ನಟಿ ರಶ್ಮಿಕಾ ಮಂದಣ್ಣ ಸಮಾಜಮುಖಿ ಕಾರ್ಯವೊಂದಕ್ಕೆ ಕೈಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮುಂದಿನ ಒಂದು ವರ್ಷದ ಅವಧಿಗೆ ಬರೋಬ್ಬರಿ 400 ಕುಟುಂಬಗಳನ್ನು ದತ್ತು ಪಡೆದುಕೊಂಡಿರುವ ಅವರು, ಪ್ರತಿ ಮೂರು ತಿಂಗಳಿಗೊಮ್ಮೆ ಆ ಕುಟುಂಬಗಳ ಸಂಪೂರ್ಣ ದಿನಸಿ ಖರ್ಚನ್ನು ತಾವೇ ಭರಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇತರರಿಗೂ ಇಂತಹ ಸಣ್ಣಪುಟ್ಟ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಲಿ ಎಂಬ ಉದ್ದೇಶದಿಂದ ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಜಯಮ್ಮನ ಪಾತ್ರದ ಜೊತೆ ಸಾಮ್ಯತೆ
ಸದ್ಯ ಪತಿ ವಿಜಯ್ ದೇವರಕೊಂಡ ಜೊತೆ ನಟಿಸಿರುವ ಬಹುನಿರೀಕ್ಷಿತ ‘ರಣಬಾಲಿ’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿರುವ ರಶ್ಮಿಕಾ, ಚಿತ್ರದಲ್ಲಿನ ತಮ್ಮ ‘ಜಯಮ್ಮ’ ಪಾತ್ರಕ್ಕೂ ಹಾಗೂ ನೈಜ ಜೀವನದ ವ್ಯಕ್ತಿತ್ವಕ್ಕೂ ಇರುವ ಸಾಮ್ಯತೆಯನ್ನು ಈ ಸಂದರ್ಭದಲ್ಲಿ ನೆನೆದಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು, "ನಾವು ನಿರ್ವಹಿಸುವ ಪಾತ್ರಗಳು ನಮ್ಮ ಮೇಲೆ ಅಪಾರ ಪ್ರಭಾವ ಬೀರುತ್ತವೆ. ಜಯಮ್ಮ ಹಾಗೂ ನನ್ನ ನಡುವೆ ಏನಾದರೂ ಸಾಮ್ಯತೆಗಳಿವೆಯೇ ಎಂದು ಹಲವರು ಕೇಳುತ್ತಲೇ ಇರುತ್ತೀರಿ. ಅದಕ್ಕೆ ನನ್ನ ಉತ್ತರ ‘ಹೌದು’. ಇತರರಿಗೆ ನೆರವಾಗುವ ಗುಣ ನನಗೂ ಇದೆ, ಆಕೆಗೂ ಇತ್ತು" ಎಂದು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಪೋಸ್ಟ್
ನಿಮಗೂ ಪ್ರೇರಣೆ ಆಗಲಿ
"ಈ ಹಿಂದೆ ಇಂತಹ ಕೆಲಸಗಳನ್ನು ನನ್ನ ತಂಡ ಹಾಗೂ ಕೆಲವೇ ಆಪ್ತರಿಗೆ ಮಾತ್ರ ಸೀಮಿತವಾಗಿಟ್ಟು ಗುಟ್ಟಾಗಿ ಮಾಡುತ್ತಿದ್ದೆ. ಆದರೆ, ಈಗ ಇದನ್ನು ಬಹಿರಂಗವಾಗಿ ಹಂಚಿಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ, ನನ್ನ ಈ ನಡೆ ನಿಮ್ಮಲ್ಲೂ ಇಂಥದ್ದೊಂದು ಕೆಲಸ ಮಾಡಲು ಪ್ರೇರಣೆ ನೀಡಿದರೆ ನನಗೆ ಖಂಡಿತಾ ಸಂತೋಷವಾಗುತ್ತದೆ" ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
ದಿನಸಿ ವೆಚ್ಚದ ಹಣವನ್ನು ಉಳಿತಾಯ ಮಾಡಿ
"ಏಕಕಾಲದಲ್ಲಿ 400 ಕುಟುಂಬಗಳಿಗೆ ಈ ನೆರವು ಸಿಗಲಿದ್ದು, ಆ ಮೂಲಕ ಅವರು ದಿನಸಿ ವೆಚ್ಚದ ಹಣವನ್ನು ಉಳಿತಾಯ ಮಾಡಿ ತಮ್ಮ ಮಕ್ಕಳ ಶಿಕ್ಷಣ ಹಾಗೂ ಭವಿಷ್ಯದ ಉತ್ತಮ ಯೋಜನೆಗಳಿಗೆ ಬಳಸಿಕೊಳ್ಳಲಿ ಎಂಬುದು ಇದರ ಪ್ರಮುಖ ಉದ್ದೇಶವಾಗಿದೆ. ಯಾವುದೇ ಒಳ್ಳೆಯ ಕೆಲಸವು ಸಮಾಜದಲ್ಲಿ ಬದಲಾವಣೆ ತರಲು ದೊಡ್ಡ ಮಟ್ಟದಲ್ಲೇ ಇರಬೇಕಿಲ್ಲ, ಪ್ರತಿಯೊಬ್ಬರೂ ತಮ್ಮ ಕೈಲಾದ ಪುಟ್ಟ ನೆರವಿನಿಂದಲೇ ಶುರುಮಾಡಬೇಕು. ನನ್ನ ಕಷ್ಟದ ದಿನಗಳು, ನಿದ್ದೆಯಿಲ್ಲದ ರಾತ್ರಿಗಳು, ಗಾಯಗಳು, ನೋವು ಹಾಗೂ ಕಣ್ಣೀರಿಗೆ ಆ ಕುಟುಂಬಗಳ ಮುಖದಲ್ಲಿ ಮೂಡಿದ ನಗುವೇ ಬೆಲೆಕಟ್ಟಲಾಗದ ತಕ್ಕ ಪ್ರತಿಫಲ ನೀಡಿದೆ" ಎಂದು ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದಾರೆ.
3 ತಿಂಗಳ ಸಮಗ್ರ ದಿನಸಿ ಕಿಟ್ನಲ್ಲಿ ಏನೇನಿದೆ?
ದತ್ತು ಪಡೆದಿರುವ ಪ್ರತಿ ಕುಟುಂಬಕ್ಕೆ ಮೂರು ತಿಂಗಳಿಗೆ ಸಾಕಾಗುವಂತಹ ಸಮಗ್ರ ಹಾಗೂ ಪೌಷ್ಟಿಕ ದಿನಸಿ ಸಾಮಗ್ರಿಗಳ ಕಿಟ್ ಅನ್ನು ಸಿದ್ಧಪಡಿಸಲಾಗಿದೆ. ಈ ಕಿಟ್ನಲ್ಲಿ 75 ಕೆಜಿ ಅಕ್ಕಿ, 10 ಕೆಜಿ ಗೋಧಿ ಹಿಟ್ಟು, 3 ಕೆಜಿ ರಾಗಿ ಹಾಗೂ 10 ಲೀಟರ್ ಅಡುಗೆ ಎಣ್ಣೆ ಒಳಗೊಂಡಿದೆ. ಇದರ ಜೊತೆಗೆ 3 ವಿಧದ 15 ಕೆಜಿ ಬೇಳೆಕಾಳುಗಳು, 2 ಕೆಜಿ ಸೋಯಾ ಚಂಕ್ಸ್, ತಲಾ 3 ಕೆಜಿ ಉಪ್ಪು ಮತ್ತು ಸಕ್ಕರೆ ಇರಲಿದೆ. ಅಡುಗೆಗೆ ಅಗತ್ಯವಾದ 1 ಕೆಜಿ ಖಾರದ ಪುಡಿ, ತಲಾ 500 ಗ್ರಾಂ ಅರಿಶಿನ ಪುಡಿ, ಹುಣಸೆಹಣ್ಣು ಹಾಗೂ 500 ಗ್ರಾಂ ಚಹಾ ಪುಡಿಯನ್ನು ಒದಗಿಸಲಾಗುತ್ತಿದೆ.
ಹೈದರಾಬಾದ್, ಮಹಬೂಬ್ನಗರ, ಅನಂತಪುರ, ಬೆಂಗಳೂರು, ಕೊಚ್ಚಿ, ಚೆನ್ನೈ, ಕೊಡಗು, ವಿಜಯವಾಡದ ನಗರಗಳ ಆಯ್ದ ಕುಟುಂಬಗಳಿಗೆ ಈ ದಿನಸಿ ತಲುಪಲಿದೆ. ಅಂದಹಾಗೆ, ರಶ್ಮಿಕಾ ಹಂಚಿಕೊಂಡ ಈ ಪೋಸ್ಟ್ನಲ್ಲಿ ತಮ್ಮ ಹೆಸರನ್ನು ರಶ್ಮಿಕಾ ಮಂದಣ್ಣ ಬದಲಿಗೆ, ರಶ್ಮಿಕಾ ದೇವರಕೊಂಡ ಎಂದು ಬದಲಿಸಿಕೊಂಡಿರುವುದು ಗಮನಸೆಳೆದಿದೆ.
ತೆರೆಗೆ ಬರುತ್ತಿದೆ ʻರಣಬಾಲಿʼ ಸಿನಿಮಾ
ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯಾಗಿ ನಟಿಸಿರುವ 'ರಣಬಾಲಿ' ಚಿತ್ರವು ಅಕ್ಟೋಬರ್ 16 ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ. 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಬಳಿಕ ಈ ಜೋಡಿಯ ಮೂರನೇ ಸಿನಿಮಾವಾಗಿದ್ದು, ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ಈ ಚಿತ್ರವು 1876-1878ರ ಭೀಕರ ಮದ್ರಾಸ್ ಕ್ಷಾಮದ ಕಥಾಹಂದರವನ್ನು ಒಳಗೊಂಡಿದೆ.