ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ramayana Part 1 Review: ರಾಮನಾಗಿ ರಣಬೀರ್‌ ಶಾಂತಸ್ವರೂಪಿ, ರಾವಣನಾಗಿ ಯಶ್‌ ಉಗ್ರರೂಪಿ; ಮನಸೂರೆಗೊಳ್ಳುವ ರಾಮಾಯಣ ದೃಶ್ಯ ವೈಭವ!

Ramayana Part 1 Movie Review: ರಣಬೀರ್‌ ಕಪೂರ್‌, ಯಶ್‌, ಸಾಯಿ ಪಲ್ಲವಿ, ರಕುಲ್‌ ಪ್ರೀತ್‌ ಸಿಂಗ್‌ ಮುಂತಾದವರು ನಟಿಸಿರುವ ʻರಾಮಾಯಣ: ಪಾರ್ಟ್‌ 1ʼ ಸಿನಿಮಾವು ತೆರೆಕಂಡಿದೆ. ಈ ಬಹುನಿರೀಕ್ಷಿತ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು? ಇಲ್ಲಿದೆ ಮಾಹಿತಿ.

ಸಿನಿಮಾ: ರಾಮಾಯಣ: ಪಾರ್ಟ್‌ 1

ತಾರಾಗಣ: ರಣಬೀರ್‌ ಕಪೂರ್‌, ಯಶ್‌, ಸಾಯಿ ಪಲ್ಲವಿ, ರವಿ ದುಬೆ, ರಕುಲ್‌ ಪ್ರೀತ್‌ ಸಿಂಗ್‌, ಕಾಜಲ್‌ ಅಗರ್ವಾಲ್, ಶೋಭನಾ, ಅರುಣ್‌ ಗೋವಿಲ್‌, ಲಾರಾ ದತ್ತ, ಹರೀಶ್‌ ಉತ್ತಮನ್‌, ವಿವೇಕ್‌ ಓಬೆರಾಯ್

ನಿರ್ದೇಶನ: ನಿತೇಶ್‌ ತಿವಾರಿ

ನಿರ್ಮಾಣ: ನಮಿತ್‌ ಮಲ್ಹೋತ್ರ, ಯಶ್‌

ಸಂಗೀತ: ಎ. ಆರ್. ರೆಹಮಾನ್‌, ಹ್ಯಾನ್ಸ್ ಝಿಮ್ಮರ್

ಅವಧಿ: 3 ಗಂಟೆ 15 ನಿಮಿಷ

ರೇಟಿಂಗ್: 4.5/5

ಭಾರತೀಯ ಚಿತ್ರರಂಗ ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಸಿನಿಮಾ ʻರಾಮಾಯಣ: ಪಾರ್ಟ್‌ 1ʼ. ಇದು ನಿರ್ಮಾಪಕ ನಮಿತ್‌ ಮಲ್ಹೋತ್ರ ಅವರ ಕನಸು, ʻದಂಗಲ್‌ʼ ಖ್ಯಾತಿಯ ನಿರ್ದೇಶಕ ನಿತೇಶ್‌ ತಿವಾರಿ ಅವರ ಹಲವು ವರ್ಷಗಳ ತಪಸ್ಸು. ʻರಾಮಾಯಣʼ ಸಿನಿಮಾ ಮೊದಲು ಗಮನ ಸೆಳೆದಿದ್ದೇ ತನ್ನ ತಾರಾಗಣದಿಂದ. ಬಾಲಿವುಡ್‌ನ ಸ್ಫುರದ್ರೂಪಿ ನಟ ರಣಬೀರ್ ಕಪೂರ್‌ ರಾಮನಾಗಿ, ಲಂಕಾಧಿಪತಿ ರಾವಣನಾಗಿ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಸೀತಾಮಾತೆಯಾಗಿ ದಕ್ಷಿಣ ಭಾರತದ ಸಹಜ ಸುಂದರಿ ಸಾಯಿ ಪಲ್ಲವಿ ಅವರ ಆಯ್ಕೆಯೇ ಬಹಳ ವಿಶೇಷ ಎನಿಸಿತ್ತು. ನಿತೇಶ್‌ ತಿವಾರಿ ಅವರ ಈ ಪ್ರಯೋಗ ಯಶಸ್ವಿಯಾಗಿದೆಯೇ? ಮುಂದೆ ಓದಿ.

ಮಹಾಕಾವ್ಯಕ್ಕೆ ಹೊಸ ಮೆರುಗು

ವಾಲ್ಮೀಕಿ ಮಹರ್ಷಿಗಳ ಮಹಾಕಾವ್ಯ ರಾಮಾಯಣವು ಭಾರತೀಯ ಮನಸ್ಸುಗಳಲ್ಲಿ ಬೆರೆತುಹೋಗಿದೆ. ಪ್ರಭು ಶ್ರೀರಾಮನ ಈ ಕಥೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಹೀಗೆ ಪ್ರತಿಯೊಬ್ಬರಿಗೂ ತಿಳಿದಿರುವ ಕಥೆಯನ್ನೇ ಆಯ್ಕೆ ಮಾಡಿಕೊಂಡು, ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಬೇಕು ಎಂಬುದು ಚಿತ್ರತಂಡದ ಉದ್ದೇಶವಾಗಿತ್ತು. ಅದಕ್ಕಾಗಿ ಕಥೆಯನ್ನು ನಿರೂಪಿಸುವ ಕ್ರಮವನ್ನು ಬದಲಿಸಿಕೊಂಡು ಪ್ರೇಕ್ಷಕರಿಗೆ ಹೊಸ ಅನುಭೂತಿ ನೀಡಿದೆ ಚಿತ್ರತಂಡ.

ಈ ಚಿತ್ರದ ಕಥೆಯು ಅಸುರರ ಉದಯದಿಂದ ಆರಂಭವಾಗುತ್ತದೆ. ದಶಾನನ ರಾವಣ (ಯಶ್) ದೇವಲೋಕದ ಅಧಿಪತಿ ಇಂದ್ರದೇವನನ್ನು (ಕುನಾಲ್ ಕಪೂರ್) ಸೋಲಿಸಿ, ಕುಬೇರನಿಂದ ಲಂಕೆಯನ್ನು ವಶಪಡಿಸಿಕೊಳ್ಳುತ್ತಾನೆ. ರಾವಣನ ದಬ್ಬಾಳಿಕೆಗೆ ಅಂತ್ಯ ಹಾಡುವಂತೆ ಇಂದ್ರನು ವಿಷ್ಣುವಿನಲ್ಲಿ ಪ್ರಾರ್ಥಿಸಿದಾಗ, ವಿಷ್ಣುವು ದಶರಥ ಮಹಾರಾಜನ ಹಿರಿಯ ಪುತ್ರ ರಾಮನಾಗಿ (ರಣಬೀರ್) ಮಾನವ ರೂಪ ಧರಿಸುತ್ತಾನೆ. ರಾಜಕುಮಾರ ರಾಮನು ಹಲವು ಸವಾಲುಗಳನ್ನು ಎದುರಿಸಿ, ಮಿಥಿಲೆಯ ರಾಜಕುಮಾರಿ ಸೀತೆಯನ್ನು (ಸಾಯಿ ಪಲ್ಲವಿ) ವರಿಸಿ, ಬಳಿಕ ಲಕ್ಷ್ಮಣ (ರವಿ) ಹಾಗೂ ಸೀತೆಯೊಂದಿಗೆ ವನವಾಸಕ್ಕೆ ತೆರಳುತ್ತಾನೆ. ಅಲ್ಲಿ ರಾಮನ ಮೇಲೆ ರಾವಣನ ಸಹೋದರಿ ಶೂರ್ಪನಖಿ ಮೋಹಿತಳಾಗುತ್ತಾಳೆ. ಅದರ ಪರಿಣಾಮವಾಗಿ, ತನ್ನ ಮೂಗಿಗೆ ಸಂಚಕಾರ ತಂದುಕೊಂಡು, ಅಣ್ಣ ರಾವಣನ ಬಳಿ ಅಳಲು ತೋಡಿಕೊಳ್ಳುತ್ತಾಳೆ. ತಂಗಿಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾಗುವ ರಾವಣ, ಸೀತೆಯನ್ನು ಅಪಹರಿಸುತ್ತಾನೆ. 'ರಾಮಾಯಣ: ಪಾರ್ಟ್‌ 1' ಚಿತ್ರದಲ್ಲಿ ಇಲ್ಲಿಯವರೆಗಿನ ಕಥೆ ಇದೆ.

‘ರಾಮಾಯಣ: ಪಾರ್ಟ್ 2’ ಸಿನಿಮಾ ಮುಂದಿನ ವರ್ಷ ತೆರೆಗೆ ಬರೋದಿಲ್ಲ; ಕೊನೇ ಕ್ಷಣದಲ್ಲಿ ಸಿಕ್ತು ಎರಡು ಅಚ್ಚರಿಯ ಮಾಹಿತಿ!

ಅದ್ಭುತ ಮೇಕಿಂಗ್‌, ಬಿಗಿಯಾದ ನಿರ್ದೇಶನ

ಈ ಹಿಂದೆ ತೆರೆಕಂಡಿದ್ದ 'ಆದಿಪುರುಷ್‌' ಚಿತ್ರದಲ್ಲೂ ಹೊಸ ತಂತ್ರಜ್ಞಾನದ ಮೂಲಕ ರಾಮಾಯಣದ ಕಥೆ ಹೇಳುತ್ತೇವೆ ಎಂದು ಹೊರಟಿದ್ದ ಚಿತ್ರತಂಡ ಹೀನಾಯವಾಗಿ ಮುಗ್ಗರಿಸಿತ್ತು. ಹಾಗಾಗಿ, ಈ ಬಾರಿಯ 'ರಾಮಾಯಣ' ಕೂಡ ಅದೇ ತಪ್ಪನ್ನು ಎಲ್ಲಿ ಮಾಡಿಬಿಡುತ್ತದೋ ಎಂಬ ಅನುಮಾನ ಕೆಲವರಲ್ಲಿ ಇತ್ತು. ಆದರೆ ಅಂತಹ ಯಾವುದೇ ಎಡವಟ್ಟುಗಳು ಈ ಚಿತ್ರದಲ್ಲಿಲ್ಲ. ಎಲ್ಲರಿಗೂ ಗೊತ್ತಿರುವ ರಾಮಾಯಣದ ಕಥೆಯನ್ನು ಹೇಳುತ್ತಲೇ, ಅತ್ಯಾಧುನಿಕ ದೃಶ್ಯವೈಭವದ ಮೂಲಕ ಪ್ರೇಕ್ಷಕರನ್ನು ಕಟ್ಟಿಹಾಕುವಲ್ಲಿ ನಿರ್ದೇಶಕ ನಿತೇಶ್‌ ತಿವಾರಿ ಗೆದ್ದಿದ್ದಾರೆ. ಈ ಸಿನಿಮಾ ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸುವುದಷ್ಟೇ ಅಲ್ಲ, ಅದನ್ನೂ ಮೀರಿ ಬೆಳೆದು ನಿಲ್ಲುತ್ತದೆ. ಕಥೆ ಸಂಪೂರ್ಣವಾಗಿ ಮೊದಲೇ ತಿಳಿದಿದ್ದರೂ ಸಹ, ಪ್ರೇಕ್ಷಕ ಪ್ರತಿ ದೃಶ್ಯವನ್ನು ಆನಂದಿಸುತ್ತಾ, ಭಾವಪರವಶನಾಗುತ್ತಾನೆ ಮತ್ತು ಸಂಪೂರ್ಣವಾಗಿ ತಲ್ಲೀನನಾಗುತ್ತಾನೆ.

ಮುಂದೇನಾಗಲಿದೆ ಎಂಬುದು ಗೊತ್ತಿದ್ದರೂ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವ ಬಿಗಿಯಾದ ಚಿತ್ರಕಥೆಯೇ ಈ ಚಿತ್ರದ ಅತಿ ದೊಡ್ಡ ಶಕ್ತಿ. ರಾವಣನು ತ್ರಿಲೋಕಗಳ ಅಧಿಪತಿಯಾಗಲು ಏಕೆ ಹಂಬಲಿಸಿದ? ರಾವಣ ರಾಜನಾಗುವ ಮುನ್ನ ಅಸುರರು ಹೇಗೆ ಬದುಕುತ್ತಿದ್ದರು? ತಂಗಿ ಶೂರ್ಪನಖಿಯ ಪತಿ ವಿದ್ಯುಜ್ಜಿಹ್ವನ ಜೊತೆ ರಾವಣ ಕಾದಾಡಿದ್ದೇಕೆ? ಮಲತಾಯಿ ಕೈಕೇಯಿಯೊಂದಿಗೆ ಶ್ರೀರಾಮನಿಗಿದ್ದ ಭಾವನಾತ್ಮಕ ಒಡನಾಟ, ರಾಮ-ಪರಶುರಾಮರ ನಡುವಿನ ಮುಖಾಮುಖಿ, ರಾಮನಿಗೆ ಅಕ್ಷಯ ಬತ್ತಳಿಕೆ ದೊರೆತ ರೀತಿ ಹಾಗೂ ವನವಾಸದ ಸಮಯದಲ್ಲಿ ರಾಮ ಮತ್ತು ಸೀತೆಯ ನಡುವೆ ಗಟ್ಟಿಯಾಗುವ ಬಾಂಧವ್ಯ, ಇವೆಲ್ಲವೂ ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಅನುಭವದ ಜೊತೆಗೆ ಆಶ್ಚರ್ಯವನ್ನು ನೀಡುತ್ತವೆ.

ನಿತೇಶ್ ತಿವಾರಿ ಅವರ ಅತ್ಯುನ್ನತ ನಿರ್ದೇಶನದ ಜೊತೆಗೆ ಶ್ರೀಧರ್ ರಾಘವನ್ ಅವರ ಚಿತ್ರಕಥೆ ವಿಶೇಷ ಪ್ರಶಂಸೆಗೆ ಅರ್ಹ. ಮೊದಲೇ ಹೇಳಿದಂತೆ, ಕಥೆ ತಿಳಿದಿದ್ದರೂ ಪ್ರೇಕ್ಷಕರು ಪರದೆಯಲ್ಲೇ ಮುಳುಗಿಹೋಗಿ, ರೋಮಾಂಚನಗೊಂಡು, ಭಾವನಾತ್ಮಕ ಸನ್ನಿವೇಶಗಳಿಗೆ ಕರಗುತ್ತಾರೆ ಎಂದಾದರೆ ಅದು ಬರವಣಿಗೆಗೆ ಸಿಕ್ಕ ಜಯ ಎನ್ನಬಹುದು. ವಿಎಫ್‌ಎಕ್ಸ್ ಆ್ಯಕ್ಷನ್ ದೃಶ್ಯಗಳು ಮೈನವಿರೇಳಿಸುತ್ತವೆ. ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಹಿನ್ನೆಲೆ ಸಂಗೀತವಂತೂ ಅದ್ಭುತವಾಗಿದ್ದು, ದೃಶ್ಯಗಳ ಭಾವತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿದೆ.

ರಾವಣ ಮತ್ತು ಜಟಾಯು ನಡುವಿನ ಕಾಳಗ ರೋಮಾಂಚಕಾರಿಯಾಗಿದೆ. 3 ಗಂಟೆ 15 ನಿಮಿಷಗಳ ಅವಧಿಯ ಈ ಸಿನಿಮಾವು ಒಂದಿನಿತೂ ಬೋರ್‌ ಆಗುವುದಿಲ್ಲ ಎನ್ನುವುದೇ ಇದರ ಬಹುದೊಡ್ಡ ಯಶಸ್ಸು. ಮೊದಲಾರ್ಧದಲ್ಲಿ ರಾಮ ವನವಾಸಕ್ಕೆ ತೆರಳುವುದಕ್ಕೂ ಮುನ್ನ ಬರುವ ದಶರಥ ಮತ್ತು ಕೈಕೇಯಿ ನಡುವಿನ ದೃಶ್ಯಗಳು ತುಸು ಮೆಲೋಡ್ರಾಮಾ ಎನಿಸುತ್ತವೆ. ಅದು ಬಿಟ್ಟರೆ ಮತ್ತೆಲ್ಲಿಯೂ ಸಿನಿಮಾದ ವೇಗ ತಗ್ಗುವುದೇ ಇಲ್ಲ!

ರಾಮನಾಗಿ ಮಿಂಚಿದ ರಣಬೀರ್‌ ಕಪೂರ್‌

ರಣಬೀರ್ ಕಪೂರ್ ಮತ್ತೊಮ್ಮೆ ತಮ್ಮ ನಟನೆಯ ಮೂಲಕ ಮಿಂಚಿದ್ದಾರೆ. ರಾಮನ ಪಾತ್ರಕ್ಕೆ ಅಗತ್ಯವಿದ್ದ ಶಾಂತತೆ ಹಾಗೂ ಮುಗ್ಧತೆಯನ್ನು ಅವರು ಅತ್ಯಂತ ನೈಜವಾಗಿ ತೆರೆಗೆ ತಂದಿದ್ದು, ಭಾವನಾತ್ಮಕ ಸನ್ನಿವೇಶಗಳಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಮಧ್ಯಂತರಕ್ಕೂ ಮುನ್ನ ಕೈಕೇಯಿ ರಾಮನಿಗೆ ವನವಾಸವನ್ನು ಘೋಷಿಸುವ ದೃಶ್ಯ ಮತ್ತು ರಾಮನು ತನ್ನ ಹೆತ್ತವರೊಂದಿಗೆ ಮಾತನಾಡುವ ಸನ್ನಿವೇಶಗಳು ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುತ್ತವೆ. ರಣಬೀರ್ ಅತ್ಯಂತ ಪ್ರಬುದ್ಧತೆಯೊಂದಿಗೆ ರಾಮನ ಪಾತ್ರದ ಘನತೆಯನ್ನು ಎತ್ತಿಹಿಡಿದಿದ್ದಾರೆ. ಪರಶುರಾಮನಾಗಿಯೂ ಅಚ್ಚರಿ ನೀಡುತ್ತಾರೆ.

ರಾವಣನಾಗಿ ಅಬ್ಬರಿಸಿದ ಯಶ್

ಇನ್ನು ರಾವಣನಾಗಿ ಯಶ್ ಈ ಇಡೀ ಸಿನಿಮಾದ ಅತಿ ದೊಡ್ಡ ಶಕ್ತಿ! ಮೊದಲ ಭಾಗವು ರಾವಣನ ಪಾತ್ರಕ್ಕೆ ಹೆಚ್ಚು ಒತ್ತು ನೀಡಿದ್ದು, ಬೆಳ್ಳಿತೆರೆಯ ಮೇಲೆ ಈ ಅಸುರ ಚಕ್ರವರ್ತಿಯ ಪಾತ್ರವನ್ನು ಈಗ ಅವರನ್ನು ಬಿಟ್ಟರೆ ಇನ್ಯಾರೂ ಮಾಡಲು ಸಾಧ್ಯವಿಲ್ಲವೇನೋ ಎಂಬಷ್ಟರ ಮಟ್ಟಿಗೆ ಯಶ್ ಹೊಂದಿಕೊಂಡಿದ್ದಾರೆ. ಈ ಹಿಂದೆ ಬೆಳ್ಳಿತೆರೆ ಮೇಲೆ ರಾವಣನ ಪಾತ್ರ ಮಾಡಿದ ಬೇರೆ ನಟರ ಯಾವುದೇ ಛಾಯೆಯೂ ಇಲ್ಲದೆ, ಯಶ್ ಅವರು ತಮ್ಮದೇ ಶೈಲಿಯಲ್ಲಿ ಈ ಪಾತ್ರಕ್ಕೆ ಜೀವ ತುಂಬಿರುವುದು ವಿಶೇಷ.

ಮೊದಲ ಬಾರಿಗೆ ಪೌರಾಣಿಕ ಪಾತ್ರವೊಂದನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿರುವ ಅವರಿಗೆ ಭರ್ಜರಿ ಪ್ರಶಂಸೆ ಹಾಗೂ ಚಪ್ಪಾಳೆಗಳು ಸಲ್ಲುತ್ತವೆ. ಅದರಲ್ಲೂ ದಶಕಂಠನ 10 ತಲೆಗಳು ಒಂದಾಗುವ ಆ ಒಂದು ದೃಶ್ಯ ಇಡೀ ಚಿತ್ರದ ಹೈಲೈಟ್‌ ಎನ್ನಬಹುದು. ಇದು ಯಶ್ ಅವರ ನಟನೆಯನ್ನು ಬಹುಕಾಲ ನೆನಪಿಟ್ಟುಕೊಳ್ಳುವಂತೆ ಮಾಡುತ್ತದೆ.

ಸೀತೆಯಾಗಿ ಗಮನಸೆಳೆಯುವ ಸಾಯಿ ಪಲ್ಲವಿ

ಮತ್ತೋರ್ವ ಪ್ರತಿಭಾವಂತ ನಟಿ ಸಾಯಿ ಪಲ್ಲವಿ ಸೀತೆಯಾಗಿ ತೆರೆಮೇಲೆ ಕಂಗೊಳಿಸಿದ್ದಾರೆ. ಮಿಥಿಲೆಯ ರಾಜಕುಮಾರಿಯಾಗಿ, ಅಯೋಧ್ಯೆಯ ಸೊಸೆಯಾಗಿ, ಪತಿಗಾಗಿ ಎಲ್ಲವನ್ನೂ ತೊರೆದು ವನವಾಸಕ್ಕೆ ತೆರಳುವ ಸತಿಯಾಗಿ ಅವರ ಪ್ರಬುದ್ಧ ನಟನೆ ತೂಕವುಳ್ಳದ್ದು. ಲಕ್ಷ್ಮಣನಾಗಿ ರವಿ ದುಬೆ ಉತ್ತಮ ನಟನೆ ನೀಡಿದ್ದಾರೆ, ಅಲ್ಲಲ್ಲಿ ನವಿರಾದ ಹಾಸ್ಯದ ಮೂಲಕ ನಗಿಸಿದ್ದಾರೆ.

ರಾವಣನ ತಾಯಿಯಾಗಿ ಶೋಭನಾ ಅವರ ಅಭಿನಯ ಮೆಚ್ಚುಗೆಗೆ ಅರ್ಹ. ಶೂರ್ಪನಖಿ ಪಾತ್ರಕ್ಕೆ ನಟಿ ರಕುಲ್‌ ಪ್ರೀತ್‌ ಸಿಂಗ್‌ ಉತ್ತಮ ಆಯ್ಕೆಯಾಗಿದ್ದು, ಆಕರ್ಷಕ ಕ್ರೂರತೆಯೊಂದಿಗೆ ಛಾಪು ಮೂಡಿಸಿದ್ದಾರೆ. ಮಂಡೋದರಿ ಪಾತ್ರ ಮಾಡಿರುವ ಕಾಜಲ್‌ ಅಗರ್ವಾಲ್‌ಗೆ ಹೆಚ್ಚಿನ ದೃಶ್ಯಗಳಿಲ್ಲ. ಕೈಕೇಯಿಯಾಗಿ ನಟಿ ಲಾರಾ ದತ್ತಾ, ದಶರಥನಾಗಿ ಅರುಣ್‌ ಗೋವಿಲ್‌, ವಿದ್ಯುಜ್ಜಿಹ್ವನಾಗಿ ವಿವೇಕ್ ಒಬೆರಾಯ್ ಮಿಂಚಿದ್ದಾರೆ. ಜಟಾಯು ಪಾತ್ರ ಕೂಡ ಚಿತ್ರದಲ್ಲಿ ಪ್ರಮುಖವಾಗಿ ಗಮನಸೆಳೆಯುತ್ತದೆ.

ಅಂದಹಾಗೆ, ಈ ಭಾಗ 1ರಲ್ಲಿ ರಾಮ ಮತ್ತು ರಾವಣ ಇನ್ನೂ ಮುಖಾಮುಖಿ ಆಗಿಲ್ಲ ಮತ್ತು ಹನುಮಂತನನ್ನೂ ತೋರಿಸಿಲ್ಲ. ಅದೆಲ್ಲವನ್ನೂ ʻರಾಮಾಯಣ: ಪಾರ್ಟ್‌ 2ʼರಲ್ಲಿ ಕಣ್ತುಂಬಿಕೊಳ್ಳಬಹುದು.