ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಆದಿಪುರುಷ್‌ ಸಿನಿಮಾ ಟೀಮ್‌ ಮಾಡಿದ ತಪ್ಪುಗಳನ್ನು ನೀವು ಮಾಡಬೇಡಿ..ʼ; 'ರಾಮಾಯಣ' ಚಿತ್ರತಂಡಕ್ಕೆ ಶ್ರೀ ರಾಮ್‌ಲೀಲಾ ಮಹಾಸಂಘ ವಾರ್ನಿಂಗ್

ನಿತೀಶ್ ತಿವಾರಿ ನಿರ್ದೇಶನದ 4 ಸಾವಿರ ಕೋಟಿ ರೂ. ಬಜೆಟ್‌ನ 'ರಾಮಾಯಣ' ಚಿತ್ರತಂಡಕ್ಕೆ ದೆಹಲಿ ಮೂಲದ ಶ್ರೀ ರಾಮ್‌ಲೀಲಾ ಮಹಾಸಂಘ ಪತ್ರ ಬರೆದು ವಾರ್ನಿಂಗ್ ನೀಡಿದೆ. ಸಿನಿಮಾ ಬಿಡುಗಡೆಗೂ ಮುನ್ನ ಧಾರ್ಮಿಕ ಪಂಡಿತರಿಗೆ ವಿಶೇಷ ಪ್ರದರ್ಶನ ಏರ್ಪಡಿಸಬೇಕೆಂದು ಆಗ್ರಹಿಸಿದೆ.

ರಣಬೀರ್‌ ಕಪೂರ್‌, ಯಶ್‌, ಸಾಯಿ ಪಲ್ಲವಿ ನಟನೆಯ ʻರಾಮಾಯಣʼ ಸಿನಿಮಾದ ಟ್ರೇಲರ್‌ ಈಚೆಗಷ್ಟೇ ರಿಲೀಸ್‌ ಆಗಿ, ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ದೀಪಾವಳಿ ಹಬ್ಬದ ಪ್ರಯುಕ್ತ ತೆರೆಗೆ ಬರಲಿರುವ ನಿತೀಶ್ ತಿವಾರಿ ನಿರ್ದೇಶನದ 4‌ ಸಾವಿರ ಕೋಟಿ ರೂ. ಬಜೆಟ್‌ನ ಈ ಸಿನಿಮಾದ ಮೇಲೆ ಇನ್ನಿಲ್ಲದಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಮಧ್ಯೆ ಚಿತ್ರತಂಡಕ್ಕೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಿವೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ಚಿತ್ರತಂಡಕ್ಕೆ ಶ್ರೀ ರಾಮ್‌ಲೀಲಾ ಮಹಾಸಂಘವು ಪತ್ರವನ್ನು ಬರೆದಿದೆ.

ವಿಶೇಷ ಪ್ರದರ್ಶನವನ್ನು ಏರ್ಪಡಿಸಬೇಕು

ದೆಹಲಿ ಮೂಲದ ಶ್ರೀ ರಾಮ್‌ಲೀಲಾ ಮಹಾಸಂಘದ ಅಧ್ಯಕ್ಷ ಅರ್ಜುನ್ ಕುಮಾರ್ ಅವರು 'ರಾಮಾಯಣ' ಚಿತ್ರದ ನಿರ್ದೇಶಕ ನಿತೀಶ್ ತಿವಾರಿ ಮತ್ತು ನಿರ್ಮಾಣ ಸಂಸ್ಥೆಗೆ ಒಂದು ಪತ್ರವೊಂದನ್ನು ಬರೆದಿದ್ದಾರೆ. "ಈ ಸಿನಿಮಾದಲ್ಲಿ ಸೀತಾ-ರಾಮರ ವನವಾಸ, ಕಲ್ಯಾಣ, ರಾಮ-ರಾವಣ ಯುದ್ಧದಂತಹ ಪ್ರಮುಖ ಘಟ್ಟಗಳನ್ನು ಅದ್ಭುತವಾದ ವಿಶುವಲ್ ಎಫೆಕ್ಟ್ಸ್ ಮತ್ತು ಗ್ರಾಫಿಕ್ಸ್‌ನೊಂದಿಗೆ ರೂಪಿಸಿದ್ದರೂ, ಸನಾತನ ಧರ್ಮಕ್ಕೆ ಧಕ್ಕೆ ತರುವಂತಹ ಅಂಶಗಳು ಏನಾದರೂ ಇವೆಯೋ ಎಂಬ ಅನುಮಾನ ತಮಗೆ ಇದೆ. ಆದ್ದರಿಂದ ಈ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಮೊದಲು ತಮ್ಮ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಧಾರ್ಮಿಕ ಪಂಡಿತರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಬೇಕು" ಎಂದು ಅರ್ಜುನ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.

'ಆದಿಪುರುಷ್' ಸಿನಿಮಾದ ನೆನಪಿಸಿದ ಮಹಾಸಂಘ

ಈ ಪತ್ರದಲ್ಲಿ ಹಿಂದೆ ನಡೆದ 'ಆದಿಪುರುಷ್' ವಿವಾದವನ್ನು ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. "ಆದಿಪುರುಷ್ ಚಿತ್ರದಲ್ಲಿ ಚಿನ್ನದ ಲಂಕೆಯನ್ನು ಕಪ್ಪಾಗಿ ತೋರಿಸಿದ್ದು, ರಾವಣನ ರೂಪ, ಪಾತ್ರಗಳ ಪೋಷಾಕು ಮತ್ತು ಸಂಭಾಷಣೆಗಳು ಸಂಪ್ರದಾಯಕ್ಕೆ ವಿರುದ್ಧವಾಗಿದ್ದವು ಎಂದು ತೀವ್ರ ವಿರೋಧ ವ್ಯಕ್ತವಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಅದೇ ರೀತಿಯ ತಪ್ಪುಗಳು ನಿತೀಶ್ ತಿವಾರಿ ಅವರ 'ರಾಮಾಯಣ' ಚಿತ್ರದಲ್ಲಿ ಮರುಕಳಿಸದಂತೆ ನೋಡಿಕೊಳ್ಳಲು ನಾವು ಈ ಮುಂಜಾಗ್ರತಾ ಸ್ಕ್ರೀನಿಂಗ್ ಅನ್ನು ಕೋರುತ್ತಿದ್ದೇವೆ" ಎಂದು ಮಹಾಸಂಘ ಸ್ಪಷ್ಟಪಡಿಸಿದೆ.

Ramayana Movie: ರಣಬೀರ್ ʻರಾಮʼನ ಪಾತ್ರದಲ್ಲಿ ಅತ್ಯಂತ ವೀಕ್‌! ರಾಮಲೀಲಾ ಸಂಘದಿಂದ ಬಂತು ಈ ಎಚ್ಚರಿಕೆ

"ನೀವು ನಿರ್ಮಾಣ ಮಾಡಿರುವ ʻರಾಮಾಯಣʼ ಸಿನಿಮಾದಲ್ಲಿ ಯಾವುದಾದರೂ ಆಕ್ಷೇಪಾರ್ಹ ದೃಶ್ಯಗಳು ಅಥವಾ ಸಂಭಾಷಣೆಗಳಿದ್ದರೆ ಅವುಗಳನ್ನು ಮೊದಲೇ ಗುರುತಿಸಿ ತೆಗೆದುಹಾಕಬಹುದು, ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗದಂತೆ ತಡೆಯಬಹುದು" ಎಂದು ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

Ramayana trailer: ಯಶ್‌ರನ್ನು ಹೊಗಳಿದ ರಿಷಬ್ ಶೆಟ್ಟಿ! ಆ ಪಾತ್ರಕ್ಕೆ ಬೇರೆ ಯಾರೂ ನ್ಯಾಯ ಸಲ್ಲಿಸಲು ಸಾಧ್ಯವಿಲ್ಲ ಎಂದ ಡಿವೈನ್‌ ಸ್ಟಾರ್‌

ಪ್ರತಿಭಟನೆ ಮಾಡುವ ಎಚ್ಚರಿಕೆ!

ಒಂದು ವೇಳೆ ಚಿತ್ರತಂಡ ಅಥವಾ ನಿರ್ಮಾಪಕರು ಈ ವಿಶೇಷ ಪ್ರದರ್ಶನಕ್ಕೆ ನಿರಾಕರಿಸಿದರೆ, ದೇಶಾದ್ಯಂತ ಥಿಯೇಟರ್‌ಗಳ ಮುಂದೆ ಇತರ ಹಿಂದೂ ಸಂಘಟನೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಮತ್ತು ಧರಣಿ ನಡೆಸುವುದಾಗಿ ಶ್ರೀ ರಾಮ್‌ಲೀಲಾ ಮಹಾಸಂಘ ಎಚ್ಚರಿಸಿದೆ. ಹಾಲಿವುಡ್ ಮಟ್ಟದ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿರುವ ಈ ದೃಶ್ಯಕಾವ್ಯದ ಟ್ರೇಲರ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿರುವ ಈ ಸಮಯದಲ್ಲಿ, ಈ ಹೊಸ ವಿವಾದವು ಯಾವ ತಿರುವು ಪಡೆದುಕೊಳ್ಳಲಿದೆಯೋ ಎಂದು ಕಾದುನೋಡಬೇಕಿದೆ. ಸದ್ಯ ಈವರೆಗೂ ಚಿತ್ರತಂಡ ಯಾರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.