ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಬಹುನಿರೀಕ್ಷಿತ ಪೌರಾಣಿಕ ‘ರಾಮಾಯಣ’ ಸಿನಿಮಾದ ಮೊದಲ ಹಾಡು ‘ಜೈ ಜೈ ರಾಮ್..’ಅಧಿಕೃತವಾಗಿ ಬಿಡುಗಡೆಯಾಗಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ, ನಿತೇಶ್ ತಿವಾರಿ ನಿರ್ದೇಶನದಲ್ಲಿ ಎರಡು ಭಾಗಗಳಾಗಿ ಮೂಡಿಬರುತ್ತಿರುವ ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ, ನಟಿ ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.
ಬಿಡುಗಡೆಯಾಗಿರುವ ‘ಜೈ ಜೈ ರಾಮ್’ ಭಕ್ತಿಪ್ರಧಾನ ಮಧುರ ಗೀತೆಗೆ ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಸಂಯೋಜನೆ ಮಾಡಿದ್ದು, ಖ್ಯಾತ ಗಾಯಕರಾದ ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ದನಿಯಾಗಿದ್ದಾರೆ. ಡಾ. ಕುಮಾರ್ ವಿಶ್ವಾಸ್ ಅವರ ಸಾಹಿತ್ಯವಿದೆ.
ಜೈ ಸಿಯಾ ರಾಮ್
ಹಳೆಯ ಜನಪ್ರಿಯ ಭಜನೆ ‘ಜೈ ಸಿಯಾ ರಾಮ್’ ಗೀತೆಯ ಹೊಸ ರೂಪವಾಗಿರುವ ಈ ಮೆಲೋಡಿ ಸಾಂಗ್‌ನಲ್ಲಿ ರಾಮ-ಸೀತೆಯರ ಕಲ್ಯಾಣ ಮಹೋತ್ಸವ, ಅಯೋಧ್ಯೆಯ ಬೀದಿಗಳಲ್ಲಿ ರಥದಲ್ಲಿ ಸಾಗುವ ರಾಮ-ಸೀತೆಯರ ಮೇಲೆ ಪ್ರಜೆಗಳು ಹೂಮಳೆ ಸುರಿಸುವ ಅದ್ಭುತ ಕ್ಷಣಗಳು ಹಾಗೂ ಶ್ರೀರಾಮನ ಯೋಧ ಪರಾಕ್ರಮದ ಝಲಕ್‌ಗಳನ್ನು ಸೆರೆಹಿಡಿಯಲಾಗಿದೆ. ಹಾಡು ರಿಲೀಸ್‌ಗೂ ಮುನ್ನ ರಮಣೀಯ ಹಿನ್ನೆಲೆಯಲ್ಲಿ ಸೀತೆಯ ಮುಡಿಗೆ ಶ್ರೀರಾಮ ಹೂವನ್ನು ಮುಡಿಸುವ ಆಕರ್ಷಕ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿತ್ತು. ಇತ್ತೀಚೆಗಷ್ಟೇ ತೆರೆಕಂಡು ಸದ್ದು ಮಾಡಿದ್ದ ಟ್ರೇಲರ್‌ನಲ್ಲೂ ಅತ್ಯಾಧುನಿಕ ಸಿಜಿಐ ಮತ್ತು ವಿಎಫ್‌ಎಕ್ಸ್ ತಂತ್ರಜ್ಞಾನದ ಮೂಲಕ ರಾಮಾಯಣದ ಭವ್ಯ ಲೋಕವನ್ನು ಅನಾವರಣಗೊಳಿಸಲಾಗಿತ್ತು.
Ramayana: ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ರಾಮಾಯಣ ರಿಲೀಸ್!
ಮಹತ್ವದ ಪಾತ್ರದಲ್ಲಿ ವಿವೇಕ್ ಒಬೆರಾಯ್
ಈ ಚಿತ್ರದಲ್ಲಿ ಪಾತ್ರವರ್ಗದ ಆಯ್ಕೆ ಕೂಡ ಅಪಾರ ಕುತೂಹಲಕ್ಕೆ ಕಾರಣವಾಗಿದೆ. ರಾವಣನಾಗಿ ಯಶ್ ಅವರ ಲುಕ್ ಗಮನಸೆಳೆದರೆ, ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ರಾಕ್ಷಸ ರಾಜಕುಮಾರ ವಿದ್ಯುತ್ಜಿಹ್ವನಾಗಿ ವಿವೇಕ್ ಒಬೆರಾಯ್ ಕಾಣಿಸಿಕೊಂಡಿದ್ದಾರೆ. ದೂರದರ್ಶನದ ಪೌರಾಣಿಕ ‘ರಾಮಾಯಣ’ ಧಾರಾವಾಹಿಯ ಮೂಲ ರಾಮ ಅರುಣ್ ಗೋವಿಲ್ ಈ ಚಿತ್ರದಲ್ಲಿ ರಾಮನ ತಂದೆ ದಶರಥ ಮಹಾರಾಜನ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಚಿತ್ರದಲ್ಲಿ ಹನುಮಂತನಾಗಿ ನಟಿಸಿರುವ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಿರುವ ರವಿ ದುಬೆ ಅವರ ಪಾತ್ರಗಳು ಕೂಡ ಭಾರಿ ನಿರೀಕ್ಷೆ ಮೂಡಿಸಿವೆ.
4,000 ಕೋಟಿ ರೂ. ಬಜೆಟ್‌ನ ಸಿನಿಮಾ
‘ರಾಮಾಯಣ’ ಚಿತ್ರವನ್ನು ಎರಡು ಭಾಗಗಳಿಗಾಗಿ ಬರೋಬ್ಬರಿ 4,000 ಕೋಟಿ ರೂ. ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ಈ ಕುರಿತು ಮಾತನಾಡಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ, "6-7 ವರ್ಷಗಳ ಹಿಂದೆ ಈ ಸಾಹಸಕ್ಕೆ ಕೈಹಾಕಿದಾಗ ಜನ ನನ್ನನ್ನು ಹುಚ್ಚ ಅಂದುಕೊಂಡಿದ್ದರು. ಯಾವುದೇ ಭಾರತೀಯ ಸಿನಿಮಾ ಈ ಬಜೆಟ್‌ಗೆ ಸಮೀಪವೂ ಬಂದಿಲ್ಲ. ಹಾಲಿವುಡ್‌ನ ದೊಡ್ಡ ಚಿತ್ರಗಳಿಗಿಂತಲೂ ಅತ್ಯಂತ ದಕ್ಷತೆಯಿಂದ ಹಾಗೂ ಜವಾಬ್ದಾರಿಯಿಂದ ಪ್ರಪಂಚದಲ್ಲೇ ಅತಿ ದೊಡ್ಡ ಸಿನಿಮಾವಾಗಿ ಭಾರತದ ಈ ಶ್ರೇಷ್ಠ ಮಹಾಕಾವ್ಯವನ್ನು ಜಾಗತಿಕ ಮಟ್ಟಕ್ಕೆ ಕಟ್ಟಿಕೊಡುತ್ತಿದ್ದೇವೆ" ಎಂದು ಹೇಳಿದ್ದಾರೆ.
‘ರಾಮಾಯಣ: ಪಾರ್ಟ್-1’ ಚಿತ್ರವು 2026ರ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್‌ನಲ್ಲಿ ವಿಶ್ವಾದ್ಯಂತ ಬಹುಭಾಷೆಗಳಲ್ಲಿ ತೆರೆಕಾಣಲಿದ್ದು, ಎರಡನೇ ಭಾಗವನ್ನು 2027ರ ದೀಪಾವಳಿಗೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.