ರಣಬೀರ್ ಕಪೂರ್, ಯಶ್ ಅಭಿನಯದ 'ರಾಮಾಯಣ' ಸಿನಿಮಾ ನ.5 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಸದ್ಯ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಚಿತ್ರತಂಡಕ್ಕೆ ಪೈರಸಿ ವಿರುದ್ಧ ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ಮಧ್ಯಂತರ ರಕ್ಷಣೆ ಸಿಕ್ಕಿದೆ. ಯಾವುದೇ ಅನಧಿಕೃತ ವ್ಯಕ್ತಿಗಳು ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಈ ಚಿತ್ರವನ್ನು ರೆಕಾರ್ಡ್ ಮಾಡುವುದು, ಅಪ್‌ಲೋಡ್ ಮಾಡುವುದು ಇಲ್ಲವೇ ಅನುಮತಿಯಿಲ್ಲದೆ ಪ್ರಸಾರ ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ನಿರ್ದೇಶನ
ಚಿತ್ರದ ಹಕ್ಕುಸ್ವಾಮ್ಯ ಹಾಗೂ ಜಾಗತಿಕ ವಿತರಣಾ ಹಕ್ಕುಗಳನ್ನು ಹೊಂದಿರುವ ಗಾಡ್‌ಪವರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ. ಚಿತ್ರದ ಚಿತ್ರಕಥೆ, ಪಾತ್ರಗಳು, ದೃಶ್ಯ ಸಂಯೋಜನೆ, ಹಾಡುಗಳು ಹಾಗೂ ಧ್ವನಿಮುದ್ರಣ ಸೇರಿದಂತೆ ಸಮಗ್ರ ಬೌದ್ಧಿಕ ಆಸ್ತಿಯ ರಕ್ಷಣೆ ಕೋರಿ ಈ ಅರ್ಜಿ ಸಲ್ಲಿಸಲಾಗಿತ್ತು.
‘ರಾಕಿ ಭಾಯ್’ ಯಶ್ ಮಕ್ಕಳಾದ ಆಯ್ರಾ - ಯಥರ್ವ್‌ಗೆ ‘ರಾಮಾಯಣ’ ಸಿನಿಮಾ ಸಖತ್ ಸ್ಪೆಷಲ್; ಯಾಕೆ ಗೊತ್ತಾ?
ನಿರ್ಮಾಣ ಸಂಸ್ಥೆಯಿಂದ ದೂರು ಸ್ವೀಕರಿಸಿದ ತಕ್ಷಣವೇ ಪೈರೇಟೆಡ್ ಕಂಟೆಂಟ್‌ಗಳನ್ನು ತೆಗೆದುಹಾಕಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ನ್ಯಾಯಾಲಯವು ಸ್ಪಷ್ಟ ನಿರ್ದೇಶನ ನೀಡಿದೆ.
ಈ ಸಿನಿಮಾದ ಬಜೆಟ್ 4 ಸಾವಿರ ಕೋಟಿ!
ವಿಚಾರಣೆ ವೇಳೆ ಚಿತ್ರದ ಭಾರಿ ಬಜೆಟ್ ಬಗ್ಗೆ ಮಾಹಿತಿ ನೀಡಿದ ಅರ್ಜಿದಾರರು, ಚಿತ್ರದ ಮೊದಲ ಭಾಗವನ್ನು ಬರೋಬ್ಬರಿ 2,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಒಟ್ಟಾರೆ ಎರಡೂ ಭಾಗಗಳ ಒಟ್ಟು ಬಜೆಟ್ 4,000 ಕೋಟಿಗೂ ಅಧಿಕವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಕಟ್ಟುನಿಟ್ಟಾದ ಗೌಪ್ಯತಾ ಒಪ್ಪಂದಗಳಿದ್ದರೂ ಸಹ ವಿಶೇಷ ಪ್ರದರ್ಶನಗಳ ವೇಳೆ ಎರಡೂ ಟ್ರೇಲರ್‌ಗಳ ದೃಶ್ಯಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಸೋರಿಕೆ ಮಾಡಲಾಗಿತ್ತು. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದ ಬಳಿಕವೂ ಇಂತಹ ಅಕ್ರಮ ಕೃತ್ಯಗಳು ಮರುಕಳಿಸಿ ಭಾರಿ ಆರ್ಥಿಕ ನಷ್ಟ ಉಂಟಾಗುವ ಆತಂಕವಿದೆ ಎಂದು ನಿರ್ಮಾಣ ಸಂಸ್ಥೆ ವಾದಿಸಿತು.
ಗೂಗಲ್ ಎಲ್‌ಎಲ್‌ಸಿ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಪರ ವಕೀಲರು ಈ ಮನವಿಗೆ ಸಮ್ಮತಿಸಿದ್ದು, ಪೈರಸಿ ಸಂಬಂಧಿತ ದೂರುಗಳ ಮೇಲೆ ತ್ವರಿತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ʻದಂಗಲ್ʼ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪೌರಾಣಿಕ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದರೆ, ರಾವಣನಾಗಿ ಯಶ್ ಕಾಣಿಸಿಕೊಂಡಿದ್ದಾರೆ. ಪ್ರೈಮ್ ಫೋಕಸ್ ಸ್ಟುಡಿಯೋಸ್‌ನ ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ನಿರ್ಮಿಸಿವೆ.