ ಭೀ ಮೈ ಕೆಹನಾ ಚಾಹೂಂ, ಬರ್ಬಾದ್ ಕರೇ ಅಲ್ಫಾಜ್ ಮೇರೆ' (ನಾನು ಏನನ್ನು ಹೇಳಲು ಹೊರಟರೂ, ನನ್ನ ಮಾತುಗಳೇ ಅದನ್ನು ಹಾಳುಮಾಡುತ್ತವೆ) ಎಂಬ ಸಾಲುಗಳು ಸರಿಯಾಗಿ ಹೊಂದುತ್ತವೆ. ಹಾಗಾಗಿ ನನ್ನ ತಪ್ಪಿಗೆ ನಾನು ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ" ಎಂದು ವಿನಮ್ರವಾಗಿ ಹೇಳಿದರು.
ಅಷ್ಟಕ್ಕೂ ಕೋಲ್ಕತ್ತಾದಲ್ಲಿ ಆಗಿದ್ದೇನು?
ಅಕ್ಟೋಬರ್ 20ರಂದು ಪಶ್ಚಿಮ ಬಂಗಾಳದಲ್ಲಿ ಆಯೋಜಿಸಲಾಗಿದ್ದ ದಸರಾ ಹಬ್ಬದ ಸಮಾರಂಭದಲ್ಲಿ ರಣಬೀರ್ ಕಪೂರ್ ಭಾಗವಹಿಸಿದ್ದರು. ಈ ವೇಳೆ ಹಬ್ಬದ ಮಹತ್ವವನ್ನು ವಿವರಿಸುವ ಭರದಲ್ಲಿ, "ದುಷ್ಟತನ ಎಷ್ಟೇ ಬಲಿಷ್ಠವಾಗಿದ್ದರೂ ಕೊನೆಗೆ ಸದ್ಗುಣ ಮತ್ತು ಪ್ರಾಮಾಣಿಕತೆ ನಾಶವಾಗುತ್ತದೆ" ಎಂಬ ಅರ್ಥ ಬರುವಂತೆ ತಪ್ಪಾಗಿ ಹೇಳಿದ್ದರು. ಅವರು "ಜೀತ್" (ಗೆಲುವು) ಎಂದು ಹೇಳುವ ಬದಲು "ಅಂತ್" (ನಾಶ) ಎಂಬ ಪದವನ್ನು ಬಳಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನ ಪಾತ್ರ ಮಾಡುತ್ತಿರುವ ನಟನಿಂದಲೇ ಇಂತಹ ತಪ್ಪು ಹೇಳಿಕೆ ಬಂದಿದ್ದನ್ನು ಕಂಡು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಕಾಲೆಳೆದಿದ್ದರು.
ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದ 'ರಾಮಾಯಣ' ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾವಣನ ಪಾತ್ರದಲ್ಲಿ ನಟ ಯಶ್ ನಟಿಸಿದ್ದಾರೆ. ಪ್ರಸ್ತುತ ಭರ್ಜರಿಯಾಗಿ ಆಲ್ಬಂ ಲಾಂಚ್ ಮಾಡಿರುವ ಚಿತ್ರತಂಡ, 'ರಾಮಾಯಣ: ಭಾಗ 1' ಸಿನಿಮಾವನ್ನು ನವೆಂಬರ್ 5ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಗೆ ತರಲು ಸಜ್ಜಾಗಿದೆ.