‘ಕೆಜಿಎಫ್ 2’ ನಂತರ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಕಳೆದ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಕಂಡಿತ್ತು. ಚಿತ್ರದ ಮೇಲೆ ಅಭಿಮಾನಿಗಳು ಹಾಗೂ ಚಿತ್ರರಂಗ ಅಪಾರ ನಿರೀಕ್ಷೆ ಇಟ್ಟುಕೊಂಡಿತ್ತಾದರೂ, ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಕಾಣುವಲ್ಲಿ ಎಡವಿತ್ತು.
ಈ ಚಿತ್ರ ಬಿಡುಗಡೆಯಾದ ಬಳಿಕ ನಟ ಯಶ್ ಅವರು ಸಾರ್ವಜನಿಕವಾಗಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ‘ಟಾಕ್ಸಿಕ್’ ಬಿಡುಗಡೆಯ ನಂತರ ಮೊದಲ ಬಾರಿಗೆ ಅವರು ಮಾಧ್ಯಮಗಳ ಮುಂದೆ ಹಾಜರಾಗಲು ಸಜ್ಜಾಗಿದ್ದಾರೆ.
ʻರಾಮಾಯಣʼ ಚಿತ್ರಕ್ಕೆ ಯಶ್ ಬಂಡವಾಳ
ಸದ್ಯ ಯಶ್ ಅವರ ಸಂಪೂರ್ಣ ಚಿತ್ತ ಬಹುನಿರೀಕ್ಷಿತ ಹಾಗೂ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವಾದ ‘ರಾಮಾಯಣ: ಪಾರ್ಟ್ 1’ ಮೇಲಿದೆ. ಅತ್ಯಂತ ಬೃಹತ್ ಬಜೆಟ್ನಲ್ಲಿ ಅದ್ಧೂರಿಯಾಗಿ ಸಿದ್ಧಗೊಂಡಿರುವ ಈ ಸಿನಿಮಾದಲ್ಲಿ ಯಶ್ ಕೇವಲ ‘ರಾವಣ’ನಾಗಿ ಬಣ್ಣಹಚ್ಚಿರುವುದಷ್ಟೇ ಅಲ್ಲದೆ, ಸಹ-ನಿರ್ಮಾಪಕರಾಗಿಯೂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿಶ್ವಾದ್ಯಂತ ನವೆಂಬರ್ 5ರಂದು ಈ ಪೌರಾಣಿಕ ಕಾವ್ಯ ತೆರೆಕಾಣುತ್ತಿದ್ದು, ಪ್ರಚಾರ ಕಾರ್ಯಗಳು ದೇಶಾದ್ಯಂತ ಭರದಿಂದ ಸಾಗುತ್ತಿವೆ.
ಪ್ರೆಸ್ಮೀಟ್ನಲ್ಲಿ ಯಾರೆಲ್ಲಾ ಇದ್ದಾರೆ?
ಈ ಪ್ರಚಾರದ ಅಂಗವಾಗಿ ‘ರಾಮಾಯಣ’ ಚಿತ್ರತಂಡ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸುತ್ತಿದೆ. ನಗರದ ಪ್ರತಿಷ್ಠಿತ ಮಾಲ್ವೊಂದರಲ್ಲಿ ಅಕ್ಟೋಬರ್ 15ರಂದು ಚಿತ್ರತಂಡದ ಬೃಹತ್ ಪತ್ರಿಕಾಗೋಷ್ಠಿ ಆಯೋಜನೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ಯಶ್ ಜೊತೆಗೆ ಶ್ರೀರಾಮನ ಪಾತ್ರಧಾರಿ ರಣಬೀರ್ ಕಪೂರ್, ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
Yash-Radhika Pandit: ಯಶ್ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್! ಚೆಂದದ ವಿಡಿಯೊ ಶೇರ್ ಮಾಡಿದ ರಾಧಿಕಾ ಪಂಡಿತ್
ಈ ವೇಳೆ ಚಿತ್ರತಂಡ ಸಿನಿಮಾದ ವಿಶೇಷತೆಗಳು ಹಾಗೂ ಮೇಕಿಂಗ್ ಕುರಿತ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಳ್ಳಲಿದೆ. ಜೊತೆಗೆ, ‘ಟಾಕ್ಸಿಕ್’ ರಿಸಲ್ಟ್ ಕುರಿತು ಯಶ್ ಮಾಧ್ಯಮಗಳ ಮುಂದೆ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆಯೇ ಎಂಬ ಕಾತರ ಕೂಡ ಸಿನಿಪ್ರಿಯರಲ್ಲಿ ಮೂಡಿದೆ.
ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಜಾಗತಿಕ ಮಟ್ಟದ ಡಿಎನ್ಇಜಿ (DNEG) ಸಂಸ್ಥೆ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ಅಬ್ಬರಿಸಿದ್ದಾರೆ.
ಉಳಿದಂತೆ ರವಿ ದುಬೆ, ಲಾರಾ ದತ್ತ, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಸನ್ನಿ ಡಿಯೋಲ್, ಅರುಣ್ ಗೋವಿಲ್ ಹಾಗೂ ವಿವೇಕ್ ಒಬೆರಾಯ್ ಮುಂತಾದ ಘಟಾನುಘಟಿ ತಾರಾಗಣವೇ ಚಿತ್ರದಲ್ಲಿದೆ. ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.