ಪ್ರಸ್ತುತ ಕನ್ನಡ ಚಿತ್ರರಂಗದ ಅದ್ಭುತ ನಟರಲ್ಲಿ ರಂಗಾಯಣ ರಘು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕಾಮಿಡಿ ಇರಲಿ, ಸೆಂಟಿಮೆಂಟ್ ಇರಲಿ ಅಥವಾ ಕ್ರೂರ ವಿಲನ್ ಪಾತ್ರವೇ ಇರಲಿ, ಕೊಟ್ಟ ಪಾತ್ರಕ್ಕೆ ಜೀವ ತುಂಬುವುದು ಅವರಿಗೆ ಲೀಲಾಜಾಲ. 'ದುನಿಯಾ', 'ಅಣ್ಣ ಬಾಂಡ್', 'ರೋಮಿಯೋ', 'ಪರಮಾತ್ಮ', ಇತ್ತೀಚಿನ ʻಶಾಖಾಹಾರಿʼ ಚಿತ್ರದವರೆಗೂ ಅವರು ತಮ್ಮ ವಿಶಿಷ್ಟ ನಟನೆಯ ಮೂಲಕ ಪ್ರೇಕ್ಷಕರನ್ನು ನಗಿಸಿದ್ದಾರೆ, ಅಳಿಸಿದ್ದಾರೆ. ಇಂತಹ ಸಕಲಕಲಾವಲ್ಲಭ ಇದೀಗ ವಿಭಿನ್ನ ಪಾತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಟೈಟಲ್ ಮೂಲಕವೇ ಭಾರಿ ಕುತೂಹಲ ಮೂಡಿಸಿರುವ 'ದೇವಿ ಮಹಾತ್ಮೆ' ಸಿನಿಮಾದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದ ರೋಚಕ ಟೀಸರ್ ಈಗ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಟೀಸರ್ ನೋಡಿದವರು ರಂಗಾಯಣ ರಘು ಅವರ ಒಂದೊಂದು ಎಕ್ಸ್‌ಪ್ರೆಷನ್ಸ್‌ಗೆ ಥ್ರಿಲ್ ಆಗಿ ಹೋಗಿದ್ದಾರೆ.
ಸಸ್ಪೆನ್ಸ್-ಥ್ರಿಲ್ಲರ್ ಮಾದರಿಯ ದೇವಿ ಮಹಾತ್ಮೆ
ʻಮರ್ಯಾದೆ ಪ್ರಶ್ನೆʼ ಖ್ಯಾತಿಯ ನಿರ್ದೇಶಕ ನಾಗರಾಜ್ ಸೋಮಯಾಜಿ 'ದೇವಿ ಮಹಾತ್ಮೆ' ಚಿತ್ರದ ಮೂಲಕ ಅತ್ಯಂತ ವಿಶಿಷ್ಟ ಹಾಗೂ ಗಂಭೀರ ಕಥೆಯೊಂದನ್ನು ಹೊತ್ತು ತಂದಿದ್ದಾರೆ ಎಂಬುದು ಟೀಸರ್ ನೋಡಿದರೆ ಸ್ಪಷ್ಟವಾಗುತ್ತದೆ. ಕೇವಲ 1 ನಿಮಿಷ 05 ಸೆಕೆಂಡ್‌ಗಳ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಅಂಶಗಳಿರುವ ಈ ಟೀಸರ್ ಪ್ರೇಕ್ಷಕರಲ್ಲಿ ರೋಮಾಂಚನದ ಜತೆಗೆ ಜೊತೆಗೆ ಕುತೂಹಲ ಮೂಡಿಸಿದೆ.
ಸಮುದ್ರ ತೀರದ ಹಿನ್ನೆಲೆ, ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯಾದ 'ಹುಲಿ ವೇಷ'ದ ಝಲಕ್ ಮತ್ತು ರಂಗಾಯಣ ರಘು ಅವರ ಇಂಟೆನ್ಸ್ ಆದಂತಹ ನಟನೆ ಈ ಟೀಸರ್‌ನ ಪ್ರಮುಖ ಹೈಲೈಟ್ಸ್. ಇದಕ್ಕೆ ಪೂರಕವಾಗಿ ಲಿಕಿತ್ ಪ್ರಸಾದ್ ಶೆಟ್ಟಿ ಅವರ ಹಿನ್ನೆಲೆ ಸಂಗೀತ ದೃಶ್ಯಗಳ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ದೇವಿ ಮಹಾತ್ಮೆಗಾಗಿ ಕೆಲಸ ಮಾಡಿದ ಪವರ್‌ಫುಲ್ ಟೀಮ್
ಈ ಚಿತ್ರದಲ್ಲಿ ರಂಗಾಯಣ ರಘು ಅವರಿಗೆ ಸಾಥ್ ನೀಡಲು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿ ಡಿ ಸತೀಶ್ ಚಂದ್ರ, ಪ್ರಶಾಂತ್ ಹಿರೇಮಠ, ಆದಿತ್ಯ ರಾಜ್ ರಘು ಪಾಂಡೇಶ್ವರ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ರಂಗಾಯಣ ರಘು ನಟನೆಯ 400ನೇ ಸಿನಿಮಾದ ಟೈಟಲ್ ರಿವೀಲ್; ಸಾಥ್ ನೀಡಿದ ʻಡಾಲಿʼ ಧನಂಜಯ್
ನಾಗರಾಜ್ ಸೋಮಯಾಜಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ, ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಜೊತೆಯಾಗಿದ್ದಾರೆ. ʻಯುವಿಜಿ ಸ್ಟುಡಿಯೋʼ ಬ್ಯಾನರ್‌ನಡಿ ವಿದ್ಯಾ ಗಾಂಧಿರಾಜನ್ ಹಾಗೂ ಗಾಂಧಿರಾಜನ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಸ್‌ಕೆ ರಾವ್ ಅವರ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ. ಸದ್ಯ ಟೀಸರ್ ಮೂಲಕವೇ ಸದ್ದು ಮಾಡುತ್ತಿರುವ 'ದೇವಿ ಮಹಾತ್ಮೆ', ರಂಗಾಯಣ ರಘು ಅವರ ನಟನಾ ವೃತ್ತಿಜೀವನಕ್ಕೆ ಮತ್ತೊಂದು ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ.