ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಲ್ಕೇ ದಿನಕ್ಕೆ 500 ಕೋಟಿ ಗಳಿಸಿದ 'ರಾಮಾಯಣ' ಸಿನಿಮಾ; ಬಾಕ್ಸ್ ಆಫೀಸ್‌ನಲ್ಲಿ ಪ್ರಭಾಸ್‌ ನಟನೆಯ 'ಆದಿಪುರುಷ್' ಚಿತ್ರದ ದಾಖಲೆ ಉಡೀಸ್‌!

ಯಶ್‌, ರಣಬೀರ್‌ ಕಪೂರ್‌ ನಟನೆಯ ʻರಾಮಾಯಣʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕರ್ನಾಟಕದಲ್ಲಿ ಕೇವಲ ಮೂರೇ ದಿನಗಳಲ್ಲಿ ಬರೋಬ್ಬರಿ ₹50 ಕೋಟಿಗೂ ಅಧಿಕ ಗಳಿಕೆ ಕಂಡಿದ್ದ ಈ ಚಿತ್ರ, ಇದೀಗ ವಿಶ್ವಾದ್ಯಂತ ನಾಲ್ಕೇ ದಿನಗಳಿಗೆ 500 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ-1’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಧಿಪತ್ಯ ಸಾಧಿಸಿದೆ. ಬಿಡುಗಡೆಯಾದ ಆರಂಭದಲ್ಲಿ, ಅದರಲ್ಲೂ ವಿಶೇಷವಾಗಿ ವಿದೇಶಿ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದ ಓಪನಿಂಗ್ ಕಾಣದೆ ತುಸು ನೀರಸ ಆರಂಭ ಪಡೆದುಕೊಂಡಿದ್ದರೂ, ವಾರಾಂತ್ಯದಲ್ಲಿ ಚೇತರಿಕೆ ಕಂಡಿದೆ. ಭಾನುವಾರದ ವೇಳೆಗೆ ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಗಳಿಕೆ ದಾಖಲಿಸಿದ್ದು, ಕೇವಲ ನಾಲ್ಕು ದಿನಗಳಲ್ಲೇ ವಿಶ್ವಾದ್ಯಂತ 500 ಕೋಟಿ ರೂ. ಗಡಿ ದಾಟಿ ಹೊಸ ದಾಖಲೆ ಬರೆದಿದೆ.

507 ಕೋಟಿ ರೂ. ಬಾಚಿದ ರಾಮಾಯಣ

ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಗುರುವಾರದಂದು (ನ.5) ವಿಶ್ವಾದ್ಯಂತ ತೆರೆಕಂಡಿತು. ಶುಕ್ರವಾರದ ಗಳಿಕೆಯಲ್ಲಿ ತುಸು ಕಡಿಮೆ ಆಗಿತ್ತು. ಆದರೆ ಶನಿವಾರ ಮತ್ತು ಭಾನುವಾರದಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮಹಾಪೂರವೇ ಹರಿದುಬಂದ ಪರಿಣಾಮ, ಭಾರತದಲ್ಲಿ ನಾಲ್ಕು ದಿನಗಳಲ್ಲಿ ಭಾರತದಲ್ಲಿ 285 ಕೋಟಿ ಗಳಿಕೆ ದಾಖಲಾಯಿತು. ವಿದೇಶಿ ಮಾರುಕಟ್ಟೆಗಳಲ್ಲಿ 222 ಕೋಟಿಗೂ ಕಲೆಕ್ಷನ್ ಬಾಚಿಕೊಂಡಿದೆ. ಇದರೊಂದಿಗೆ ಚಿತ್ರದ ಜಾಗತಿಕ ಒಟ್ಟು ಗಳಿಕೆ ನಾಲ್ಕೇ ದಿನಗಳಲ್ಲಿ ಬರೋಬ್ಬರಿ 507 ಕೋಟಿ ತಲುಪಿದೆ.

Ramayana Movie: ರಾವಣ–ಜಟಾಯು ಯುದ್ಧದ ದೃಶ್ಯ ಮಾಡಲು ಎಷ್ಟು ವರ್ಷ ಬೇಕಾಯ್ತು ಗೊತ್ತಾ?

ʻಆದಿಪುರುಷ್ʼ‌ ದಾಖಲೆ ಉಡೀಸ್‌

ಕುತೂಹಲಕಾರಿ ಸಂಗತಿಯೆಂದರೆ, ಇದೇ ರಾಮಾಯಣ ಆಧರಿಸಿ ಈ ಹಿಂದೆ ಬಂದಿದ್ದ ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರಕ್ಕೆ ಹೋಲಿಸಿದರೆ ‘ರಾಮಾಯಣ’ ವಿಶಿಷ್ಟ ಸಾಧನೆ ತೋರಿದೆ. ಮೊದಲ ಮೂರು ದಿನಗಳಲ್ಲಿ ‘ಆದಿಪುರುಷ್’ ಚಿತ್ರವೇ ಮುಂದಿತ್ತಾದರೂ, ಕಳಪೆ ವಿಮರ್ಶೆಗಳಿಂದಾಗಿ ನಾಲ್ಕನೇ ದಿನಕ್ಕೆ ಅದರ ಗಳಿಕೆ 20 ಕೋಟಿಗಿಂತ ಕೆಳಗೆ ಕುಸಿದು, ಅಂತಿಮವಾಗಿ 393 ಕೋಟಿ ಲೈಫ್‌ಟೈಮ್‌ ಕಲೆಕ್ಷನ್‌ ಮಾಡಿತ್ತು.

‘ರಾಮಾಯಣ’ ಚಿತ್ರವು ನಾಲ್ಕನೇ ದಿನವೇ 500 ಕೋಟಿ ಮೈಲಿಗಲ್ಲುಗಳನ್ನು ದಾಟಿ ಮುನ್ನುಗ್ಗಿದ್ದು, ಕೇವಲ ನಾಲ್ಕೇ ದಿನಗಳಲ್ಲಿ ‘ಆದಿಪುರುಷ್’ ಚಿತ್ರದ ಒಟ್ಟಾರೆ ಲೈಫ್‌ಟೈಮ್‌ ಕಲೆಕ್ಷನ್ ದಾಖಲೆಯನ್ನು ಸಂಪೂರ್ಣವಾಗಿ ಉಡೀಸ್ ಮಾಡಿದೆ.

ಎರಡು ವರ್ಷಗಳ ನಂತರ ಪಾರ್ಟ್ 2‌ ರಿಲೀಸ್‌

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ (DNEG) ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಮಹಾಕಾವ್ಯವು ಎರಡು ಭಾಗಗಳಲ್ಲಿ ಮೂಡಿಬರುತ್ತಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ಲಂಕೇಶ ರಾವಣನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ನಟಿಸಿರುವ ಮೊದಲ ಭಾಗವು ನವೆಂಬರ್ 5ರಂದು ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ದೀಪಾವಳಿಯ ಸಾಲು ಸಾಲು ರಜೆಗಳಿರುವುದರಿಂದ ಬಾಕ್ಸ್ ಆಫೀಸ್ ಗಳಿಕೆ ಇನ್ನಷ್ಟು ಜಾಸ್ತಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಚಿತ್ರದ ಎರಡನೇ ಭಾಗವು 2028ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ.