ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಗಿ ಭದ್ರತೆಯ ನಡುವೆಯೂ 'ರಾಮಾಯಣ' ಚಿತ್ರದ ಟ್ರೇಲರ್ ಲೀಕ್‌, ಚಿತ್ರತಂಡಕ್ಕೆ ಬಿಗ್ ಶಾಕ್!‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್

ನಿರ್ದೇಶಕ ನಿತೇಶ್ ತಿವಾರಿ ಅವರ ಭಾರಿ ಬಜೆಟ್‌ನ 'ರಾಮಾಯಣ' ಚಿತ್ರದ ಟ್ರೇಲರ್‌ ಪ್ರದರ್ಶನ ದೆಹಲಿಯಲ್ಲಿ ನಡೆದಿದೆ. ಬಿಗಿ ಭದ್ರತೆಯ ನಡುವೆಯೂ ಟ್ರೇಲರ್‌ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ. ಲೀಕ್ ಆದ ಕಳಪೆ ಗುಣಮಟ್ಟದ ವಿಡಿಯೋದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರ ಹಾಗೂ ರಾಮನಾಗಿ ರಣಬೀರ್ ಕಪೂರ್ ಝಲಕ್ ಕಾಣಿಸಿದ್ದು, ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟುಗೊಳಿಸಿದೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಹಾಗೂ ಬೃಹತ್ ಬಜೆಟ್‌ನ 'ರಾಮಾಯಣ' ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಗೂ ಮುನ್ನವೇ ಇಂಟರ್ನೆಟ್‌ನಲ್ಲಿ ಲೀಕ್ ಆಗಿದ್ದು, ಚಿತ್ರತಂಡಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ. ಜುಲೈ 18 ರಂದು ದೆಹಲಿಯ ಪ್ರಸಿದ್ಧ 'ಭಾರತ ಮಂಟಪ'ದಲ್ಲಿ ಅತ್ಯಂತ ಬಿಗಿ ಭದ್ರತೆಯ ನಡುವೆ ಕೇವಲ ಆಹ್ವಾನಿತ ಮಾಧ್ಯಮ ಪ್ರತಿನಿಧಿಗಳು ಹಾಗೂ ವಿಶೇಷ ಅತಿಥಿಗಳಿಗಾಗಿ ಟ್ರೇಲರ್ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು. ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದ ಒಂದಿಬ್ಬರ ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಆದಾಗ್ಯೂ, ಕೆಲವು ವಿಡಿಯೋ ತುಣುಕುಗಳು ಮತ್ತು ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಕಂಡುಬಂದಿದೆ.

‘ರಾಮಾಯಣ’ ಸಿನಿಮಾದ ತಾರಾಗಣದ ಬಗ್ಗೆ ನಟ ಅನ್ನು ಕಪೂರ್ ಅಸಮಾಧಾನ: ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಪ್ರಶ್ನೆ ಮಾಡಿದ್ದೇಕೆ?

ಪ್ರಚಾರದ ತಂತ್ರ ಉಲ್ಟಾ ಹೊಡೆಯಿತೇ?

ಸಾರ್ವಜನಿಕವಾಗಿ ಟ್ರೇಲರ್ ಬಿಡುಗಡೆ ಮಾಡುವ ಒಂದು ವಾರ ಮುಂಚಿತವಾಗಿಯೇ ಮಾಧ್ಯಮದವರಿಗೆ ಪ್ರದರ್ಶಿಸುವ ಚಿತ್ರತಂಡದ ಈ ತಂತ್ರ ಈಗ ಉಲ್ಟಾ ಹೊಡೆದಿದೆ. ಇಂದಿನ ಡಿಜಿಟಲ್ ಯುಗದಲ್ಲಿ, ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇರುವಾಗ ಮತ್ತು ಎಐ ತಂತ್ರಜ್ಞಾನ ಮುಂಚೂಣಿಯಲ್ಲಿರುವಾಗ ಇಂತಹ ಗೌಪ್ಯ ಪ್ರದರ್ಶನಗಳು ಅಪಾಯಕಾರಿ ಎಂದು ಸಿನಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನೇರವಾಗಿ ಒಂದು ಸಾರ್ವಜನಿಕ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಟ್ರೇಲರ್ ಬಿಡುಗಡೆ ಮಾಡಿದ್ದರೆ ಈ ಸೋರಿಕೆಯನ್ನು ತಡೆಯಬಹುದಿತ್ತು ಎಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ. ಲೀಕ್ ಆಗಿರುವ ವಿಡಿಯೋಗಳು ಕಳಪೆ ಗುಣಮಟ್ಟದಲ್ಲಿದ್ದು, ಚಿತ್ರದ ಮೊದಲ ಇಂಪ್ರೆಷನ್ ಮೂಡಿಸುವಲ್ಲಿ ಚಿತ್ರತಂಡ ಎಡವಿತೇ ಎಂಬ ಪ್ರಶ್ನೆ ಮೂಡಿಸಿದೆ.

ಸೋರಿಕೆಯಾದ ಟ್ರೇಲರ್‌ನಲ್ಲಿ ಏನಿದೆ?

ಸದ್ಯ ಲೀಕ್ ಆಗಿರುವ ಅಸ್ಪಷ್ಟ ವಿಡಿಯೋ ತುಣುಕುಗಳು ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿವೆ. ಶ್ರೀರಾಮನ ಅವತಾರದಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕುದುರೆ ಸವಾರಿ ಮಾಡುವ ರಣಬೀರ್ ಅವರ ಎಂಟ್ರಿ ಸೀನ್ ಮತ್ತು ವನವಾಸದ ಝಲಕ್ ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ.

ಟ್ರೇಲರ್‌ನ ಆರಂಭವು ರಾವಣನ ಪಾತ್ರಧಾರಿ ರಾಕಿಂಗ್ ಸ್ಟಾರ್ ಯಶ್ ಅವರ ಅಬ್ಬರದ ದೃಶ್ಯಗಳೊಂದಿಗೆ ಆಗಲಿದ್ದು, ಅವರ ಲುಕ್ ಗಮನ ಸೆಳೆದಿದೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಂಡಿದ್ದು, ಸದ್ಯಕ್ಕೆ ಅವರ ಪಾತ್ರದ ಅವಧಿ ಈ ಪಾರ್ಟ್‌ನಲ್ಲಿ ಕಡಿಮೆಯಿದೆ ಎನ್ನಲಾಗಿದೆ. ಸೀತೆಯಾಗಿ ನಟಿ ಸಾಯಿ ಪಲ್ಲವಿ ಅವರ ಶಾಂತ ಹಾಗೂ ಭಾವುಕ ಮುಖಭಾವ, ರಾಜ ದಶರಥನಾಗಿ ಅರುಣ್ ಗೋವಿಲ್ ಮತ್ತು ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ ಅವರ ಝಲಕ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

ಈ ಹಿಂದೆ ಚಿತ್ರದ ಟೀಸರ್ ಬಿಡುಗಡೆಯಾದಾಗ ಅದರ ವಿಎಫ್‌ಎಕ್ಸ್ (VFX) ಬಗ್ಗೆ ಕೆಲವರು ನೆಗೆಟಿವ್ ಕಮೆಂಟ್ ಮಾಡಿದ್ದರು. ಆದರೆ ಈಗ ಲೀಕ್ ಆಗಿರುವ ಟ್ರೇಲರ್ ತುಣುಕುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಚಿತ್ರತಂಡದ ಅಧಿಕೃತ ಪ್ರಕಟಣೆಯ ಪ್ರಕಾರ, ಜುಲೈ 24 ರಂದು ವಿಶ್ವದಾದ್ಯಂತ 'ರಾಮಾಯಣ' ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಲಿದ್ದು, ಬಹುನಿರೀಕ್ಷಿತ 'ರಾಮಾಯಣ ಪಾರ್ಟ್ 1' ಸಿನಿಮಾ ನವೆಂಬರ್ 8 ರಂದು ತೆರೆಕಾಣಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.