ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಅತ್ಯಂತ ದುಬಾರಿ ಬಜೆಟ್‌ನ ಚಿತ್ರ ‘ರಾಮಾಯಣ: ಭಾಗ 1’ರ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಸೇರಿದ ಮುಂಬೈನ ಪ್ರೈಮ್ ಫೋಕಸ್ ಲಿಮಿಟೆಡ್ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ (ಅಕ್ಟೋಬರ್ 7) ದಿಢೀರ್ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ.
ವಿದೇಶಿ ಹಣ ರವಾನೆ (Foreign Remittances) ವಹಿವಾಟುಗಳಲ್ಲಿ ನಡೆದಿರಬಹುದಾದ ನಿಯಮ ಉಲ್ಲಂಘನೆ ಹಾಗೂ ಅನುಮಾನಾಸ್ಪದ ಆರ್ಥಿಕ ಚಟುವಟಿಕೆಗಳ ಶಂಕೆಯ ಹಿನ್ನೆಲೆಯಲ್ಲಿ ಈ ಶೋಧ ಕಾರ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ತನಿಖೆಗೆ ಒಳಪಟ್ಟಿರುವ ನಿಖರವಾದ ವಹಿವಾಟುಗಳ ವಿವರಗಳು ಮತ್ತು ತನಿಖೆಯ ವಿಸ್ತೃತ ವ್ಯಾಪ್ತಿಯ ಬಗ್ಗೆ ಐಟಿ ಇಲಾಖೆಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ಮತ್ತೊಂದೆಡೆ, ಈ ಆಡಳಿತಾತ್ಮಕ ಬೆಳವಣಿಗೆಗಳ ಕುರಿತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರತಿಕ್ರಿಯೆ ಇನ್ನಷ್ಟೇ ಸಿಗಬೇಕಿದೆ.
ಷೇರು ಮಾರುಕಟ್ಟೆಯಲ್ಲಿ ತಲ್ಲಣ
ಐಟಿ ದಾಳಿಯ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಪ್ರೈಮ್ ಫೋಕಸ್ ಕಂಪನಿಯ ಷೇರುಗಳ ಮೇಲೆ ಭಾರೀ ನಕಾರಾತ್ಮಕ ಪರಿಣಾಮ ಬೀರಿದೆ. ಬುಧವಾರದ (ಅ.7) ಬೆಳಗಿನ ವಹಿವಾಟಿನಲ್ಲಿ ಕಂಪನಿಯ ಷೇರು ಮೌಲ್ಯ ಸರಿಸುಮಾರು ಶೇ.8ರಷ್ಟು ತೀವ್ರ ಕುಸಿತ ಕಂಡಿದೆ.
ದೀಪಾವಳಿಗೆ ‘ರಾಮಾಯಣ’ ಅಬ್ಬರ
ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿರುವುದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಎರಡು ಭಾಗಗಳ ಚಿತ್ರವನ್ನು ನಮಿತ್ ಮಲ್ಹೋತ್ರಾ ಮತ್ತು ರಾಕಿಂಗ್ ಸ್ಟಾರ್ ಯಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಲಕ್ಷ್ಮಣನಾಗಿ ರವಿ ದುಬೆ ಹಾಗೂ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ.
Ramayana: ರಾಮಾಯಣ ಸಿನಿಮಾದ ದೃಶ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಕೇಶ್ ಖನ್ನಾ
ಜೊತೆಗೆ ಅರುಣ್ ಗೋವಿಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್ ಮುಂತಾದ ತಾರಾಬಳಗವಿದೆ. ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೊದಲ ಭಾಗ ಇದೇ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 8ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಎರಡನೇ ಭಾಗ ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಯಾರು ಈ ನಮಿತ್ ಮಲ್ಹೋತ್ರಾ?
1990ರ ದಶಕದಲ್ಲಿ ಮುಂಬೈನಲ್ಲಿ ತಂದೆಯ ಗ್ಯಾರೇಜ್‌ನಿಂದ ವಿಎಫ್‌ಎಕ್ಸ್ ಪಯಣ ಆರಂಭಿಸಿದ ನಮಿತ್ ಮಲ್ಹೋತ್ರಾ, ಭಾರತೀಯ ಚಿತ್ರರಂಗದ ತಾಂತ್ರಿಕತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪ್ರಮುಖರು. ಲಂಡನ್‌ನ 'ಡಬಲ್ ನೆಗೆಟಿವ್' ಸಂಸ್ಥೆಯೊಂದಿಗೆ ಕೈಜೋಡಿಸಿ 'ಡಿಎನ್‌ಇಜಿ' ಅನ್ನು ಜಾಗತಿಕ ದೈತ್ಯ ಸಂಸ್ಥೆಯನ್ನಾಗಿ ಬೆಳೆಸಿದ ಇವರು, 'ಇನ್‌ಸೆಪ್ಷನ್' ಮತ್ತು 'ಡ್ಯೂನ್: ಪಾರ್ಟ್ ಟೂ' ಸೇರಿದಂತೆ ಹಲವು ವಿಶ್ವಪ್ರಸಿದ್ಧ ಹಾಲಿವುಡ್ ಚಿತ್ರಗಳಿಗೆ 8 ಆಸ್ಕರ್ ಪ್ರಶಸ್ತಿಗಳು ಒಲಿಯುವಂತೆ ಮಾಡಿದ್ದಾರೆ. ಇದೀಗ 'ರಾಮಾಯಣ' ಚಿತ್ರಕ್ಕೂ ಡಿಎನ್‌ಇಜಿ ಸಂಸ್ಥೆಯೇ ಅಂತರರಾಷ್ಟ್ರೀಯ ಮಟ್ಟದ ವಿಎಫ್‌ಎಕ್ಸ್ ಒದಗಿಸುತ್ತಿದೆ.