ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ರಾಮಾಯಣ' ಚಿತ್ರದ ಸಾಯಿ ಪಲ್ಲವಿ, ಲಾರಾ ದತ್ತಾ ಕಾಸ್ಟ್ಯೂಮ್‌ ಬಗ್ಗೆ ಟ್ರೋಲ್; ಖಡಕ್‌ ತಿರುಗೇಟು ನೀಡಿದ ವಸ್ತ್ರ ವಿನ್ಯಾಸಕರು!

ರಣಬೀರ್ ಕಪೂರ್ ಹಾಗೂ ಯಶ್ ನಟನೆಯ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಮತ್ತು ಲಾರಾ ದತ್ತಾ ಅವರ ಉಡುಪುಗಳ ವಿನ್ಯಾಸಕ್ಕೆ ವ್ಯಕ್ತವಾದ ಟ್ರೋಲಿಂಗ್‌ಗೆ ವಸ್ತ್ರ ವಿನ್ಯಾಸಕರಾದ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಖಡಕ್ ಉತ್ತರ ನೀಡಿದ್ದಾರೆ. ಪ್ರತಿಯೊಂದು ಬಣ್ಣಕ್ಕೂ ಸಾಂಕೇತಿಕ ಅರ್ಥ ನೀಡಿ ಅತ್ಯಂತ ಭಕ್ತಿಯಿಂದ ಈ ಉಡುಪುಗಳನ್ನು ಡಿಸೈನ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಣಬೀರ್ ಕಪೂರ್ ಹಾಗೂ ಯಶ್ ಅಭಿನಯದ, ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೇಲರ್ ಮತ್ತು ತುಣುಕುಗಳು ಬಿಡುಗಡೆಯಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಚಿತ್ರದಲ್ಲಿ ಸೀತಾ ದೇವಿಯಾಗಿ ಅಭಿನಯಿಸುತ್ತಿರುವ ಸಾಯಿ ಪಲ್ಲವಿ ಹಾಗೂ ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಲಾರಾ ದತ್ತಾ ಅವರ ಉಡುಪುಗಳ ವಿನ್ಯಾಸಕ್ಕೆ ನೆಟ್ಟಿಗರಿಂದ ಟ್ರೋಲಿಂಗ್ ಎದುರಾಗಿದೆ.

ತಿರುಗೇಟು ನೀಡಿದ ವಸ್ತ್ರ ವಿನ್ಯಾಸಕರು

ಸೀತಾ ದೇವಿಯ ಬ್ಲೌಸ್ ಡಿಸೈನ್ ಹಾಗೂ ಕೈಕೇಯಿಯ ಉಡುಪಿನ ಬಣ್ಣಗಳು ಟಿವಿ ಧಾರಾವಾಹಿಗಳನ್ನು ಹೋಲುತ್ತಿದ್ದು, ಆಧುನಿಕತೆಯನ್ನು ತುರುಕಲಾಗಿದೆ ಎಂದು ಮೀಮ್‌ಗಳ ಮೂಲಕ ಟೀಕಿಸಲಾಗುತ್ತಿತ್ತು. ಇದೀಗ ಈ ಟ್ರೋಲ್‌ಗಳಿಗೆ ಚಿತ್ರದ ಖ್ಯಾತ ವಸ್ತ್ರ ವಿನ್ಯಾಸಕರಾದ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಜೋಡಿ ನೇರವಾಗಿ ಹಾಗೂ ಶಾಸ್ತ್ರೀಯವಾಗಿ ತಿರುಗೇಟು ನೀಡಿದ್ದಾರೆ.

ಟೀಕೆಗಳು ಬರುತ್ತವೆ ಎಂದು ನಾವು ಊಹಿಸಿದ್ದೆವು

ಕಾಸ್ಟ್ಯೂಮ್ ಡಿಸೈನರ್ ರಿಂಪಲ್ ಮಾತನಾಡಿ, "ಈ ಪ್ರಾಜೆಕ್ಟ್ ಪ್ರಾರಂಭಿಸಿದಾಗಲೇ ಕಾಸ್ಟಿಂಗ್ ಹಾಗೂ ವಸ್ತ್ರಗಳ ಆಯ್ಕೆಯ ಕುರಿತು ವಿವಿಧ ರೀತಿಯ ಅಭಿಪ್ರಾಯಗಳು ಮತ್ತು ಟೀಕೆಗಳು ಬರುತ್ತವೆ ಎಂಬುದನ್ನು ನಾವು ಮುಂಚಿತವಾಗಿಯೇ ಊಹಿಸಿದ್ದೆವು. ರಾಮಾಯಣದಂತಹ ಪವಿತ್ರ ಕಥಾನಕವನ್ನು ಕಲ್ಪಿಸಿಕೊಂಡಾಗ ಪುರಾತತ್ತ್ವಶಾಸ್ತ್ರದ ಅಥವಾ ಐತಿಹಾಸಿಕ ನಿಖರತೆಯನ್ನು ಹುಡುಕುವುದು ಅಸಾಧ್ಯ. ಏಕೆಂದರೆ ತ್ರೇತಾಯುಗಕ್ಕೆ ಸಂಬಂಧಿಸಿದಂತೆ ಅಸಲಿ ಉಡುಪುಗಳ ಆಧಾರಗಳು ಇಂದು ಲಭ್ಯವಿಲ್ಲ. ಆದ್ದರಿಂದ ನನ್ನ ಮನಸ್ಸಿನಲ್ಲಿ ಹಾಗೂ ನಮ್ಮ ಮನೆಯ ಪೂಜಾ ಕೊಠಡಿಯಲ್ಲಿರುವ ಅಮ್ಮನವರ ಪವಿತ್ರ ರೂಪವೇ ನನಗೆ ಸ್ಪೂರ್ತಿಯಾಯಿತು" ಎಂದು ಹೇಳಿದ್ದಾರೆ.

Ramayana: ಆದಿಪುರುಷ್‌ ರಾಮಾಯಣದ ಜೊತೆ ಹೋಲಿಕೆ ಬೇಡ! ಖ್ಯಾತ ಬರಹಗಾರ ಗರಂ

"ಚಿಕ್ಕಂದಿನಿಂದ ನಾವು ನೋಡುತ್ತಿರುವ ಕ್ಯಾಲೆಂಡರ್ ಆರ್ಟ್, ಸಾಂಪ್ರದಾಯಿಕ ದೇವಾಲಯಗಳ ಶಿಲ್ಪಗಳು ಹಾಗೂ ಖ್ಯಾತ ಚಿತ್ರಕಾರ ರಾಜಾ ರವಿವರ್ಮ ಬಿಡಿಸಿದ ವರ್ಣಚಿತ್ರಗಳ ಆಧಾರದ ಮೇಲೆಯೇ ಈ ಉಡುಪುಗಳನ್ನು ಅತ್ಯಂತ ಭಕ್ತಿಯಿಂದ ಮತ್ತು ಕಲಾತ್ಮಕವಾಗಿ ಡಿಸೈನ್ ಮಾಡಿದ್ದೇವೆ" ಎಂದು ರಿಂಪಲ್ ತಿಳಿಸಿದ್ದಾರೆ.

ಹಸಿರು ಬಣ್ಣವು ಮಾತೃತ್ವದ ಸಂಕೇತ

ಇನ್ನು ಕೈಕೇಯಿ ಪಾತ್ರಧಾರಿ ಲಾರಾ ದತ್ತಾ ಅವರ ಉಡುಪಿನ ಬಣ್ಣಗಳ ಬಗ್ಗೆ ಬರುತ್ತಿರುವ ಕಮೆಂಟ್‌ಗಳಿಗೆ ಡಿಸೈನರ್ ಹರ್‌ಪ್ರೀತ್ ನರುಲಾ ವಿವರಣೆ ನೀಡಿದ್ದಾರೆ. "ಕೈಕೇಯಿಯ ಕಾಸ್ಟ್ಯೂಮ್‌ನಲ್ಲಿರುವ ಪ್ರತಿಯೊಂದು ಬಣ್ಣದ ಹಿನ್ನೆಲೆಯಲ್ಲೂ ಒಂದು ಬಲವಾದ ಭಾವನೆ ಅಡಗಿದೆ. ಅದರಲ್ಲಿ ಬಳಸಿರುವ ಹಸಿರು ಬಣ್ಣವು ಮಾತೃತ್ವದ ಸಂಕೇತವಾದರೆ, ದಟ್ಟ ಮೆರೂನ್ ಬಣ್ಣವು ಆಕೆಯ ಜೀವನದಲ್ಲಿ ತೆಗೆದುಕೊಳ್ಳಬೇಕಾದ ಕಠಿಣ ನಿರ್ಧಾರ, ಆಕೆಯ ಮನಸ್ಸಿನ ಆವೇದನೆ ಹಾಗೂ ಅಂತರ್ಗತ ಶೋಧನೆಯನ್ನು ಸೂಚಿಸುತ್ತದೆ" ಎಂದಿದ್ದಾರೆ.

'ಆದಿಪುರುಷ್‌ ಸಿನಿಮಾ ಟೀಮ್‌ ಮಾಡಿದ ತಪ್ಪುಗಳನ್ನು ನೀವು ಮಾಡಬೇಡಿ..ʼ; 'ರಾಮಾಯಣ' ಚಿತ್ರತಂಡಕ್ಕೆ ಶ್ರೀ ರಾಮ್‌ಲೀಲಾ ಮಹಾಸಂಘ ವಾರ್ನಿಂಗ್

"ಸ್ವಂತ ಮಗ ಭರತ ಹಾಗೂ ಮುದ್ದಿನಿಂದ ಸಾಕಿ ಬೆಳೆಸಿದ ಶ್ರೀರಾಮನ ನಡುವೆ ನಲಿಗಿಹೋಗುವ ತಾಯಿಯ ಪಾತ್ರದ ಸಂಕೀರ್ಣತೆಯನ್ನು ಆ ಉಡುಪಿನ ಬಣ್ಣಗಳ ಮೂಲಕ ತರಲಾಗಿದೆ. ಸುಮ್ಮನೆ ಯಾವುದನ್ನೂ ಮಾಡಿಲ್ಲ, ಪ್ರತಿಯೊಂದು ಅಂಶದ ಹಿಂದೆ ಸುದೀರ್ಘ ಅಧ್ಯಯನವಿದೆ" ಎಂದು ಹರ್‌ಪ್ರೀತ್ ಹೇಳಿದ್ದಾರೆ.

ಮೊದಲು ಸಿನಿಮಾ ನೋಡಿ

ಸಿನಿಮಾಕ್ಕೆ ಸಂಬಂಧಿಸಿದಂತೆ ಕೇವಲ ಕೆಲವು ಲೀಕ್ ಆದ ಚಿತ್ರಗಳು ಹಾಗೂ ತುಣುಕುಗಳನ್ನು ನೋಡಿ ಒಂದು ತೀರ್ಮಾನಕ್ಕೆ ಬರುವುದು ಸರಿಯಲ್ಲ, ಚಿತ್ರತಂಡವು ಅತ್ಯಂತ ಆತ್ಮೀಯತೆ ಮತ್ತು ಗೌರವದಿಂದ ಈ ಚಿತ್ರವನ್ನು ನಿರ್ಮಿಸುತ್ತಿದೆ ಎಂದು ಡಿಸೈನರ್‌ಗಳು ಸ್ಪಷ್ಟಪಡಿಸಿದ್ದಾರೆ. ಪ್ರೇಕ್ಷಕರು ಮೊದಲು ಥಿಯೇಟರ್‌ನಲ್ಲಿ ಪೂರ್ಣ ಸಿನಿಮಾವನ್ನು ನೋಡಿ, ಆ ಅನುಭೂತಿಯನ್ನು ಪಡೆದ ನಂತರವೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕೆಂದು ಅವರು ವಿನಂತಿಸಿದ್ದಾರೆ.